ಸಚಿವ ಶಿಂಧೆ ವಜಾಕ್ಕಾಗಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜ. 24
ಭಯೋತ್ಪಾದಕ ಚಟುವಟಿಕೆಗಳಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಂಟಿದೆ ಎಂಬ ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂಧೆ ನೀಡಿರುವ ಹೇಳಿಕೆ ಖಂಡಿಸಿ ತಾಲೂಕು ಬಿಜೆಪಿ ಘಟಕ ಪಟ್ಟಣದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ತಕ್ಷಣ ಗೃಹ ಸಚಿವ ಶಿಂಧೆ ಅವರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಮೂಲಕ ಸಲ್ಲಿಸಿದ ಮನವಿಯಲ್ಲಿ ಪ್ರಧಾನಿ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಗೆ ಆಗ್ರಹಿಸಿದ್ದಾರೆ.
ಇಲ್ಲಿಯ ಪಿಎಲ್‌ಡಿ ಬ್ಯಾಂಕ್ ವೃತ್ತದಿಂದ ಪ್ರತಿಭಟನೆ ಕೈಗೊಂಡ ನೂರಾರು ಬಿಜೆಪಿ ಕಾರ್ಯಕರ್ತರು ಹಳೇ ಬಸ್ ನಿಲ್ದಾಣದ ಮೂಲಕ ಹಾದು ಪುರಸಭೆ ವೃತ್ತದಲ್ಲಿ ಜಮಾಯಿಸಿ ಅಪ್ರಬುದ್ಧ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವರ ವಿರುದ್ಧ ಧಿಕ್ಕಾರ ಹಾಕಿ ನಂತರ ಉಪ ತಹಸೀಲ್ದಾರ್ ರತ್ನಾಕರ ಅವರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ಸಿನ ಚಿಂತನಾ ಬೈಠಕ್‌ನಲ್ಲಿ ಶಿಂಧೆಯವರು ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಹಿಂದೂ ಆತಂಕವಾದ ಮತ್ತು ಕೇಸರಿ ಭಯೋತ್ಪಾದನೆಗಳಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಹುರುಳಿಲ್ಲದ, ಬೇಜವಾಬ್ದಾರಿ ಆರೋಪ ಹೊರಿಸಿರುವುದು ಖಂಡನೀಯ. ಕೇಂದ್ರದ ಜವಾಬ್ದಾರಿಯುತ ಗೃಹ ಖಾತೆ ಹೊತ್ತಿರುವ ಸಚಿವರು ಈ ಆರೋಪವನ್ನು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿಯವರ ಸಮ್ಮುಖದಲ್ಲಿ ಮಾಡಿರುವುದು ಹೊಣೆಗೇಡಿತನದ ಸಂಗತಿ ಎಂದು ದೂರಿದರು.
ತಾಲೂಕು ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಜಿಪಂ ಸದಸ್ಯರಾದ ಸಿ.ಎಸ್. ಪಾಟೀಲ, ಸರೋಜ ಆಡಿನ, ತಾಪಂ ಅಧ್ಯಕ್ಷೆ ಉಷಾ ಬಿಳೆಕುದುರಿ, ಲಕ್ಷ್ಮೀ ತೋಟದ, ಶಾಂತಮ್ಮ ಬೊಮ್ಮನಹಳ್ಳಿ, ಬಂಕಾಪುರ ಪುರಸಭೆ ಸದಸ್ಯ ಸೋಮಶೇಖರ್ ಗೌರಿಮಠ, ಆನಂದ ದಾನಿ, ರಾಜು ಸಂಶಿ, ಬಸವರಾಜ ನಾರಾಯಣಪುರ, ನವೀನ ಸವಣೂರು, ಮುದುಕಪ್ಪ ವನಹಳ್ಳಿ, ಮಾಲತೇಶ ಅದರಗುಂಚಿ, ಮುತ್ತಪ್ಪ ಕಟ್ಟಿಮನಿ, ಶಿವಕುಮಾರ ಚಪ್ಪರಮಠ, ಹೊನ್ನಪ್ಪ ಹೂಗಾರ ಮತ್ತಿತರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

