ಹಾವೇರಿ

ಸೌಲಭ್ಯಕ್ಕೆ ಪೌರಕಾರ್ಮಿಕರ ಪ್ರತಿಭಟನೆ

Published On :

ಬ್ಯಾಡಗಿ: ಸೇವಾಭದ್ರತೆ, ವೇತನ ಪರಿಷ್ಕರಣೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಸ್ಥಳೀಯ ಪುರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಹಾಗೂ ನೀರು ವಿತರಕರು ಸೋಮವಾರ ಒಂದು ತಾಸಿಗೂ ಹೆಚ್ಚು ಕಾಲ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
ಪುರಸಭೆ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಗುತ್ತಿಗೆ ಪೌರಕಾರ್ಮಿಕರು, ಪುರಸಭೆ ಆಡಳಿತ ಮಂಡಳಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.  ಪ್ರತಿಭಟನಾಕಾರರನ್ನುದ್ದೇಶಿಸಿ ಪರಶುರಾಮ ಹರಿಜನ ಮಾತನಾಡಿ, ಹಿಂದಿನ ಗುತ್ತಿಗೆದಾರರು ಅಧಿಕ ಹಣಕ್ಕೆ ಟೆಂಡರ್ ಪಡೆದು ಪೌರಕಾರ್ಮಿಕರಿಗೆ ಮಾಸಿಕ ವೇತನ ರು. 4 ಸಾವಿರವನ್ನು 2 ವರ್ಷದಿಂದ ನೀಡುತ್ತಾ ಬಂದಿದ್ದಾರೆ. ಕಡಿಮೆ ಹಣದಲ್ಲಿ ಕುಟುಂಬ ನಿರ್ವಹಣೆ ಹೇಗೆ? ಎಂದು ಪ್ರಶ್ನಿಸಿದರು.
ಗುತ್ತಿಗೆದಾರನಿಂದ ಮೋಸ: ಕೇಂದ್ರ ಕಾರ್ಮಿಕ ಇಲಾಖೆ ನಿಯಮದಂತೆ ಪ್ರತಿ ಕಾರ್ಮಿಕರಿಗೆ ಮಾಸಿಕ ರು. 6,080ಕ್ಕಿಂತ ಕಡಿಮೆ ವೇತನ ನೀಡುವಂತಿಲ್ಲ. ಆದರೆ ಹಿಂದಿನ ಗುತ್ತಿಗೆದಾರರು ಸೂಕ್ತ ವೇತನ ನೀಡದೆ ಮೋಸ ಮಾಡಿದ್ದಾರೆ. ಹಿಂದಿನ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಭವಿಷ್ಯನಿಧಿ ಮಾಯ: ದುರ್ಗೇಶ್ ಗೋಣೆಮ್ಮನವರ ಮಾತನಾಡಿ, ಕಾರ್ಮಿಕ ಇಲಾಖೆಯ ಅಧಿಸೂಚನೆ ಕೆಎಇ/152/ಎಲ್‌ಡಬ್ಲ್ಯೂಎ/ 208/21-02-2011 ಪ್ರಕಾರ ಕಾರ್ಮಿಕರ ಭವಿಷ್ಯನಿಧಿ ಖಾತೆ ಕಡ್ಡಾಯ ಕಾರ್ಮಿಕರ ಭವಿಷ್ಯ ನಿಧಿ ಖಾತೆಗೆ ರು. 840 ಜಮಾ ಮಾಡಬೇಕು. ಆದರೆ ಸರ್ಕಾರದ ಆದೇಶ ಧಿಕ್ಕರಿಸಿರುವ ಸ್ಥಳೀಯ ಪುರಸಭೆ ಮತ್ತು ಗುತ್ತಿಗೆದಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ರಾಜಕೀಯ ಬೆರೆಸದಿರಿ: ಮಾಸಿಕ ವೇತನ ರು. 6,080.50 ಮೊತ್ತಕ್ಕೆ 2013 ಫೆ. 1 ಹೊಸ ಗುತ್ತಿಗೆ ಅನುಮೋದನೆ ದೊರೆತಿದೆ. ಆದರೆ ಪುರಸಭೆ ಅಧಿಕಾರಿಗಳ ಜೊತೆ ಶಾಮೀಲಾಗಿರುವ ಹಿಂದಿನ ಗುತ್ತಿಗೆದಾರ ತನ್ನ ಪ್ರಭಾವ ಬೀರುವ ಮೂಲಕ ಅನುಮೋದನೆ ಪ್ರತಿ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ ಇಲ್ಲಸಲ್ಲದ ತಕರಾರು ಸಲ್ಲಿಸಿ ಅನಗತ್ಯ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಗೋಣೆಮ್ಮನವರ ಇದರಲ್ಲಿ ರಾಜಕೀಯ ಬೆರೆಸದಂತೆ ಮನವಿ ಮಾಡಿದರು.
ಸೇವಾಭದ್ರತೆ ನೀಡಿ: ಕುಮಾರ ಮಾಳಗಿ ಮಾತನಾಡಿ, ಕಾಯಂ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರಷ್ಟೇ ಶ್ರಮ ಗುತ್ತಿಗೆ ಕಾರ್ಮಿಕರೂ ಹಾಕುತ್ತಿದ್ದೇವೆ. ಆದರೆ ದುಡಿಮೆಗೆ ತಕ್ಕ ಹಣ ಸಿಗುತ್ತಿಲ್ಲ. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳುವ ಮೂಲಕ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಿ, ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿದರು.
12 ತಾಸು ಕೆಲಸ: ಫಕ್ಕೀರಪ್ಪ ಮಾಳಗಿ ಮಾತನಾಡಿ, ನಿಯಮದಂತೆ ದಿವಸಕ್ಕೆ ಕೇವಲ 8 ಗಂಟೆ ಕೆಲಸ ಮಾಡಬೇಕು. ಆದರೆ ಅಗತ್ಯಕ್ಕಿಂತ ಕಡಿಮೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡ ಗುತ್ತಿಗೆದಾರ ಇದ್ದವರನ್ನೇ 10ರಿಂದ 12 ಗಂಟೆಗೂ ಹೆಚ್ಚುಕಾಲ ದುಡಿಸಿಕೊಳ್ಳುತ್ತಿದ್ದಾರೆ. ಹೆಚ್ಚಿಗೆ ದುಡಿದದ್ದಕ್ಕೆ ಹಣ ನೀಡುತ್ತಿಲ್ಲ. ಇದನ್ನು ಪ್ರಶ್ನಿಸಿದರೆ ಕೆಲಸ ಕಳೆದುಕೊಳ್ಳುವ ಸ್ಥಿತಿ ಎದುರಾಗುತ್ತದೆ. ಅವುಗಳಿಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿದರು.
ಸ್ವಚ್ಛತಾ ಕಾರ್ಯ ಸ್ಥಗಿತ: ವೇತನ ಪರಿಷ್ಕರಣೆ ಆದೇಶ ಬರುವವರೆಗೂ ಕೆಲಸ ನಿರ್ವಹಿಸದಿರಲು ಪೌರ ಕಾರ್ಮಿಕರು ನಿರ್ಧರಿಸಿದರು. ಕಾರ್ಮಿಕರ ಸಮಸ್ಯೆಗಳು ಇತ್ಯರ್ಥ್ಯ ಆಗುವ ವರೆಗೆ ಕೆಲಸಕ್ಕೆ ಹೋಗುವುದಿಲ್ಲ ಎಂದು ಮುಖ್ಯಾಧಿಕಾರಿಗೆ ಲಿಖಿತ ಪತ್ರ ನೀಡಿ, ಪ್ರತಿಭಟನೆ ಮೊಟಕುಗೊಳಿಸಿದರು. ಗಂಗಮಾಳವ್ವ ನಡುವಿನಕೇರಿ, ಗುರುರಾಜ, ವಾಗೀಶ್ ಮಾಳಗಿ, ನಾಗರಾಜ ಹಳ್ಳಿ, ರಾಜು ಮಾಳಗಿ, ಶ್ರೀಧರ ಗೋಣೆಮ್ಮನವರ, ಗೋಣೆಪ್ಪ ಮಾಳಗಿ, ಮಂಜಪ್ಪ ಮಾಳಗಿ, ಪಾರವ್ವ ಹೊನ್ನಮ್ಮನವರ, ರತ್ನವ್ವ ಕಾಟೇನಹಳ್ಳಿ, ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.