ದೇಶ ಆಳುವ ಶಕ್ತಿ ಅಂಗವಿಕಲರಲ್ಲಿದೆ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ.21
ಅಂಗವಿಕಲತೆ ಪೂರ್ವಜನ್ಮದ ಶಾಪವಲ್ಲ. ಅವಕಾಶ ಕಲ್ಪಿಸಿಕೊಟ್ಟರೆ ದೇಶವನ್ನೇ ಆಳುವ ಶಕ್ತಿ ಭಗವಂತ ಅಂಗವಿಕಲರಿಗೆ ಕರುಣಿಸಿದ್ದಾನೆಂದು ಸಾಣೇಹಳ್ಳಿ ಡಾ. ಪಂಡಿತಾರಾದ್ಯ ಶಿವಾಚಾರ್ಯ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಅಂಗರಗಟ್ಟಿ ಗ್ರಾಮದಲ್ಲಿ ವಿದ್ಯಾಚೇತನ ಬುದ್ಧಿಮಾಂದ್ಯ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪಾಲಕರಲ್ಲಿ ಕೀಳರಿಮೆ: ಅಂಗವೈಕಲ್ಯ ಹೊಂದಿದ ಮಕ್ಕಳ ಕುರಿತು ಸಮಾಜದ ಜನರಿಂದ ತಪ್ಪು ಗ್ರಹಿಕೆಯಾಗುತ್ತಿದೆ. ಇದರಿಂದ ಕೆಲ ಪಾಲಕರು ದೃತಿಗೆಡುವ ಮೂಲಕ ಪೂರ್ವಜನ್ಮದ ಶಾಪದ ಫಲವೆಂದು ಭಾವಿಸಿ ಕೀಳರಮೆಯಿಂದ ನೋಡುತ್ತಿರುವ ಉದಾಹರಣೆಗಳಿವೆ ಎಂದರು.
ಮುಖ್ಯವಾಹಿನಿಗೆ ತನ್ನಿ: ಅಂಗವೈಕಲ್ಯತೆ ದೇಹದಲ್ಲಾಗುವ ಬದಲಾವಣೆ ಮಾತ್ರ. ಆದರೆ, ಅಂಗವಿಕಲರು ಮಾನಸಿಕವಾಗಿ ಸದೃಢರಾಗಿರುತ್ತಾರೆ. ಸಮಾಜದ ಜನರಿಂದ ಅಂತಹ ಮಕ್ಕಳನ್ನು ಗುರುತಿಸುವ ಕೆಲಸವಾಗಬೇಕಾಗಿದ್ದು, ಶಿಕ್ಷಣ ಸೇರಿದಂತೆ ಇನ್ನಿತರ ಸೌಲಭ್ಯ ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ ಎಂದರು.
ಆದರ್ಶವಾಗಿಟ್ಟುಕೊಳ್ಳಿ: ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿರುವ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ತಮ್ಮ ಅಂಧತ್ವ ವರವಾಗಿಸಿಕೊಂಡು ಕಣ್ಣಿರುವ ವ್ಯಕ್ತಿಗಳಿಗಿಂತಲೂ ಅಸಾಮಾನ್ಯ ಸಾಧನೆ ಮಾಡಿ ತೋರಿದ್ದಾರೆ. ಅಂಗವೈಕಲ್ಯ ಹೊಂದಿರುವ ಮಕ್ಕಳು ಅವರನ್ನೇ ಆದರ್ಶರನ್ನಾಗಿಟ್ಟುಕೊಂಡು ಜೀವನ ಮುಂದುವರೆಯುವಂತೆ ಕರೆ ನೀಡಿದರು.
ಸೌಲಭ್ಯಕ್ಕೆ ಬದ್ಧ: ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸುರೇಶಗೌಡ, ಅಂಗವಿಕಲರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಆದರೆ, ಖಾಸಗಿ ವ್ಯಕ್ತಿಗಳು ಶಿಕ್ಷಣ ಒದಗಿಸಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದ ಅವರು, ಶಿಕ್ಷಣ ಸಂಸ್ಥೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬದ್ಧವಾಗಿರುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ಜಿಪಂ ಅಧ್ಯಕ್ಷ ಶಂಕ್ರಪ್ಪ ಮಾತನವರ, ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಯತ್ನಳ್ಳಿ, ಕೆಡಿಪಿ ಸದಸ್ಯ ಸುರೇಶ ಆಸಾದಿ, ತಾಲೂಕು ಅಂಗವಿಕಲ ಸಂಘ ಅಧ್ಯಕ್ಷ ಪಾಂಡು ಸುತಾರ, ಗ್ರಾಪಂ ಅಧ್ಯಕ್ಷೆ ಮೀನಾಕ್ಷಮ್ಮ ಒಡೆಯನಪುರ, ಕ್ರಾಂತಿವೀರ ವಿದ್ಯಾಸಂಸ್ಥೆಯ ಅಧ್ಯಕ್ಷ ಬಸವರಾಜ ಮತ್ತಿಹಳ್ಳಿ ಇನ್ನಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಮುರಿಗೆಯ್ಯ ವಿರಕ್ತಮಠ ಕಾರ್ಯಕ್ರಮ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

