ಜೂಟ್ ತಂತ್ರಜ್ಞಾನದಿಂದ ರಸ್ತೆ ನಿರ್ಮಾಣ
ಹಾನಗಲ್ಲ: ಜೂಟ್ ಆ್ಯಂಡ್ ಕ್ವಾಯರ್ ಎಂಬ ನೂತನ ತಂತ್ರಜ್ಞಾನ ಬಳಸಿಕೊಂಡು ಸೆಣಬು ಹಾಗೂ ನಾರು ಮಿಶ್ರಿತ ಸಾಮಗ್ರಿಗಳಿಂದ ರಸ್ತೆ ನಿರ್ಮಾಣ ಮಾಡುವ ಮೂಲಕ ದೀರ್ಘ ಬಾಳಿಕೆ ತಂತ್ರಜ್ಞಾನದ ಮತ್ತೊಂದು ಆವಿಷ್ಕಾರದ ಪ್ರಾಯೋಗಿಕ ರಸ್ತೆ ನಿರ್ಮಾಣ ಹಾನಗಲ್ಲ ತಾಲೂಕಿನಲ್ಲಿ ಪ್ರಾರಂಭಗೊಂಡಿದೆ.
ಪರಿಶೀಲನೆ, ಮೆಚ್ಚುಗೆ: ತಾಲೂಕಿನ ಗುಂಡೂರು-ದೇವರಹೊಸಪೇಟೆ ಮಾರ್ಗದ ರಸ್ತೆ ನಿರ್ಮಾಣದಲ್ಲಿ 5 ಕಿಮೀ ರಸ್ತೆಯನ್ನು ಜೂಟ್ ಆ್ಯಂಡ್ ಕ್ವಾಯರ್-ಸೆಣಬು-ನಾರು) ಸಾಮಗ್ರಿಗಳಿಂದ ಈ ನೂತನ ಜೂಟ್ ತಂತ್ರಜ್ಞಾನದ ರಸ್ತೆ ಕಾಮಗಾರಿ ಗುರುವಾರದಿಂದ ಆರಂಭಗೊಂಡಿದ್ದು, ಗೋಣಿತಟ್ಟನ್ನು ರಸ್ತೆ ಮೇಲೆ ಹಾಕಿ ನಿರ್ಮಿಸುವ ಈ ವಿಶಿಷ್ಟ ಮಾದರಿಯ ರಸ್ತೆ ಕಾಮಗಾರಿಯನ್ನು ಮಾಜಿ ಸಚಿವ ಸಿ.ಎಂ. ಉದಾಸಿ ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ದೀರ್ಘ ಕಾಲ ಬಾಳಿಕೆ: ಈ ಮೊದಲು ಹಾನಗಲ್ಲ ತಾಲೂಕಿನಲ್ಲಿ ಜಿಯೋಸೆಲ್ ನೂತನ ತಂತ್ರಜ್ಞಾನದ ರಸ್ತೆಗಳ ನಿರ್ಮಾಣ ಪ್ರಾಯೋಗಿಕವಾಗಿ ನಿರ್ಮಾಣಗೊಂಡು ಯಶಸ್ವಿಯಾದ ಹಿನ್ನೆಲೆಯಲ್ಲಿ ಈಗ ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳನ್ನು ಜೂಟ್ ಎಂಬ ನೂತನ ತಂತ್ರಜ್ಞಾನ ಬಳಸಿಕೊಂಡು ಸೆಣಬು ಹಾಗೂ ನಾರು ಮಿಶ್ರಿತ ಸಾಮಗ್ರಿಗಳಿಂದ ರಸ್ತೆ ನಿರ್ಮಾಣ ಮಾಡುವ ಮೂಲಕ ದೀರ್ಘ ಬಾಳಿಕೆಯ ರಸ್ತೆ ತಂತ್ರಜ್ಞಾನದ ಮತ್ತೊಂದು ಆವಿಷ್ಕಾರಕ್ಕೆ ಸಿದ್ಧತೆ ನಡೆದಿದೆ.
ನಿರ್ವಹಣಾ ವೆಚ್ಚ ಉಳಿತಾಯ: ಮಣ್ಣಿನ ಸಾಂದ್ರತೆ ಕಡಿಮೆ ಹಾಗೂ ಕಪ್ಪು ಮಣ್ಣು ಇರುವ ಪ್ರದೇಶಗಳಲ್ಲಿ, ರಸ್ತೆ ಜೌಳು ಹಿಡಿದು ತಗ್ಗು-ಗುಂಡಿಗಳು ನಿರ್ಮಾಣವಾಗುವ ಸಮಸ್ಯೆ ಪದೇ-ಪದೇ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟುವ ಉದ್ದೇಶದಿಂದ ಈ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ರಸ್ತೆ ಮೇಲೆ ಬಿದ್ದ ನೀರು ಅಲ್ಲಿಯೇ ಇಂಗುವುದರಿಂದ ಹಾಳಾಗುತ್ತಿದ್ದ ರಸ್ತೆಗಳು, ವಿನೂತನ ಜೂಟ್ ತಂತ್ರಜ್ಞಾನ ಬಳಕೆಯಿಂದಾಗಿ ನೀರು ನಿಲ್ಲದೇ ಉಸುಕು ಮತ್ತು ಸೆಣಬಿನ ಮೂಲಕ ಹೊರಸೂಸುವುದರಿಂದ ರಸ್ತೆ ದೀರ್ಘ ಕಾಲದವರೆಗೆ ಬಾಳಿಕೆ ಬರುತ್ತದೆ. ಅಲ್ಲದೆ ನಿರ್ವಹಣಾ ವೆಚ್ಚ ಉಳಿತಾಯವಾಗುತ್ತದೆ.
ಪಿಎಂಜಿಎಸ್ವೈ ಇಲಾಖೆ ನಿರ್ವಹಣೆ: ರಾಜ್ಯದ ವಿವಿಧೆಡೆಯ 42 ಸ್ಥಳಗಳಲ್ಲಿ ಜೂಟ್ ತಂತ್ರಜ್ಞಾನವನ್ನು ಏಕಕಾಲದಲ್ಲಿ ಪ್ರಾಯೋಗಿಕವಾಗಿ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಪಿಎಂಜಿಎಸ್ವೈ ಇಲಾಖೆ ವಹಿಸಿಕೊಂಡಿದ್ದು, ತಂತ್ರಜ್ಞಾನ ಅಳವಡಿಕೆಯ ತರಬೇತಿ ಪಡೆದಿರುವ ಪ್ರಧಾನಮಂತ್ರಿ ಗ್ರಾಮ ಸಡಖ್ ಯೋಜನೆಯ ಹಾನಗಲ್ಲ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ಎಂ.ವಿ. ಬಳಿಗಾರ ನಿರ್ಮಾಣದ ಉಸ್ತುವಾರಿ ವಹಿಸಿದ್ದಾರೆ.
ಕಾಂಕ್ರಿಟ್ ರಸ್ತೆಗಿಂತ ಕಡಿಮೆ ವೆಚ್ಚ: ವಿನೂತನ ತಂತ್ರಜ್ಞಾನದ ಈ ಜೂಟ್ ರಸ್ತೆ ನಿರ್ಮಾಣ ಅಷ್ಟೇನು ಕ್ಲಿಷ್ಟಕರವಲ್ಲ. ಮೊದಲಿಗೆ ರಸ್ತೆಯನ್ನು ಸಬ್ಗ್ರೇಡ್ ಮಾಡಿಕೊಂಡು 1 ಇಂಚು ಮರಳು, ಮೇಲೆ 4 ಮಿಮೀ ದಪ್ಪದ ಜೂಟ್ ತಂತ್ರಜ್ಞಾನದ ಗೋಣಿಚೀಲ ಹೊದಿಸಿ ಅದರ ಮೇಲ್ಗಡೆ ಒಂದು ಇಂಚು ಮರಳು, ಸಣ್ಣ ಪ್ರಮಾಣದ ಗೊರಚು ಮಿಶ್ರಿತ ಜಿಎಸ್ಬಿ(ಗ್ರಾನ್ಯುಲರ್ಸ್ ಬೇಸ್)ನಾಲ್ಕು ಪದರು ಹರಡುವುದು. ಇದರ ಮೇಲೆ ಶೇ. 40 ಜಲ್ಲಿ, ಶೇ. 60 ಗೊರಚು ಮಿಶ್ರಿತ ನಾಲ್ಕು ಇಂಚಿನ ಪದರು ಹಾಕಿ ನಂತರ ಡಾಂಬರೀಕರಣ ಮಾಡುವ ಈ ತಂತ್ರಜ್ಞಾನ ಪ್ರತಿ ಕಿಮೀ.ಗೆ ಸುಮಾರು ರು. 45 ಲಕ್ಷ ವೆಚ್ಚವಾಗುತ್ತದೆ. ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕಿಂತ ಕಡಿಮೆ ವೆಚ್ಚವಾಗಿದೆಂಬುದು ಗಮನಾರ್ಹ ಸಂಗತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

