ಹಾವೇರಿ

ಡಿಸಿ ಕಚೇರಿ ಮುಂದೆ ಅಂಗವಿಕಲರ ಧರಣಿ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 29
ಅಂಗವಿಕಲರ ಅನುದಾನದಡಿ ನೀಡುವ ಯಂತ್ರಚಾಲಿತ ವಾಹನಗಳನ್ನು ಜಿಲ್ಲಾ ಪಂಚಾಯ್ತಿಗೆ ಬಿಡುಗಡೆ ಮಾಡುವುದು ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೂರಾರು ಅಂಗವಿಕಲರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಯೋಜನೆಗಳನ್ನು ಫಲಾನುಭವಿಗೆ ತಲುಪಿಸಲು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಹಾಗೂ ಅಂಗವಿಕಲರ ಬಗ್ಗೆ ತಾರತಮ್ಯ ಮಾಡುವ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಅಂಗವಿಕಲರ ಸಂಘದ ಜಿಲ್ಲಾ ಅಧ್ಯಕ್ಷ ಪುಟ್ಟಪ್ಪ ಜಲಧಿ ಮಾತನಾಡಿ, ಅಂಗವಿಕಲರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಂಡು ಬೇಡಿಕೆ ಈಡೇರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಅಂಗವಿಕಲರ ಕಲ್ಯಾಣ ಇಲಾಖೆ ನಗರದಿಂದ 8 ಕಿ.ಮೀ. ದೂರವಿದ್ದು, ಅಲ್ಲಿಗೆ ತೆರಳಲು ವಾಹನ ವ್ಯವಸ್ಥೆಯಿಲ್ಲ. ಹೀಗಾಗಿ, ಅಂಗವಿಕಲ ಕಲ್ಯಾಣ ಇಲಾಖೆಯನ್ನು ನಗರದ ಹಳೆ ಕೋರ್ಟ್ ಕಟ್ಟಡಕ್ಕೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು.
ಇಂದಿರಾ ಆವಾಸ್ ಯೋಜನೆ, ಆಶ್ರಯ ಯೋಜನೆಯಡಿ ಅಂಗವಿಕಲರಿಗೆ ಶೇ. 5ರಷ್ಟು ಮೀಸಲಾತಿ ಇದೆ. ಆದರೆ ಪಟ್ಟಣ ಪಂಚಾಯ್ತಿ, ಗ್ರಾಪಂ ಅಧಿಕಾರಿಗಳು ಮೀಸಲಾತಿ ನೀಡದೆ ಅಂಗವಿಕಲರನ್ನು ಸೌಲಭ್ಯದಿಂದ ವಂಚಿತರನ್ನಾಗಿಸಿದ್ದಾರೆ ಎಂದು ದೂರಿದರು.
ನಿವೇಶನ ಹಂಚಿಕೆಯಲ್ಲಿ ಅಂಗವಿಕಲರಿಗೆ ಶೇ. 10ರಷ್ಟು ಮೀಸಲಾತಿ ಕಲ್ಪಿಸಬೇಕು. ಅಂಗವಿಕಲರ ಬಸ್‌ಪಾಸ್ ದರ ಕಡಿತಗೊಳಿಸಿ ರಾಜ್ಯಾದ್ಯಂತ ಪ್ರಯಾಣಿಸಲು ಅವಕಾಶ ಒದಗಿಸಬೇಕು. ಅರ್ಹ ಅಂಗವಿಕಲರಿಗೆ ತಮಿಳುನಾಡು ಮಾದರಿಯಲ್ಲಿ ಅಂತ್ಯೋದಯ ಪಡಿತರ ಚೀಟಿ ಜತೆಗೆ ಉಚಿತ ರೇಷನ್ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಅವರಿಗೆ ಮನವಿ ಸಲ್ಲಿಸಲಾಯಿತು. ಅಂಗವಿಕಲರ ಸಂಘದ ರಾಜ್ಯಾಧ್ಯಕ್ಷ ಅಲ್ಲಾಭಕ್ಷ ಹರಿಹರ, ಅಂಗವಿಕಲರ ಒಕ್ಕೂಟದ ರಾಜ್ಯಾಧ್ಯಕ್ಷ ಐ.ಎಂ. ಕಚವಿ, ಜಿಲ್ಲಾ ಉಪಾಧ್ಯಕ್ಷ ಮೌನೇಶ ಬಡಿಗೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲೇಶ ದೇಶಗತ್ತಿ, ಜಂಟಿ ಕಾರ್ಯದರ್ಶಿ ವೀರನಗೌಡ ಪಾಟೀಲ, ಸವಣೂರು ತಾಲೂಕು ಅಧ್ಯಕ್ಷ ಬಸವರಾಜ ಕುಂದಗೋಳ, ಕೃಷ್ಣ ಆರೇರ, ಹಾನಗಲ್ ತಾಲೂಕು ಅಧ್ಯಕ್ಷ ಪರಶುರಾಮ ಉಳ್ಳಿಕಾಶಿ, ಬ್ಯಾಡಗಿ ಅಧ್ಯಕ್ಷ ಪಾಂಡುರಂಗ ಸುತಾರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.