ಹಾವೇರಿ

ಪಂಚಾಯತ್ ರಾಜ್ ವ್ಯವಸ್ಥೆ ಅಸ್ತಿತ್ವಕ್ಕೆ ಧಕ್ಕೆ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ.17
ಶಾಸಕರ ಅನಗತ್ಯ ಪ್ರವೇಶದಿಂದ ಕಲೆಕ್ಟರ್ ರಾಜ್‌ಗಿಂತ ಬಲಿಷ್ಠವಾದ ಪಂಚಾಯತ್ ರಾಜ್ ವ್ಯವಸ್ಥೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹೀಗಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರಿ ಸೌಲಭ್ಯಗಳು ತಲುಪದಂತಾಗಿವೆ ಎಂದು ಜನವಿಕಾಸ ಕರ್ನಾಟಕ ಸಂಸ್ಥೆಯ ರಾಜ್ಯಾಧ್ಯಕ್ಷ ವಿಲ್‌ಫ್ರೆಡ್ ಡಿಸೋಜ ವಿಷಾದ ವ್ಯಕ್ತಪಡಿಸಿದರು.
ಭಾನುವಾರ ಮೋಟೆಬೆನ್ನೂರಿನ ಬಳ್ಳಾರಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಪಂಚಾಯತ್ ರಾಜ್ ಸಬಲೀಕರಣದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಶಾಸನ ಬದ್ಧ ಹಕ್ಕು: ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ, ಹಳ್ಳಿಗಳ ಅಭಿವೃದ್ಧಿ ಅಲ್ಲಿನ ಜನರಿಂದ ಆಗಬೇಕೆಂಬ ಉದ್ದೇಶದಿಂದ, ಸಂವಿಧಾನದ 73ನೇ ಕಲಂಗೆ ತಿದ್ದುಪಡಿ ತರುವ ಮೂಲಕ ಪ್ರತ್ಯೇಕ ಪಂಚಾಯತ್ ರಾಜ್ಯ ವ್ಯವಸ್ಥೆ ಜಾರಿಗೊಳಿಸಿತು. ಆದರೆ, ಪ್ರತಿಯೊಂದರಲ್ಲೂ ಮೂಗು ತೂರಿಸುತ್ತಿರುವ ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ಗ್ರಾಪಂ ಸದಸ್ಯರ ಶಾಸನ ಬದ್ಧವಾದ ಅಧಿಕಾರವನ್ನು ಕ್ರಮೇಣ ಮೊಟಕುಗೊಳಿಸುವ ಪ್ರಯತ್ನ ನಡೆದಿದೆ ಎಂದರು.
ಶೇ. 70ರಷ್ಟು ಅಧಿಕಾರಗಳು: ಗ್ರಾಮಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಪ್ರಶ್ನಿಸುವ ಹಕ್ಕು ನ್ಯಾಯಾಲಯಕ್ಕೂ ಇಲ್ಲ. ಆದರೂ ದಬ್ಬಾಳಿಕೆ ನಡೆಸುತ್ತಿರುವ ಶಾಸಕರು ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಬದಲಾಯಿಸುವ ಮೂಲಕ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ. ಶೇ. 70ರಷ್ಟು ಅಭಿವೃದ್ಧಿ ಕಾಮಗಾರಿಗಳು ಅವರ ವ್ಯಾಪ್ತಿಯಲ್ಲಿ ಬರುತ್ತಿರುವುದರಿಂದ ಪಂಚಾಯತ್ ರಾಜ್ ವ್ಯವಸ್ಥೆ ಇದ್ದೂ ಇಲ್ಲದಂತಾಗಿದೆ ಎಂದರು.
ನಾಲ್ವರು ಸಚಿವರು: ರಾಜ್ಯದ 174 ತಾಲೂಕುಗಳಲ್ಲಿ ಇಂದಿಗೂ ಬೇರೆ ಇಲಾಖೆಗಳಿಂದ ಎರವಲು ಸೇವೆಯಿಂದ ಬಂದಿರುವ ಕಾರ್ಯನಿರ್ವಾಹಕ ಅಧಿಕಾರಿಗಳಿದ್ದಾರೆ. ಇಲಾಖೆ ಸಮಗ್ರ ಮಾಹಿತಿಯಿಲ್ಲದ ಅವರು ಕಾರ್ಯಕ್ರಮಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. 5 ವರ್ಷದಲ್ಲಿ ಸರ್ಕಾರದ 4 ಸಚಿವರು, 6 ಜನ ಅಧೀನ ಕಾರ್ಯದರ್ಶಿಗಳು ಬದಲಾಗಿದ್ದಾರೆ ಎಂದರು.
ಅನುದಾನ ಕೊರತೆ: ಪ್ರತಿವರ್ಷ ಕೇವಲ ರು. 8 ಲಕ್ಷ ಅನುದಾನ ನೀಡುವ ಸರ್ಕಾರ, ಅದರಲ್ಲಿ ಶೇ. 60ರಷ್ಟು ( 4.80 ಲಕ್ಷ) ವಿದ್ಯುತ್ ಬಲ್ಬ್ ಕಡಿತಗೊಳಿಸುತ್ತದೆ. ಇನ್ನುಳಿದ ಶೇ. 40 ( 3.20 ಲಕ್ಷ) ಹಣವನ್ನು ಸಿಬ್ಬಂದಿ ವೇತನಕ್ಕಾಗಿ ಮೀಸಲಿಟ್ಟಿದೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಎಲ್ಲಿಂದ ತರಬೇಕು. ಈ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳಿಸುವ ಕೆಲಸ ಕೇವಲ ಭಾಷಣದಲ್ಲೇ ಮುಕ್ತಾಯಗೊಳ್ಳುತ್ತಿದೆ ಎಂದರು.
ಜನವಿಕಾಸ ಕರ್ನಾಟಕದ ಜಿಲ್ಲಾಧ್ಯಕ್ಷ ಹೇಮಂತಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಜಿ.ಪಂ. ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮೋಟೆಬೆನ್ನೂರು ಗ್ರಾಪಂ ಅಧ್ಯಕ್ಷೆ ನೀಲಮ್ಮ ಗೊರವರ, ಉಪಾಧ್ಯಕ್ಷ ವಿಜಯ ಸವಣೂರು, ಗ್ರಾಪಂ ಸದಸ್ಯರ ಒಕ್ಕೂಟದ ಅಧ್ಯಕ್ಷ ಶಂಕರಪ್ಪ ಅಕ್ಕಿ, ಗಣೇಶ ಕುಲಕರ್ಣಿ, ಅನಿತಾ ಡಿಸೋಜಾ, ಶಿವಲಿಂಗಪ್ಪ ತಲ್ಲೂರ, ಲವೇಶ್ ಗಿರಿಯಮ್ಮನವರ, ಶಿವಾನಂದಯ್ಯ ಹಿರೇಮಠ, ಎಚ್.ಕೆ. ಚಂದ್ರಪ್ಪ, ಬಸಪ್ಪ ಕುರಿಯವರ, ಸತೀಶ್ ಕಾಡಶೆಟ್ಟಿಹಳ್ಳಿ, ಜಗದೀಶ ರೂಗಿ, ಸಿ.ವಿ. ಪಲ್ಲೇದ, ರತ್ನಮ್ಮ ಗುಡಿಮತ್ತಿಹಳ್ಳಿ, ಜಗದೀಶ ಕಣಗಲಬಾವಿ, ವನಿತಾ ಗುತ್ತಲ, ಇನ್ನಿತರರು ಉಪಸ್ಥಿತರಿದ್ದರು. ಶಂಕ್ರಪ್ಪ ಅಕ್ಕಿ ಸ್ವಾಗತಿಸಿದರು. ವಿ.ಎಚ್. ರೊಟ್ಟಿಗವಾಡ ಕಾರ್ಯಕ್ರಮ ನಿರೂಪಿಸಿದರು. ಸಿದ್ರಾಮಯ್ಯ ಹಿರೇಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.