ವ್ಯಾಪಾರಕ್ಕೆ ಎಳನೀರು, ರೈತನಿಗೆ 'ಎಳ್ಳು' ನೀರು
ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 24
ತೆಂಗು ರೈತರು ಪಡೆಯುವುದು ರು. 6ರಿಂದ 7, ವ್ಯಾಪಾರಿ ಲಾಭ ಪಡೆಯುವುದು ರು. 9ರಿಂದ 10. ಇದರೊಳಗೆ ಯಾರು ಹಿತವರು?
ವರ್ಷಪೂರ್ತಿ ಬಿಸಿಲಲ್ಲಿ ದುಡಿದ ರೈತನಿಗಿಂತ ನೆರಳಲ್ಲಿ ಕುಳಿತು, ಕೈಗೆ ಮಣ್ಣು ತಾಕದಂತೆ ಐಷಾರಾಮಿ ಜೀವನ ನಡೆಸುವ ವ್ಯಾಪಾರಿಯ ಜೀವನವೇ ಉತ್ತಮ. ಇದೇನಿದು ಏನೋನೋ ಹೇಳುತ್ತಾರೆಂದು ತಿಳಿಯಬೇಡಿ, ನಾವು ಹೇಳಲು ಹೊರಟಿರುವುದು ಎಳನೀರಿನ ದುಬಾರಿ ಬೆಲೆಯ ಬಗ್ಗೆ.
ಮಾರಾಟಗಾರರು ರೈತರಿಂದ ಕೇವಲ ರು. 6-7 ಕೊಟ್ಟು ಎಳನೀರು ತರುತ್ತಾರೆ. ಆದರೆ ಪ್ರತಿ ಎಳನೀರು ರು. 20ಗೆ ಮಾರಾಟ ಮಾಡುತ್ತಾರೆ. ಇಂತಹ ವ್ಯಾಪಾರ ಪ್ರಶ್ನಾತೀತ, ಲೆಕ್ಕರಹಿತ. ಎಳನೀರನ್ನು ನೇರವಾಗಿ ವ್ಯಾಪಾರಿಯೇ ಖರೀದಿ ಅಥವಾ ಮಾರಾಟ ಮಾಡುವುದಿಲ್ಲ. ವ್ಯಾಪಾರಕ್ಕಾಗಿ ಒಬ್ಬನನ್ನು ನೇಮಕ ಮಾಡಿ, ತಿಂಗಳಿಗೆ ರು. 9 ಸಾವಿರ ಸಂಬಳ ನೀಡುತ್ತಾನೆ. ಸಾಮಾನ್ಯವಾಗಿ ಬಹುತೇಕ ರೋಗಿಗಳಿಗೆ ಎಳನೀರು ಕುಡಿಯುವಂತೆ ವೈದ್ಯರು ಸಲಹೆ ನೀಡುತ್ತಾರೆ. ಇದರ ಲಾಭವನ್ನು ಎಳನೀರು ವ್ಯಾಪಾರಸ್ಥರು ಪಡೆದುಕೊಳ್ಳುತ್ತಾರೆ.
ವ್ಯಾಪಾರಿಗೆ ಲಾಟರಿ: ರು. 20 ಕೊಟ್ಟು ಎಳನೀರು ಕುಡಿಯುವಂತಿಲ್ಲ, ಬಿಡುವಂತಿಲ್ಲ. ಒಬ್ಬೊಬ್ಬ ವ್ಯಾಪಾರಿ ದಿನಕ್ಕೆ ಏನಿಲ್ಲವೆಂದರೂ ನೂರಾರು ಎಳನೀರು ಮಾರಾಟ ಮಾಡುತ್ತಾನೆ. ಇಂತಹ ಹಗಲು ದರೋಡೆಗೆ ತಡೆ ಇಲ್ಲವೇ? ಇದು ಒಂದು ರೀತಿಯ ಪ್ರಶ್ನಾತೀತ ವ್ಯಾಪಾರ. ಇಂತಹ ಹಗಲುದರೋಡೆಯ ಬಗ್ಗೆ ಅಧಿಕಾರಗಳು ಎಚ್ಚರವಹಿಸಬೇಕು. ಇದು ಅಧಿಕಾರಿಗಳಿಗೆ ತಿಳಿಯದಾಗಿಯೇ ಅಥವಾ ತಿಳಿದರೂ ಸುಮ್ಮನಿದ್ದಾರೆಯೇ ಎಂಬುದು ಸೋಜಿಗದ ವಿಷಯ. ಇನ್ನು ರಸ್ತೆಯ ಬದಿಯಲ್ಲಿಯೇ ಎಳನೀರು ಇಟ್ಟು ಮಾರುತ್ತಾರೆ, ತಿಂಗಳೊಂದಕ್ಕೆ ಸಾವಿರಾರು ಗಳಿಸುತ್ತಾರೆ, ಮುನ್ಸಿಪಾಲಿಟಿ ಶುಲ್ಕದಿಂದ ಇವರ ಬಲುದೂರ. ಸಾರ್ವಜನಿಕರಿಗೆ ಜೇಬಿಗೆ ಕತ್ತರಿ, ವ್ಯಾಪಾರಿ ಜೇಬಿಗೆ ಲಾಟರಿ.
ಅಲ್ಯಾಕೆ ರು. 12, 15, ಇಲ್ಯಾಕೆ 20?: ಹೊಸಪೇಟೆಯಲ್ಲಿ ರು. 12ರಿಂದ 15. ಕಂಪ್ಲಿಯಲ್ಲಿ ರು. 14, ಸಿರುಗುಪ್ಪದಲ್ಲಿ 15, ಕೂಡ್ಲಿಗಿಯಲ್ಲಿ 14, ಸಂಡೂರಿನಲ್ಲಿ 15, ಆದರೆ ಬಳ್ಳಾರಿಯಲ್ಯಾಕೆ ರು. 20? ಬಳ್ಳಾರಿ ಜಿಲ್ಲೆಯಲ್ಲಿ ತೆಂಗು ಬೆಳೆಯುವ ರೈತರಿದ್ದಾರೆ. ಬಳ್ಳಾರಿ ಮಹಾನಗರ ಪಾಲಿಕೆ, ಗಣಿ ಜಿಲ್ಲೆ. ಎಷ್ಟು ಬೆಲೆಗೆ ಮಾರಿದರೂ ಜನರು ಕೊಳ್ಳುವ ಹುಂಬರಿದ್ದಾರೆ ಎಂಬ ಮನೋಭಾವನೆಯೇ? ಇನ್ನು ಬೇಸಿಗೆ ಬಂತೆಂದರೆ ಎಳನೀರಿಗೆ ಎಲ್ಲಿಲ್ಲದ ಬೇಡಿಕೆ. ಬೆಲೆ ಹೆಚ್ಚಾದರೂ ಆಶ್ಚರ್ಯ ಪಡಬೇಕಿಲ್ಲ. ಕಂಪ್ಲಿ, ಕಮಲಾಪುರ, ಕೂಡ್ಲಿಗಿ, ಹಡಗಲಿ, ಸಂಡೂರಿನ ಕೆಲ ಭಾಗದಲ್ಲಿ ತೆಂಗು ಬೆಳೆಗಾರ ರೈತರಿದ್ದಾರೆ. ಆದರೆ, ವ್ಯಾಪಾರಸ್ಥರ ಪ್ರಕಾರ ತುಮಕೂರು, ಮೈಸೂರಿನಿಂದ ತರುತ್ತೇವೆ ಎನ್ನುತ್ತಾರೆ.
ವ್ಯಾಪಾರಸ್ಥರಿಗೆ ಲಾಭ: ತೆಂಗು ಬೆಳೆಗಾರ ರೈತ ಹೂವಿನ ಹಡಗಲಿಯ ಶಂಕರಪ್ಪ ಅವರನ್ನು 'ಕನ್ನಡಪ್ರಭ' ಸಂಪರ್ಕಿಸಿದಾಗ, ಪ್ರತಿ ಎಳನೀರಿಗೆ ರು. 6 ರಿಂದ 8 ಗಳವರೆಗೆ ವ್ಯಾಪಾರಸ್ಥರಿಗೆ ಮಾರಾಟ ಮಾಡಲಾಗುತ್ತದೆ. ಮರದಿಂದ ಅವರೇ ತೆಗೆದುಕೊಂಡು ಹೋಗುತ್ತಾರೆ. ನಮಗೆ ಖರ್ಚು ತೆಗೆದು ರು. 2ರಿಂದ 4 ಲಾಭ ಬರುತ್ತದೆ. ವ್ಯಾಪಾರಸ್ಥರು ಇಲ್ಲಿಂದ ಕೊಂಡ ಎಳನೀರನ್ನು ರು. 15ಗೆ ಮಾರಿದರೂ, ರೈತರಿಗಿಂತ ಹೆಚ್ಚಿನ ಲಾಭ ಪಡೆಯುತ್ತಾರೆ. ರೈತರು ಕಷ್ಟ ಬಿದ್ದು ಬೆಳೆದರೂ, ಫಲವಿಲ್ಲ, ಅದೆಲ್ಲ ವ್ಯಾಪಾರಸ್ಥರ ಜೇಬಿಗೆ ಹೋಗುತ್ತದೆ ಎನ್ನುತ್ತಾರೆ.
ಎಳನೀರಲ್ಲಿ ಹೆಚ್ಚು ಲಾಭ: ಎಳನೀರು ವ್ಯಾಪಾರ ಮಾಡುವವನನ್ನು ಕೇಳಿದರೆ, ದಿನಕ್ಕೆ ಒಂದು ಲೋಡ್ ಎಳನೀರು ಮಾರಾಟ ಮಾಡುತ್ತೇವೆ. ಪ್ರತಿ ಎಳನೀರಿಗೆ ರು. 20 ಮಾರಾಟ ಮಾಡುತ್ತೇವೆ ಎಂದು ಹೇಳುತ್ತೇನೆ. ಎಷ್ಟು ಲಾಭ, ರೈತರಿಂದ ಎಷ್ಟಕ್ಕೆ ಖರೀದಿಸುತ್ತೀರಿ ಎಂದು ಕೇಳಿದರೆ, ನಮ್ಮ ಧಣಿಗೆ ಗೊತ್ತು. ನಮಗೆ ಇದರ ಬಗ್ಗೆ ಗೊತ್ತಿಲ್ಲ, ಮೈಸೂರು, ತುಮಕೂರಿಂದ ತರುತ್ತೇವೆ ಎಂದು ಹೇಳುತ್ತಾರೆ. ತಮಗೆ ದಿನಕ್ಕೆ ರು. 300 ಕೂಲಿ ಕೊಡುತ್ತಾರೆ ಎನ್ನುತ್ತಾನೆ.
ರೈತನಿಂದ ರು. 6ರಿಂದ 8 ಗಳವರೆಗೆ ಕೊಂಡರೂ ಸಾರಿಗೆ ವೆಚ್ಚ, ಕೂಲಿಯ ಖರ್ಚು ಎಂದರೂ ಪ್ರತಿ ಎಳನೀರಿಗೆ ರು. 2 ರಿಂದ 4 ಹೋದರೂ ಪ್ರತಿ ಎಳನೀರು ರು. 10ರಿಂದ 12ಗೆ ದೊರೆಯುತ್ತದೆ. ರು. 3 ಲಾಭ ತೆಗೆದಕೊಂಡರೂ ರು. 15ಕ್ಕೆ ಮಾರಬೇಕು, ರು. 20ಗೆ ಮಾರಾಟ ಮಾಡುವುದರಿಂದ ಏನಿಲ್ಲವೆಂದರೂ ಪ್ರತಿ ಎಳನೀರಿಗೆ ರು. 7 ರಿಂದ 8 ಲಾಭ ಗಳಿಸುತ್ತಾರೆ. ರೈತನಿಗೆ ಸಿಗುವುದು ಕೇವಲ ರು. 4ರಿಂದ 5 ಮಾತ್ರ.
ಅನಿವಾರ್ಯತೆ: ತೆಂಗು ಬೆಳೆಯುವ ರೈತ ತನ್ನ ಸಂಬಂಧಿಕರನ್ನು ಆಸ್ಪತ್ರೆಗೆ ಕರೆದುತಂದಾಗ, ವ್ಯಾಪಾರಸ್ಥರಿಗೆ 6ರಿಂದ 8ಗೆ ಮಾರಾಟ ಮಾಡಿ, ರೋಗಿಗೆ ಎಳನೀರು ಬೇಕಾಗುವುದರಿಂದ ರು. 20 ಕೊಟ್ಟು ಕೊಳ್ಳುತ್ತಾನೆ. ಆಶ್ಚರ್ಯ ಪಡುತ್ತಾನೆ. ಆದರೆ ಅನಿವಾರ್ಯವಾಗಿ ಕೊಳ್ಳುತ್ತಾನೆ. ವೈದ್ಯರು ರೋಗಿಗಳಿಗೆ ಎಳನೀರು ಕುಡಿಸಬೇಕು ಎಂದು ಹೇಳುವುದರಿಂದ ಬಡರೋಗಿಗಳು ಎಳನೀರು ಬೆಲೆ ಹೆಚ್ಚಾದರೂ, ಹೇಳಿದಷ್ಟು ಕೊಟ್ಟು ತೆಗೆದುಕೊಂಡು ಹೋಗಬೇಕು, ಅದು ಅನಿವಾರ್ಯ. ಇಂತಹ ಅನಿವಾರ್ಯತೆ ವ್ಯಾಪಾರಸ್ಥರಿಗೆ ಅವಕಾಶವಾಗಿ ಪರಿಣಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

