ನೀರಿಗಾಗಿ ತತ್ತರಿಸಿದ ಶಿಗ್ಗಾಂವಿ
ಬಸವರಾದ ಹಿರೇಮಠ
ಶಿಗ್ಗಾಂವಿ: ಇಪ್ಪತ್ತ್ಮೂರು ವಾರ್ಡುಗಳಿರುವ ಶಿಗ್ಗಾಂವಿ ಪುರಸಭೆ 28, 216 ಮತದಾರರನ್ನು ಹೊಂದಿರುವ ಈ ಪುರಸಭಾ ವ್ಯಾಪ್ತಿಯಲ್ಲಿ ರು. 30 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಆದಾಗ್ಯೂ, ಕುಡಿಯುವ ನೀರಿನ ಸಮಸ್ಯೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಪರಿಹಾರ ಕಂಡಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಸುಧಾರಣೆಗೆ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅನುದಾನದ ಹೊಳೆಯನ್ನೇ ಹರಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಆದರೆ, ಅಧಿಕಾರಿ ಹಾಗೂ ಜನಸಾಮಾನ್ಯರ ಅಸಹಕಾರದಿಂದಾಗಿ ಕುಡಿಯುವ ನೀರಿನ ಬವಣೆ ಇನ್ನೂ ಈ ಪುರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ಜನರಿಗೆ ತಪ್ಪಿಲ್ಲ.
ಮುಖ್ಯಮಂತ್ರಿಗಳ ವಿಶೇಷ ಅನುದಾನ, ಶಾಸಕರ ಅನುದಾನ, ಇತರ ಅನುದಾನದಡಿ ಪುರಸಭೆಗೆ ಒಟ್ಟು ರು. 30 ಕೋಟಿಗೂ ಹೆಚ್ಚು ಅನುದಾನ ಲಭ್ಯವಾಗಿದೆ. ಈ ಪೈಕಿ ಹಳೆ ಬಸ್ ನಿಲ್ದಾಣದ ಹಿಂದುಗಡೆ ರು. 10 ಲಕ್ಷಗಳಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಿಸಲಾಗಿದೆ. ಪುರಸಭೆಯಾದ್ಯಂತ ಎಲ್ಲ ರಸ್ತೆಗಳನ್ನು ಕಾಂಕ್ರಿಟ್ ಮಾಡಲಾಗಿದೆ.
ಒಳಚರಂಡಿ, ಪ್ರಮುಖ ರಸ್ತೆ, ಒಳ ರಸ್ತೆ ನಿರ್ಮಾಣಕ್ಕೆ ಸಾಕಷ್ಟು ಅನುದಾನ ವ್ಯಯಿಸಲಾಗಿದೆ. ಇಡೀ ಪುರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ಜನರಿಗೆ ನಾಗನೂರು ಕೆರೆಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ನೀರಿನ ವ್ಯವಸ್ಥೆ ಸುಧಾರಣೆಗೆ ಕೈಗೊಂಡಿರುವ ಕಾರ್ಯಕ್ಕೆ ಸ್ಥಳೀಕರು ಸೂಕ್ತವಾಗಿಸಹಕರಿಸದೆ ಕೆಲವೆಡೆ ನೀರಿನ ಹಾಹಾಕಾರ ಕಂಡು ಬರಲು ಕಾರಣವಾಗಿದೆ.
ಕಾದು ನೋಡುವ ತಂತ್ರ: ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತ ವಲಯದಲ್ಲೊಬ್ಬರಾಗಿರುವ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಈವರೆಗೂ ಬಿಜೆಪಿಯಲ್ಲೇ ಇದ್ದು ಕೆಜೆಪಿ ಸೇರುವ ಬಗ್ಗೆ ಅಧಿಕೃತ ಹೇಳಿಕೆ ನೀಡದಿರುವುದು ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಅವರ ಹಿತೈಷಿಗಳಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಇದೇ ಕಾರಣಕ್ಕಾಗಿಯೇ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಬೇಕೋ ಅಥವಾ ಕೆಜೆಪಿಯಿಂದ ಸ್ಪರ್ಧಿಸಬೇಕೋ ಎಂಬ ಆಂತಕದಲ್ಲಿ ಕಾರ್ಯಕರ್ತರಿದ್ದಾರೆ.
ಬಿಜೆಪಿ ಮತ್ತೆ ಪುರಸಭೆಯಲ್ಲಿ ಕಮಲ ಅರಳಿಸಲು ಬೊಮ್ಮಾಯಿ ಅವರನ್ನು ಯಾವುದೇ ಕಾರಣಕ್ಕೂ ಕೆಜೆಪಿಗೆ ಸೇರದಂತೆ ಗಮನಹರಿಸಿದೆ. ಕೆಜೆಪಿ ವರಿಷ್ಠರು ಸಹ ಬೊಮ್ಮಾಯಿ ನಡೆಯನ್ನಾಧರಿಸಿ ಪುರಸಭೆ ಚುನಾವಣೆ ರಣತಂತ್ರ ರೂಪಿಸಬೇಕೆಂಬ ಲೆಕ್ಕಾಚಾರದಲ್ಲಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಫೆ. 23 ಕೊನೆ ದಿನವಾಗಿದ್ದು, ಬಿಜೆಪಿ-ಕೆಜೆಪಿಯಿಂದ ಯಾರ್ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

