ಮತದಾರರ ಸೆಳೆಯಲು ಅಭ್ಯರ್ಥಿಗಳ ಸರ್ಕಸ್
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.28
ಚುನಾವಣೆ ಎಂದಾಕ್ಷಣ ನೆನಪಿಗೆ ಬರುವುದೇ ಹಣ ಮತ್ತು ಹೆಂಡ. ಇಂದು ಬಹುತೇಕ ಎಲ್ಲೆಡೆ ಚುನಾವಣಾ ಆಯೋಗದ ಕಣ್ತಪ್ಪಿಸಿ ಸಾಮಾನ್ಯ ಎನ್ನುವಂತೆ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಒಂದಿಲ್ಲೊಂದು ಆಮೀಷ ತೋರುತ್ತಾರೆ. ಈ ನಿಟ್ಟಿನಲ್ಲಿ ಆಯೋಗ ಹದ್ದಿನ ಕಣ್ಣಿರಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೂ ಅಭ್ಯರ್ಥಿಗಳು ಶತಾಯಗತಾಯ ವಿಜಯಿಗಳಾಗಲು ಹಲವಾರು ಅನ್ಯ ಮಾರ್ಗಗಳನ್ನು ಅನುಸರಿಸುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.
ನಗರಸಭೆ ವೈಫಲ್ಯವೇ ಮಾರ್ಗದರ್ಶಿ: ಹೌದು, ಕಳೆದ ನಗರಸಭೆ ಹಾವೇರಿಗರಿಗೆ ಬಹುತೇಕ ಸಂಕಷ್ಟಗಳನ್ನು ನೀಡಿದೆ. ಇದರಲ್ಲಿ ಜೀವನಾವಶ್ಯಕ ವಸ್ತುಗಳಲ್ಲಿ ಕುಡಿಯುವ ನೀರು ಮುಖ್ಯವಾದುದು. ಪ್ರಸ್ತುತ ಹಾವೇರಿ ನಗರಕ್ಕೆ ಎರಡೂವರೇ ತಿಂಗಳಿಂದ ನದಿನೀರು ಪೂರೈಕೆಯಾಗಿಲ್ಲ. ಇದನ್ನೇ ಅಭ್ಯರ್ಥಿಗಳು ಮತದಾರರನ್ನು ಸೆಳೆಯುವ ತಂತ್ರವಾಗಿ ಮಾರ್ಪಡಿಸಿಕೊಂಡಿದ್ದು ಮಾತ್ರ ಜನತೆಯಲ್ಲಿ ನೀರಿನ ಕುರಿತಂತೆ ಇದ್ದ ಆತಂಕ ದೂರ ಮಾಡಿದೆ.
ಕರ ಭರಿಸಲು ಮುಂದಾದರು: ನೀರಿನ ಸಮಸ್ಯೆ ನೀಗಿಸಲು ನೀರಿನ ಟ್ಯಾಂಕರ್ಗಳ ಮೂಲಕ ಅಭ್ಯರ್ಥಿಗಳು ತಾವು ಸ್ಫರ್ಧಿಸುವ ವಾರ್ಡ್ಗಳಲ್ಲಿ ನೀರು ಹಂಚಿಕೆಯಲ್ಲಿ ತೊಡಗಿದ್ದಾರೆ. ಆದರೆ, ಚುನಾವಣೆ ನಂತರ ಎಂಬ ಹೊಸ ಚಿಂತೆ ಶುರುವಾಗಿದೆ.
ನೀರಿಲ್ಲದೇ ಬೇಸತ್ತಿದ್ದ ಹಾವೇರಿಗರಿಗೆ ನೀರಿನ ಟ್ಯಾಂಕರ್ಗಳ ಮೂಲಕ ಉಚಿತವಾಗಿ ನೀರು ನೀಡುವ ಮೂಲಕ ಅಭ್ಯರ್ಥಿಗಳು ಮತದಾರರನ್ನು ಸೆಳೆಯುವ ತಂತ್ರದಲ್ಲಿ ತೊಡಗಿದ್ದಾರೆ. ಅಲ್ಲದೇ ಮತ್ತೊಂದೆಡೆ ಕಡು ಬಡ ಕುಟುಂಬಗಳ ಮನೆ ಕರ, ನೀರಿನ ಕರಗಳನ್ನು ಅಭ್ಯರ್ಥಿಗಳೇ ಯಾರ ಅರಿವಿಗೂ ಬಾರದಂತೆ ಭರಿಸುತ್ತಿರುವುದು ರಹಸ್ಯವಾಗಿ ನಡೆಯುತ್ತಿದೆ.
ಸಹಾಯಸ್ತರಿಗೆ ಮತ: ಹೇಳಲಿಚ್ಚಿಸದ ಕಡುಬಡವನೋರ್ವ ಮಾತನಾಡಿ, ಇದರಿಂದಾಗಿ ಕಳೆದ 7-8 ವರ್ಷಗಳಿಂದ ಬಾಕಿ ಬಿದ್ದಿದ್ದ ತನ್ನ ಮನೆಕರ ಈಗ ಸಂದಾಯವಾಗಿದೆ. ಇದಕ್ಕೆ ಸಂಬಂಧಿಸಿದ ಪಾವತಿಯೂ ತಲುಪಿದ್ದು, ಸಹಾಯ ಮಾಡಿದವರಿಗೆ ಮತ ನೀಡುವುದಾಗಿ ತಿಳಿಸಿದ್ದಾನೆ. ಅಲ್ಲದೇ ಮನೆಯಲ್ಲಿರುವ ಹಿರಿ ಜೀವಗಳಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ, ರೇಷನ್ ಕಾರ್ಡ್, ಎಪಿಕ್ ಕಾರ್ಡ್ಗಳನ್ನೂ ಮಾಡಿಸಿಕೊಡುವ ಭರವಸೆ ನೀಡುವ ಮೂಲಕ ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ವಾಗ್ದಾನ ನೀಡುತ್ತಿರುವುದು ಮತದಾರನನ್ನು ಬುಟ್ಟಿಗೆ ಹಾಕಿಕೊಳ್ಳುವ ಕಾರ್ಯವೇ ಆಗಿದೆ.
ರಾತ್ರಿ ಪ್ರಚಾರ: ಈಗಾಗಲೇ ಸೂರ್ಯನ ಪ್ರಖರತೆಯಿಂದ ಬೇಸತ್ತಿರುವ ಅಭ್ಯರ್ಥಿಗಳು ಮತದಾರರನ್ನು ಭೇಟಿ ಮಾಡಲು ಬೆಳಗಿನ 9ರೊಳಗೆ, ಇಲ್ಲವೇ ಸಂಜೆ 7ರ ಬಳಿಕ ತೆರಳುತ್ತಿದ್ದಾರೆ.
ಕೆಲ ಕಡೆ, ವಿಶೇಷವಾಗಿ ಪ್ರಗತಿಪರ ವಾರ್ಡ್ಗಳಲ್ಲಿ ಇದು ಯಶಸ್ವಿಯಾದರೂ ಉಳಿದೆಡೆ ಮಧ್ಯಮ ವರ್ಗದ ಕುಟುಂಬಗಳಿಗೆ ಕಿರಿಕಿರಿ ಎನಿಸಲಾರಂಭಿಸಿದೆ. ಇದರಿಂಗಾಗಿ ಎಲೆಕ್ಷನ್ ಯಾವಾಗ ಮುಗದಾವಪಾ ಎಂಬ ಉದ್ಘಾರ ತೆಗೆಯುತ್ತಿದ್ದಾರೆ. ಜಿಲ್ಲೆಯ ಅಲ್ಲಲ್ಲಿ ಈಗಾಗಲೇ ಇಂಥ ಪ್ರಯತ್ನಗಳು ನಡೆದಿದ್ದು, ರಾಣಿಬೆನ್ನೂರಿನ ಕೆಲ ಕಡೆಗಳಲ್ಲಿ ಬೇಳೆ, ಬೆಲ್ಲ, ಇನ್ನಿತರ ಕಿರಾಣಿ ಸಾಮಗ್ರಿಗಳನ್ನೇ ಕಡು ಬಡವರ ಮನೆಗಳಿಗೆ ತಲುಪಿಸುತ್ತಿರುವುದು ಕಂಡು ಬಂದಿದೆ.
ಒಟ್ಟಿನಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ತಮ್ಮ ವಿವೇಚನೆಗೆ ತಕ್ಕಂತೆ ಮತದಾರನನ್ನು ಸೆಳೆಯಲು ಯತ್ನಿಸುತ್ತಿರುವುದು ಮಾತ್ರ ಎಲ್ಲೂ ಎಲ್ಲೆ ಮೀರದಿರಲಿ ಎಂಬುದು ಪತ್ರಿಕೆ ಕಾಳಜಿ.
- ಕಿರಣ ಮಾಸಣಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

