ಚರಣಸಿಂಗ್ ಸೇವೆ ಶ್ಲಾಘನೀಯ: ರಾಜೇಂದ್ರ
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 27
ಮಾಜಿ ಪ್ರಧಾನಿ ಚೌಧರಿ ಚರಣ ಸಿಂಗ್ ಕೃಷಿ ವಲಯದಲ್ಲಿ ಸಲ್ಲಿಸಿದ ಸೇವೆ ಶ್ಲಾಘನೀಯವಾಗಿದೆ. ಅವರ ಜನ್ಮದಿನವನ್ನು ರೈತ ದಿನವನ್ನಾಗಿ ಕೃಷಿ ಇಲಾಖೆ ಅನೇಕ ವರ್ಷಗಳಿಂದ ಆಚರಿಸುತ್ತಿದೆ ಎಂದು ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ ಹೇಳಿದರು.
ಕೃಷಿ ಇಲಾಖೆಯ ಆತ್ಮ ಯೋಜನೆ, ತಾಲೂಕು ಕೃಷಿಕ ಸಮಾಜ ಹಾಗೂ ಕೃಷಿ ಪರಿಕರ ಮಾರಾಟಗಾರರ ಸಂಘದ ಆಶ್ರಯದಲ್ಲಿ ರೈತ ದಿನಾಚರಣೆ ಅಂಗವಾಗಿ ಕಿಸಾನ್ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೈತ ಹೋರಾಟಗಳ ಮೂಲಕ ರಾಜಕೀಯ ಪ್ರವೇಶಿಸಿದ ಚೌಧರಿ ಚರಣ ಸಿಂಗ್, 1973ರಲ್ಲಿ ಎಪಿಎಂಸಿ ಬಿಲ್ ಜಾರಿಗೆ ತಂದರು. ರೈತರನ್ನು ದಲ್ಲಾಳಿಗಳ ಶೋಷಣೆಯಿಂದ ಮುಕ್ತಗೊಳಿಸಲು ಇದು ನೆರವಾಯಿತು. ಬಳಿಕ ಎಲ್ಲ ರಾಜ್ಯಗಳಲ್ಲೂ ಈ ಕಾಯ್ದೆ ಜಾರಿಗೊಳಿಸಲಾಯಿತು. ಖಾಸಗಿ ಲೇವಾದೇವಿಗಾರರು ಮತ್ತು ಹಣಕಾಸು ಸಂಸ್ಥೆಗಳಿಂದ ರೈತರಿಗೆ ಆಗುತ್ತಿದ್ದ ಶೋಷಣೆಯ ವಿರುದ್ಧ ಹೋರಾಡಿಯೂ ಅವರು ಯಶಸ್ವಿಯಾದರು ಎಂದು ಹೇಳಿದರು.
ಬೆಳೆವಿಮೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ, ರೈತರ ಸಾಲಕ್ಕೆ ಬೆಳೆ ವಿಮೆ ಪರಿಹಾರದ ಹಣ ಜಮೆ ಮಾಡಿಕೊಳ್ಳಬಾರದು. ಕೃಷಿ ಸಾಲವೇ ಬೇರೆ. ಬೆಳೆ ವಿಮೆಯೇ ಬೇರೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ರೈತ ಸಂಘದ ಸದಸ್ಯ ಶಿವಬಸಪ್ಪ ಗೋವಿಯವರು ಮಾತನಾಡಿ, ತಾಲೂಕಿನ ರೈತರೆಲ್ಲ ಸೇರಿ ರೈತ ದಿನ ಆಚರಿಸಬೇಕು. ಬೆಳೆವಿಮೆ, ಬೆಂಬಲ ಬೆಲೆ ಮುಂತಾದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ ಕಾವೇರಿ ಬಿರಾದಾರ ಹಾಗೂ ಡಾ ಗೀತಾ ತಾಮಗಳೆ, ರೈತರಿಗೆ ಕೃಷಿಗೆ ಸಂಬಂಧಿಸಿದಂತೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವ ಮಾರ್ಗ, ಹಿಂಗಾರು ಬೆಳೆಗಳಿಗೆ ತಗಲುವ ರೋಗ ಮತ್ತು ಕೀಟಗಳನ್ನು ನಿಯಂತ್ರಿಸುವ ಕುರಿತು ತಾಂತ್ರಿಕ ಮಾಹಿತಿ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಡಿ.ಕೆ. ಮಾತನಾಡಿದರು. ತಾಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ವೈ.ವಿ. ಟೊಂಕದ, ರೈತ ಸಂಘದ ಅಧ್ಯಕ್ಷ ಸುರೇಶ ಚಲವಾದಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಗದೀಶ ಕರ್ಜಗಿ, ನಿರ್ದೇಶಕ ಮಲ್ಲೇಶಪ್ಪ ಮತ್ತೀಹಳ್ಳಿ, ಬಸವರಾಜ ಹಾದೀಮನಿ, ಪ್ರಕಾಶ ಹಂದ್ರಾಳ, ಶಿವಪುತ್ರಪ್ಪ ಶಿವಣ್ಣನವರ, ಕೃಷಿ ಇಲಾಖೆಯ ಸಿ.ಐ. ತಿಮ್ಮಾಪುರ, ಕೊಟ್ರೇಶಿ ಗೆಜ್ಲಿ, ಶಿವಕುಮಾರ ಲಕ್ಷಶೆಟ್ಟರ ಇದ್ದರು.
ಆತ್ಮ ಯೋಜನೆ ತಾಲೂಕು ತಾಂತ್ರಿಕ ವ್ಯವಸ್ಥಾಪಕ ವೈ. ಬಿ. ಬೇಂದ್ರೆ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

