ಬಸ್ ಡಿಕ್ಕಿಯಿಂದ ನೌಕರ ಸಾವು: ಆಕ್ರೋಶ
ರಾಣಿಬೆನ್ನೂರು: ನಗರದ ಬಸ್ ನಿಲ್ದಾಣ ಬಳಿ ಬೈಕ್ ಮೇಲೆ ಚಲಿಸುತ್ತಿದ್ದ ಬಿಎಸ್ಎನ್ಎಲ್ ನೌಕರನಿಗೆ ರಾಜ್ಯ ಸಾರಿಗೆ ಸೌಂಸ್ಥೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ನೌಕರ ಸ್ಥಳದಲ್ಲೇ ಸಾವನ್ನಪ್ಪಿ, ಆತನ ಹೆಂಡತಿ ತೀವ್ರ ಗಾಯಗೊಂಡಿದ್ದಾಳೆ. ಘಟನೆಯಿಂದ ರೊಚ್ಚಿಗೆದ್ದ ವಿವಿಧ ಸಂಘಟನೆ ಕಾರ್ಯಕರ್ತರು ಬಸ್ ನಿಲ್ದಾಣದ ಎದುರೇ ಶವವನ್ನಿಟ್ಟು 3 ತಾಸಿಗೂ ಅಧಿಕ ಕಾಲ ಹೆದ್ದಾರಿ ತಡೆ ನಡೆಸಿ, ನಿಲ್ದಾಣಾಧಿಕಾರಿ, ಡಿಪೋ ವ್ಯವಸ್ಧಾಪಕರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿ ರಾಣಿಬೆನ್ನೂರು ಬಿಎಸ್ಎನ್ಎಲ್ ಉಪ ವಿಭಾಗಾಧಿಕಾರಿಗಳ ಕಚೇರಿಯ ಓಎಫ್ಸಿ ವಿಭಾಗದ ಕಾರ್ರ್ಮಿಕ ಕರಬಸಪ್ಪ(ರಾಜು) ಮಲ್ಲೇಶಪ್ಪ ಸೋಪ್ಪಿನ (39) ಹಾಗೂ ತೀವ್ರವಾಗಿ ಗಾಯಗೊಂಡ ಕಾರ್ಮಿಕನ ಪತ್ನಿ ಗೀತಾ ಸೋಪ್ಪಿನ (30) ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ಮಹಿಳೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶವವಿಟ್ಟು ಪ್ರತಿಭಟನೆ: ಅಪಘಾತದಲ್ಲಿ ಕಾರ್ಮಿಕ ಸಾವನ್ನಪ್ಪಿರುವ ಸುದ್ದಿ ತಿಳಿದ ತಕ್ಷಣ ಶವವನ್ನಿರಿಸಿದ ಸಾರ್ವಜನಿಕರು ಆಸ್ಪತ್ರೆಗೆ ಆಗಮಿಸಿದ ವಿವಿಧ ಸಂಘಟನೆಗಳ ಮುಖಂಡರು ಅಂತ್ಯ ಸಂಸ್ಕಾರಕ್ಕಾಗಿ ಶವ ಪಡೆದಿದ್ದ ಸಂಬಂಧಿಕರ ಮನವೊಲಿಸಿ ಶವವನ್ನು ಬಸ್ ನಿಲ್ದಾಣದ ಎದುರೇ ರಾಷ್ಟ್ರೀಯ ಹೆದ್ದಾರಿ ಮೇಲಿರಿಸಿ ನಿಷ್ಕ್ರೀಯಗೊಂಡ ಬಸ್ಸುಗಳನ್ನು ತಾಲೂಕಾದ್ಯಂತ ಓಡಿಸುತ್ತಾ ಸಾರ್ವಜನಿಕರ ಜೀವ ಹಾನಿಗೆ ಕಾರಣರಾಗಿರುವ ರಾಣಿಬೆನ್ನೂರು ಡಿಪೋ ವ್ಯವಸ್ಥಾಪಕ ಮಹೇಶ ಹಾಗೂ ನಿಯಂತ್ರಣಾಧಿಕಾರಿ ಚವ್ಹಾಣ ವಿರುದ್ಧ ಪ್ರತಿಭಟನೆ ನಡೆಸಿದರು.
ಪ್ರಯಾಣಿಕರ ಪರದಾಟ: ಮಧ್ಯಾಹ್ನ 3ರಿಂದ 5ರ ವರೆಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ನಿಲ್ದಾಣದ ಎದುರು ಶವವನ್ನಿಟ್ಟು ಪ್ರತಿಭಟಿಸುತ್ತಿದ್ದ ಕಾರಣ ಮೈಲಾರ ಹಾಗೂ ದೇವರಗುಡ್ಡದಲ್ಲಿ ನಡೆಯುತ್ತಿರುವ ಜಾತ್ರೆಗೆ ತೆರಳುವ ಬಸ್ಗಳು ಹಾಗೂ ಇತರ ವಾಹನಗಳ ಹೆದ್ದಾರಿಯ ಮೇಲೆ ಸಾಲುಗಟ್ಟಿ ನಿಂತು ಪ್ರಯಾಣಿಕರು ಪರದಾಡುವಂತಾಯಿತು.
ನಿಷ್ಕ್ರಿಯ ಬಸ್ ಬದಲಾಯಿಸಿ: ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಬಿಜೆಪಿ ಯುವಮೊರ್ಚಾ ಅಧ್ಯಕ್ಷ ಕುಮಾರ ಮಾತನಾಡಿ, ಕಳೆದೊಂದುವರೆ ವರ್ಷದಿಂದ ರಾಣಿಬೆನ್ನೂರು ಡಿಪೋಕ್ಕೆ ವ್ಯವಸ್ಥಾಪಕರಾಗಿ ಬಂದಿರುವ ಮಹೇಶ ಸಂಪೂರ್ಣ ನಿಷ್ಕ್ರಿಯ ಬಸ್ಗಳನ್ನೇ ತಾಲೂಕಾದ್ಯಂತ ಓಡಿಸುತ್ತಿದ್ದಾರೆ. ನಗರ, ಗ್ರಾಮೀಣ ಪ್ರದೇಶದ ಹಲವಾರು ರಸ್ತೆಗಳಲ್ಲಿ ನಡೆದ ಅಪಘಾತಗಳಿಗೆ ಇಂಥ ಸಾರಿಗೆ ಬಸ್ಗಳೇ ಕಾರಣವಾಗಿವೆ. ಈ ಕುರಿತಂತೆ ಚಾಲಕರು ಹಾಗೂ ನಿರ್ವಾಹಕರು ದೂರು ನೀಡಿದಾಗ್ಯೂ ಬಸ್ನ ಬಿಡಿಭಾಗಗಳನ್ನು ಬದಲಾಯಿಸುವಲ್ಲಿ ಹಾಗೂ ನಿಷ್ಕ್ರೀಯ ಬಸ್ಗಳನ್ನು ಬದಲಾಯಿಸಲು ವ್ಯವಸ್ಥಾಪಕರೇ ಅನುಮತಿ ನೀಡುತ್ತಿಲ್ಲ. ಕಾರಣ ವ್ಯವಸ್ಥಾಪಕ ಮಹೇಶ ಅವರ ಮೇಲೆಯೇ ಸೂಕ್ತ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಸೂಕ್ತ ಪರಿಹಾರ ನೀಡಿ: ಅಪಘಾತದಲ್ಲಿ ಮೃತನಾದ ಬಿಎಸ್ಎನ್ಎಲ್ ನೌಕರನ ಕುಟುಂಬಕ್ಕೆ ರು. 5 ಲಕ್ಷ ಪರಿಹಾರ ನೀಡುವಂತೆ ಹಾಗೂ ಗಾಯಗೊಂಡಿರುವ ಆತನ ಪತ್ನಿಗೆ ರು. 3 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲಿಸಿದ್ದವು. ಈ ಸಂದರ್ಭ ಕುಮಾರ ಯಳೆಹೋಳಿ, ವಿ.ಆರ್. ತೋಟದ, ಮಲ್ಲಣ್ಣ ಅಂಗಡಿ, ಕಿರಣ ಅಂಗಡಿ, ಬಿ.ಎಂ. ಜಯದೇವ, ನಗರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಸುರಳಿಕೇರಿಮಠ, ರವೀಂದ್ರಗೌಡ ಪಾಟೀಲ ಪಾಲ್ಗೊಂಡಿದ್ದರು.
ಸಾರಿಗೆ ಸಂಸ್ಥೆ ಜಿಲ್ಲಾ ನಿಯಂತ್ರಕ ವೆಂಕಟೇಶ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ ರು. 15 ಸಾವಿರ ಹಾಗೂ ಗಾಯಗೊಂಡಿರುವ ಆತನ ಪತ್ನಿಗೆ ರು. 10 ಸಾವಿರ ತಕ್ಷಣ ನೀಡುವ ಭರವಸೆ ಮೇರೆಗೆ ಪ್ರತಿಭಟನೆಯಿಂದ ಹಿಂದೆ ಸರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

