ಹಾವೇರಿ

ಸಾಧಕನಿಂದ ಕಲಾ ಸೃಷ್ಟಿ: ಡಾ.ವೇಣುಗೋಪಾಲ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಡಿ. 30
ಕವಿಯಾಗುವ ಹಂಬಲ, ತುಡಿತಗಳು ಕ್ರಿಯಾಶೀಲತೆಯಾಗಿ ಸಂಕಲ್ಪ ಹೊಂದಿದರೆ ಬರೆಯುವ ಸಾಲುಗಳು ಭವ್ಯ ಪರಂಪರೆಯನ್ನು ಬಿಂಬಿಸುವ ಕಾವ್ಯವಾಗಲು ಸಾಧ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ೤ ಸಿ.ವಿ. ವೇಣುಗೋಪಾಲ ನುಡಿದರು.
ರಾಣಿಬೆನ್ನೂರಿನಲ್ಲಿ ಗಾಯತ್ರಿ ವಸಂತ ಪ್ರಕಾಶನ, ಕನ್ನಡ ಸಾಹಿತ್ಯ ಪರಿಷತು, ಜಿಲ್ಲಾ ಪದವಿಪೂರ್ವ ಕಾಲೇಜುಗಳು ಇಂಗ್ಲಿಷ್ ಉಪನ್ಯಾಸಕರ ಸಂಘ ಏರ್ಪಡಿಸಿದ ಕವಯಿತ್ರಿ ಅನಿತಾ ಹೊಸಮನಿ ಅವರ 'ಅಮ್ಮವೆನ್ವ ಅಮೃತ' ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಲಾಭಿವ್ಯಕ್ತಿ ಎಲ್ಲರಿಗೂ ಸಾಧ್ಯವಿಲ್ಲ. ಬರವಣಿಗೆಗೆ ನಿಷ್ಠೆ ಬೇಕು. ಇದೊಂದು ನಿರಂತರ ಪ್ರಕ್ರಿಯೆ. ಸಾಧಕನು ಮಾತ್ರ ಕಲೆಯನ್ನು ಸೃಷ್ಟಿಸಬಲ್ಲ. ನಮ್ಮೊಳಗಿನ ತುಡಿತಗಳು, ಸಾಮಾಜಿಕ ಕಳಕಳಿ ಕಾವ್ಯವಾಗಬೇಕು. ಕೇವಲ ತಾಯಿಯ ಪ್ರೀತಿಯನ್ನಿಟ್ಟುಕೊಂಡು 105 ಕವನಗಳನ್ನು ರಚಿಸಿದ ಅನಿತಾ ಹೊಸಮನಿ ಅವರ ಕಾವ್ಯ ಒಂದು ತಪಸ್ಸು. ಅಮ್ಮನ ಬಗೆಗಿನ ನಿರ್ಮಲ ಭಾವ ಬಂಧುರವಾಗಿದೆ ಎಂದರು.
ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ ಕೃತಿ ಕುರಿತು ಮಾತನಾಡಿ, ತಾಯಿಗೆ ಭಾರತೀಯ ಸಂಸ್ಕೃತಿಯಲ್ಲಿ ಗೌರವದ ಸ್ಥಾನವಿದೆ. ಅಮ್ಮ ಎಂಬುದೇ ಒಂದು ವಿಶಿಷ್ಟ ಸಂವೇದನೆ. ಅನಿತಾ ಅವರ ಕವನ ಸಂಕಲದ ಪ್ರತಿ ಪುಟ ಭಾವ ಅಮ್ಮನಿಂದ ಅಲಂಕರಿಸಿದೆ. ಸೃಷ್ಟಿ ಸಂಸ್ಕೃತಿಯಲ್ಲಿ ಅಮ್ಮ ಬರಿ ಮಾತಲ್ಲ, ಮೌಲ್ಯ. ಅವಳೇ ದೇವರು, ಗುರು ಸರ್ವಸ್ವ ಎಂಬ ಭಾವ ಬಿಂಬಿತವಾಗಿದೆ. ತಾಯಿ ಸಮುದಾಯದ ಸಂಸ್ಕಾರಕ ಪ್ರತಿರೂಪ ಎಂಬ ಭಾವ ವ್ಯಕ್ತವಾಗಿದೆ ಎಂದರು.
ಡಾ೤ ಸಿ.ವಿ. ವೇಣುಗೋಪಾಲ, ಸಂಗೀತ ವಿದ್ವಾನ್ ಉತ್ತರಾಚಾರ್ ಕಮ್ಮಾರ, ಡಾ೤ ಬಿ.ವೈ. ಪಾಟೀಲ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಉತ್ತರಾಚಾರ್ ಕಮ್ಮಾರ ಮಾತನಾಡಿ, ಕಲಿಕೆಗೆ ವಯೋವಾನವಿಲ್ಲ. ಆಸಕ್ತಿ ಮುಖ್ಯ ಎಂದರು.
ಕವಯತ್ರಿ ಅನಿತಾ ಹೊಸಮನಿ ಮಾತನಾಡಿ, ಬರವಣಿಗೆಯಲ್ಲಿ ಸ್ವಂತಿಕೆ ಬೇಕು. ನಮ್ಮ ಅನುಭವಗಳೇ ಕಾವ್ಯವಾಗಬೇಕು. ಇದು ಸಂಭ್ರಮವಾಗಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಅಧ್ಯಕ್ಷತೆ ವಹಿಸಿದ್ದರು. ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಎಸ್. ಬಳ್ಳಾರಿ, ವೆಂಕಟೇಶ, ಡಾ೤ ಬಿ.ವೈ. ಪಾಟೀಲ, ಪ್ರೊ೤ ವಿ.ಜಿ. ಶಾಂತಪುರಮಠ ಮಾತನಾಡಿದರು. ಗಣ್ಯರಾದ ಸಿ.ಎನ್. ಜಗದೇವನವರ, ಜೆ.ಎಂ. ಮಠದ, ಪಿ.ವೈ. ಗುಡಗುಡಿ, ಜಿ.ಪಿ. ಪೂಜಾರ, ಜಿ.ಎಂ. ಕುಲಕರ್ಣಿ, ಬಿ.ಐ. ಹುನಗುಂದ. ಎ.ಎಸ್. ಜಗದೀಶಪ್ಪ, ರವಿ ಜಡೆಗೊಂಡರ, ದೊಡ್ಡಮನಿ ಇದ್ದರು. ಅಕ್ಷತಾ ಚಲವಾದಿ, ನಾಗಶ್ರೀ ಭಟ್, ಭಾರ್ಗವಿ ಪುರೋಹಿತ, ಸೀಮಾ ಹರ್ತಿ ಕವನಗಳನ್ನು ಹಾಡಿದರು.
ಕಸಾಪ ರಾಣಿಬೆನ್ನೂರು ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಸಂಗಾಪುರ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಪದವಿಪೂರ್ವ ಕಾಲೇಜುಗಳು ಇಂಗ್ಲಿಷ್ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷ ಎಂ.ಕೆ. ಕಲ್ಲಜ್ಜನವರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಕಾಂತೇಶ ಸಿದ್ದಣ್ಣನವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.