ನೆಲ ಮೂಲದ ಪ್ರಾದೇಶಿಕ ಪಕ್ಷ ಬೇಕು
ಗುದ್ಲೆಪ್ಪ ಹಳ್ಳಿಕೇರಿ ವೇದಿಕೆ, ಹೊಸರಿತ್ತಿ, ಜ. 31
ಏಕೀಕರಣದ ಬಳಿಕ ಆಡಳಿತಕ್ಕೆ ಬಂದ ಎಲ್ಲ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಸಮಸ್ಯೆಗಳನ್ನು ಪರಿಹರಿಸಲಿಲ್ಲ. ಹೀಗಾಗಿ, ತಮಿಳುನಾಡು ಮಾದರಿಯಲ್ಲಿ ನೆಲ ಮೂಲದ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂದು ಸಮ್ಮೇಳನಾಧ್ಯಕ್ಷ ಡಾ ಚಂದ್ರಶೇಖರ ಪಾಟೀಲ ಪ್ರತಿಪಾದಿಸಿದರು.
ಹಾವೇರಿ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಇದು ಕೇವಲ ನನ್ನ ಅಭಿಪ್ರಾಯವೇ ಹೊರತು, ಸಾಹಿತ್ಯ ಸಮ್ಮೇಳನದ ನಿರ್ಣಯವಲ್ಲ. ನನ್ನ ಮಾತುಗಳಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಕನ್ನಡ ನಾಡಿನ ಸಮಸ್ಯೆಗಳು ಬಗೆಹರಿಯಬೇಕು ನೆಲ, ಜಲ, ಭಾಷೆ ಉಳಿಸಿಕೊಳ್ಳಲು ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷ ಬೇಕು ಎಂದರು.
ಗಾಂಧಿ ಕನಸು ನುಚ್ಚುನೂರು: ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಗಾಂಧೀಜಿಯವರನ್ನೇ ಗುಂಡಿಕ್ಕಿ ಕೊಂದ ನಾವು ದೇಶದ ಪರಂಪರೆ ಎತ್ತ ಒಯ್ಯುತ್ತಿದ್ದೇವೆ ಎಂಬುದನ್ನು ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಅವರ ಮರಣದ ಬಳಿಕ ಅವರ ಎಲ್ಲ ಕನಸುಗಳನ್ನೂ ಮುಂದಿನ 10 ವರ್ಷಗಳಲ್ಲಿ ನಿರ್ನಾಮ ಮಾಡಲಾಗಿದೆ ಎಂದು ವಿಷಾದಿಸಿದರು.
ಕಮ್ಯೂನಿಷ್ಟರಿಂದ ಕನ್ನಡಕ್ಕೆ ಧಕ್ಕೆ: ದೇಶ ಹಾಗೂ ರಾಜ್ಯದಲ್ಲಿರುವ ಕಮ್ಯೂನಿಷ್ಟರು ಹಾಗೂ ಅವರ ಸಿದ್ಧಾಂತಗಳು ರಷ್ಯ ಹಾಗೂ ಚೀನಾ ಮೂಲವಾಗಿದ್ದು, ಅವರ ಪಕ್ಷಕ್ಕೆ ಸೈದ್ಧಾಂತಿಕ ಹಿನ್ನೆಲೆಯಿಲ್ಲ. ಕನ್ನಡ ಚಳವಳಿ ದಮನಕ್ಕೆ ಕಮ್ಯೂನಿಷ್ಟರು ಪ್ರಯತ್ನಿಸಿದ್ದಾರೆ ಎಂದು ಚಂಪಾ ಆರೋಪಿಸಿದರು.
ಡಬ್ಬಿಂಗ್ ವಿರೋಧಿ: ಡಬ್ಬಿಂಗ್ ಪರಂಪರೆ ನಮಗೆ ಬೇಡ. ಈಗಾಗಲೇ ಇತರ ಭಾಷೆಗಳ ದೌರ್ಜನ್ಯ ನಡೆದಿದೆ. ವಾಡಿಕೆಯಲ್ಲಿ ಅವುಗಳನ್ನು ಸ್ಮೃತಿ ಪಟಲದಿಂದ ತೆಗೆಯದಂತಹ ಅಸಹಾಯಕ ಸ್ಥಿತಿಯಲ್ಲಿದ್ದೇವೆ. ಡಬ್ಬಿಂಗ್ನಿಂದಾಗಿ ಚಿತ್ರ ಕಲಾವಿದರ ಬದುಕು ದುಸ್ತರವಾಗಲಿದೆ. ಕನ್ನಡ ಭಾಷೆ ಹಾಗೂ ಕನ್ನಡ ಚಿತ್ರರಂಗ ಅಸ್ತಿತ್ವ ಗಟ್ಟಿಯಾಗಿ ಬೆಳೆಯಬೇಕು, ಈ ಕುರಿತು ಕನ್ನಡ ಮೇಧಾವಿಗಳನ್ನು, ಚಿಂತಕರನ್ನು ಕರೆದು ಚರ್ಚಿಸುವ ಅಗತ್ಯವಿದೆ ಎಂದರು.
ಮಹಿಳೆಯರಿಗೆ ಪಾಲು ಕೊಡಿ: ಮುಂದಿನ ಸಮ್ಮೇಳನದಲ್ಲಿ ಮಹಿಳಾ ಗೋಷ್ಠಿ ಎಂದು ಪ್ರತ್ಯೇಕ ಮೀಸಲಾತಿ ನೀಡುವುದನ್ನು ಸ್ಥಗಿತಗೊಳಿಸಿ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಎಲ್ಲ ಗೋಷ್ಠಿಗಳಲ್ಲಿ ಪ್ರಾತಿನಿಧ್ಯ ನೀಡುವುದು ಉತ್ತಮ ಎಂದರು.
ಪ್ರೀತಿಯಿಂದ ಭಾಗವಹಿಸಿದ್ದೇನೆ: ಸಮ್ಮೇಳನಕ್ಕೆ ಪ್ರೀತಿಯಿಂದ ಕರೆದಿದ್ದೀರಿ, ಇದು ನನ್ನ ತವರು ಜಿಲ್ಲೆ. ವೈಚಾರಿಕ, ಧಾರ್ಮಿಕ ಹಾಗೂ ರಾಜಕೀಯ ಕ್ರಾಂತಿಗಳು ನಡೆದ ನೆಲ. ಹೊಸ ಕವಿಗಳ ಪ್ರಯತ್ನ ಶ್ಲಾಘನೀಯ ಎಂದ ಚಂಪಾ, ಕನ್ನಡವನ್ನು ಹಂಚಿಕೊಳ್ಳವವರನ್ನು ಸ್ವಾಗತಿಸಬೇಕಾಗಿದೆ ಎಂದರು.
ಅನ್ನದಾನೀಶ್ವರ ಶ್ರೀಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಅಧ್ಯಕ್ಷತೆ ವಹಿಸಿದ್ದರು. ಗುದ್ದಲೀಶ್ವರ ಶ್ರೀಗಳು ಸಾನ್ನಿಧ್ಯ, ಹೊಸಮಠದ ಶಾಂತಲಿಂಗಶ್ರೀ ಸಮ್ಮುಖ ವಹಿಸಿದ್ದರು. ದೀನಭಂಧು ಹಳ್ಳಿಕೇರಿ, ಲಿಂಗಯ್ಯ ಹಿರೇಮಠ, ಆರ್.ಎಂ. ಕುಬೇರಪ್ಪ, ಚಂದ್ರಶೇಖರ ಮಾಳಗಿ, ಕೆ.ಡಿ. ದೀವಿಗಿಹಳ್ಳಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

