ಉತ್ತಮ ಮಳೆ: ಭರದಿಂದ ಸಾಗಿದ ಬಿತ್ತನೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜು. 4
25 ದಿನಗಳಿಂದ ತಾಲೂಕಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ತಾಲೂಕಿನಲ್ಲಿ ಶೇ. 81ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಉಳಿದ ಶೇ. 19ರಷ್ಟು ಪ್ರದೇಶಗಳಲ್ಲಿ ಬಿತ್ತನೆ ಕಾರ್ಯಕ್ಕೆ ರೈತರು ಮುಂದಾಗಿದ್ದಾರೆ.
2011-12ನೇ ಸಾಲಿನಲ್ಲಿ ಸಂಪೂರ್ಣ ಬರಗಾಲ ಪೀಡಿತ ಪ್ರದೇಶವೆಂದು ಗುರುತಿಸಿದ್ದ ಮೇಡ್ಲೆರಿ ಹೋಬಳಿ ವ್ಯಾಪ್ತಿಯ ಪ್ರದೇಶ ಹಾಗೂ ರಾಣಿಬೆನ್ನೂರು ಹೋಬಳಿ ವ್ಯಾಪ್ತಿಗೊಳಪಟ್ಟ ಪ್ರದೇಶವು ಕೃಷ್ಣಮೃಗ ಅರಣ್ಯ ಹಾಗೂ ತಾಲೂಕು ಸಾಮಾಜಿಕ ಅರಣ್ಯ ಪ್ರದೇಶದ ಅಕ್ಕ-ಪಕ್ಕದಲ್ಲಿನ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಬರುವ ಮೇಡ್ಲೆರಿ, ಐರಣಿ, ಬೇಲೂರು, ಅಂಸಾಪುರ, ರಾಹುತನಕಟ್ಟಿ, ಚಳಗೇರಿ, ಕರೂರು, ಹುಣಶಿಕಟ್ಟಿ, ಗಂಗಾಜಲ ತಾಂಡಾ, ಹೊನ್ನತ್ತಿ, ಗುಡಗೂರು, ಮೈದೂರು, ಕಾಕೂಳ, ಕೆರಿಮಲ್ಲಾಪುರ, ಕಜ್ಜರಿ, ದೇವರಗುಡ್ಡ ಸೇರಿದಂತೆ 40 ಗ್ರಾಮಗಳ ರೈತರು ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಿದ್ದಾರೆ.
ಜೋಳ ಬೆಳೆಗೆ ರೋಗ ತಗಲಿದರೆ: ತಾಲೂಕಿನಾದ್ಯಂತ ಬಿತ್ತನೆಯಾಗಿರುವ ಶೇ. 81ರಷ್ಟು ಪ್ರದೇಶದಲ್ಲಿ ಬೆಳೆಯಲಾದ ಹತ್ತಿ, ಗೋವಿನ ಜೋಳ ಮತ್ತು ಹೈಬ್ರಿಡ್ ಜೋಳದ ಬೆಳೆಗಳಲ್ಲಿ ಜೋಳದ ಬೆಳೆಗೆ ಸುಳಿ ಕೊರೆಯುವ ನೋಣದ ಬಾಧೆ ಕಂಡುಬಂದಲ್ಲಿ, ಕ್ಲೋರೊ ಫೆರಿಪಾಸ್ 20 ಇಸಿ ತಂದು ಅದರಲ್ಲಿ 5 ಎಂಎಲ್ನ್ನು ಪ್ರತಿ ಲೀಟರ್ ನೀರಿನಲ್ಲಿ ಕಲಸಿ ರೋಗಕ್ಕೆ ತುತ್ತಾಗಿರುವ ಬೆಳೆ ಮೇಲೆ ಸಿಂಪಡಿಸಬೇಕು.
ಹತ್ತಿ ಬೆಳೆಗೆ ರೋಗ ತಗಲಿದರೆ: ಹತ್ತಿ ಬೆಳೆಯಲ್ಲಿ ರಸ ಹೀರುವ ಕೀಟಗಳು ಕಂಡುಬಂದಲ್ಲಿ ರೋಗ ಹತೋಟಿಗಾಗಿ ಇಮಿಡಾ(ಕಾಂಪಿಡರ)ರನ್ನು ಪ್ರತಿ ಲೀಟರ್ ನೀರಿಗೆ 0.5 ಎಂಎಲ್ ಮಿಶ್ರಣ ಮಾಡಿ ಬೆಳೆಯ ಮೇಲೆ ಸಿಂಪಡಿಸಿದಲ್ಲಿ ರೋಗ ನಿಯಂತ್ರಿಸಬಹುದು.
ಬತ್ತ ನಾಟಿಗೆ ಸಲಹೆ: ಬತ್ತ ನಾಟಿ ಮಾಡಲು ಈಗ ಸೂಕ್ತ ಸಮಯವಾಗಿದ್ದು, ಬತ್ತದ ಸಸಿಗಳನ್ನು ಗದ್ದೆಯಲ್ಲಿ ನಾಟಿ ಮಾಡುವ ಪೂರ್ವದಲ್ಲಿ ಸಸಿ ಕೊಳೆ ರೋಗ ನಿಯಂತ್ರಣಕ್ಕಾಗಿ, ಟ್ರೆಕೋ ಡರ್ಮಾ ಫೌಡರನ್ನು ನೀರಿನಲ್ಲಿ ಕಲಸಿ ಗದ್ದೆಗೆ ಸಿಂಪಡಿಸಿದ ನಂತರ-ಕಾರ್ಬನ್ ಡೈಜಿಮನ್ನು ಸಹ ಗದ್ದೆಗೆ ಹಾಕಿ ಬತ್ತ ನಾಟಿ ಮಾಡಬೇಕು.
ಕಾಡು ಹಂದಿ, ಜಿಂಕೆಗಳ ಕಾಟ
ಗೋವಿನ ಜೋಳ, ಹತ್ತಿ, ಶೇಂಗಾ, ಸೂರ್ಯಕಾಂತಿ ಬೀಜಗಳನ್ನು ರೈತರು ಬಿತ್ತನೆ ಮಾಡಿದ್ದು, ಕಾಡು ಹಂದಿಗಳು ರಾತ್ರಿ ಸಮಯದಲ್ಲಿ ಅಗೆದು ತಿನ್ನುತ್ತಿರುವುದರಿಂದ ಹಾಗೂ ಸಾಲಾಗಿ ಹುಟ್ಟಿರುವ ಬೆಳೆಯನ್ನು ಹಗಲಿನ ಸಮಯದಲ್ಲಿ ಚಿಗರೆಗಳು ತಿನ್ನುತ್ತಿದ್ದು, ಇದರಿಂದ ರೈತರ ಶ್ರಮಕ್ಕೆ ಹಾನಿಯನ್ನುಂಟು ಮಾಡುತ್ತಿವೆ. ಕಾರಣ ಮೇಡ್ಲೆರಿ ಮತ್ತು ರಾಣಿಬೆನ್ನೂರು ಹೋಬಳಿ ವ್ಯಾಪ್ತಿಯ ರೈತರು ತಾವು ಬಿತ್ತನೆ ಮಾಡಿರುವ ಬೀಜಗಳು ಮೊಳಕೆ ಒಡೆದು ಹುಟ್ಟುವ ವರೆಗೂ ಹಾಗೂ ಬೆಳೆದ ಬೆಳೆ ಫಸಲು ಕಟಾವು ಕಾರ್ಯ ಮುಗಿಯುವ ವರೆಗೂ ಕಾಡು ಹಂದಿ ಮತ್ತು ಜಿಂಕೆಗಳ ಕಾಟದಿಂದ ಬೆಳೆಯನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಹಗಲಿರುಳೆನ್ನದೆ ಹೊಲಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
-ಸಾಬ್ಜನ ಇಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

