ಸುದ್ದಿ ಸಂಕ್ಷೇಪ
ಮಾಸಾಂತ್ಯಕ್ಕೆ ಬಿಜೆಪಿ ಸೇರ್ಪಡೆ ನಿರ್ಧಾರ
ಹಾವೇರಿ: ಬಿಜೆಪಿ ಸೇರುವ ಬಗ್ಗೆ ಈ ತಿಂಗಳ ಅಂತ್ಯದಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಪ್ರಸ್ತುತ ರಾಜಕಾರಣದಲ್ಲಿ ಗೊಂದಲದ ವಾತಾವರಣವಿದ್ದು, ಈ ತಿಂಗಳ ಅಂತ್ಯಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ. ಆಗ ರಾಜಕೀಯ ನಡೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ತಾವು ಬಿಜೆಪಿಗೆ ಸೇರ್ಪಡೆ ಕುರಿತು ಚರ್ಚಿಸುವುದೇನಿದ್ದರೂ ಅದು ರಾಷ್ಟ್ರೀಯ ನಾಯಕರೊಂದಿಗೆ ಮಾತ್ರ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರೊಬ್ಬರ ಕುಟುಂಬದ ಸದಸ್ಯರ ಅಂತ್ಯ ಸಂಸ್ಕಾರಕ್ಕಾಗಿ ಸೋಮವಾರ ರಾಜನಾಥ ಸಿಂಗ್ ಅವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದರೇ ಹೊರತು ತಮ್ಮ ಜತೆ ರಾಜಕಾರಣ ಕುರಿತು ಮಾತನಾಡಲು ಅಲ್ಲ ಎಂದು ಬಿಎಸ್ವೈ ಸ್ಪಷ್ಟಪಡಿಸಿದರು.
ರೈತ ಕುಟುಂಬಕ್ಕೆ ಪರಿಹಾರ
ಸವಣೂರು: ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಹಾವು ಕಡಿದು ಮೃತಪಟ್ಟವರ ಕುಟುಂಬಕ್ಕೆ ತಲಾ ರು. 1 ಲಕ್ಷ ಪರಿಹಾರದ ಚೆಕ್ನ್ನು ಜಿಪಂ ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡ್ರ ವಿತರಿಸಿದರು. ಚನ್ನಬಸಪ್ಪ ಅಂಗಡಿ, ಡೊಂಬರಮತ್ತೂರ ಗ್ರಾಮದ ಹನುಮಂತಪ್ಪ ಹರಿಜನ ಕುಟುಂಬಕ್ಕೆ ಪರಿಹಾರ ನೀಡಲಾಯಿತು.
ರೈತರ ಸಮಸ್ಯೆಗೆ ಸ್ಪಂದಿಸಿ: ಶೋಭಾ ನಿಸ್ಸೀಮಗೌಡ್ರ
ಸವಣೂರು: ರೈತ ದಿನ ಆಚರಿಸುವುದಕ್ಕಿಂತ ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಅಗತ್ಯ ಎಂದು ಜಿಪಂ ಉಪಾಧ್ಯಕ್ಷೆ ಡಾ ಶೋಭಾ ನಿಸ್ಸೀಮಗೌಡ್ರ ಹೇಳಿದರು. ರೈತ ದಿನಾಚರಣೆ ಅಂಗವಾಗಿ ಆತ್ಮಾ ಯೋಜನೆ ಅಡಿ ಕಿಸಾನಗೋಷ್ಠಿ ಉದ್ಘಾಟಿಸಿ, ಸರ್ಕಾರಗಳು ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ನಿಗದಿ ಮಾಡಬೇಕು. ಕೃಷಿ ಸಲಕರಣೆ, ಬೀಜ, ಗೊಬ್ಬರ ಕಡಿಮೆ ದರದಲ್ಲಿ ನೀಡಬೇಕೆಂದರು. ತಾಪಂ ಅಧ್ಯಕ್ಷ ರಮೇಶ ಅರಗೋಳ ಅಧ್ಯಕ್ಷತೆ ವಹಿಸಿದ್ದರು. ಸಾವಯವ ಕೃಷಿಕ ಚಂದ್ರಶೇಖರ ಕನವಳ್ಳಿ, ಕೃಷಿಕ ಸಮಾಜದ ಅಧ್ಯಕ್ಷ ಶಿವಪುತ್ರಪ್ಪ ಸಪಗಾಯಿ, ವಿ.ಟಿ. ಬ್ಯಾಡಗಿ, ಎನ್.ಎನ್. ತಿಪ್ಪಕ್ಕನವರ, ಬಸವರಾಜ ಮಲ್ಲೂರ, ರಾಯಪ್ಪ ಸವೂರ, ರುದ್ರಗೌಡ ಪಾಟೀಲ, ಎಂ.ವಿ. ದೇಸಾಯಿ, ಎಂ.ಕೆ. ಬಿಜ್ಜೂರ, ಚಿದಾನಂದ ಬಡಿಗೇರ ಇದ್ದರು.
ಪರೀಕ್ಷೆಗೆ ತರಬೇತಿ
ಹಾವೇರಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸ್ಟಾಫ್ ಸೆಲೆಕ್ಷನ್ ಕಮೀಷನ್ನ ಮಲ್ಟಿ ಟಾಸ್ಕಿಂಗ್ (ನಾನ್-ಟೆಕ್ನಿಕಲ್) ಸ್ಟಾಫ್ ಹುದ್ದೆ ಭರ್ತಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಡಿ. 26ರಿಂದ 30ರ ವರೆಗೆ ಹಾವೇರಿಯ ಬಸವೇಶ್ವರದ ಕರಡಿ ಬಿಲ್ಡಿಂಗ್ನಲ್ಲಿ (ಕೆಎಲ್ಇ ಶಾಲೆ ಎದುರು) ಉಚಿತ ಪೂರ್ವಭಾವಿ ತರಬೇತಿ ಏರ್ಪಡಿಸಲಾಗಿದೆ. ಆಸಕ್ತರು ಡಿ. 26 ಬೆಳಗ್ಗೆ 10 ಗಂಟೆಗೆ ಹಾಜರಾಗಬೇಕೆಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ. ವಿವರಗಳಿಗೆ ದೂ. 08375-249291 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

