ಹಾವೇರಿ

ಸಕಾಲಕ್ಕೆ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿ

Published On :

ಹಾವೇರಿ: ಜಿಲ್ಲೆಯ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಗೆ ನಿರ್ಧಿಷ್ಟಪಡಿಸಲಾಗಿರುವ ಕಾರ್ಯದ ಗುರಿಯನ್ನು ಸಕಾಲಕ್ಕೆ ಸಾಧಿಸುವ ಮೂಲಕ ಜನಸಾಮಾನ್ಯರು ಹಾಗೂ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಬಿ. ದ್ಯಾಬೇರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯ ಕೃಷಿ, ಆರೋಗ್ಯ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣ ಅಭಿವೃದ್ಧಿ, ಕುಡಿಯುವ ನೀರು, ಸಕಾಲ ಯೋಜನೆ, ಅಟಲ್‌ಜಿ ಜನಸ್ನೇಹಿ ಕೇಂದ್ರ, ವಸತಿ ಯೋಜನೆ ವಿವಿಧ ಅಭಿವೃದ್ಧಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಸಕಾಲಕ್ಕೆ ಬೀಜ, ಗೊಬ್ಬರ ವಿತರಿಸಿ: ಜಿಲ್ಲೆಗೆ ಸರ್ಕಾರ ನಿಗದಿಪಡಿಸಿದ ಬೀಜ, ಗೊಬ್ಬರ ಹಾಗೂ ಕ್ರಿಮಿನಾಶಕಗಳ ಮಾಸಿಕ ಕೋಟಾವನ್ನು ಆಯಾ ತಿಂಗಳು ಪಡೆದು ಕೃಷಿಕರಿಗೆ ಸಕಾಲಕ್ಕೆ ವಿತರಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು. ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಿ, ಶುಚಿತ್ವದ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕೆಂದು ಸೂಚಿಸಿದರು.
ಅನುದಾನ ಬಿಡುಗಡೆ ಮಾಡಿಸಿ:  ಡಿಎಚ್‌ಓ ಡಾ. ರಾಘವೇಂದ್ರ ಸ್ವಾಮಿ ಮಾತನಾಡಿ, ಪ್ರಸಕ್ತ ಜನವರಿ 2013ರಿಂದ ಇಲ್ಲಿಯವರೆಗೆ 176 ಡೆಂಘೀ ಶಂಕಿತ ಮತ್ತು 110 ಮಲೇರಿಯಾ ಪ್ರಕರಣಗಳು ಕಂಡು ಬಂದಿದ್ದು, ಇಬ್ಬರು ಡೆಂಘೀಯಿಂದ ಸಾವಿಗೀಡಾಗಿದ್ದಾರೆ. ಆದರೆ, ಮಲೇರಿಯಾ ಪೀಡಿತರಿಗೆ ಔಷಧೋಪಚಾರ ನೀಡಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಡೆಂಘೀ ಜ್ವರ ನಿಯಂತ್ರಣಕ್ಕಾಗಿ ಡೆಂಘೀ ಕಿಟ್ಟು ಮತ್ತು ರಾಸಾಯನಿಕಗಳನ್ನು ಪಡೆದುಕೊಳ್ಳಲು ಜಿಲ್ಲೆಗೆ ರು. 5 ಲಕ್ಷ ಹೆಚ್ಚುವರಿ ಅನುದಾನ ಅಗತ್ಯವಿದ್ದು, ಅನುದಾನ ಬಿಡುಗಡೆ ಮಾಡಿಸಬೇಕೆಂದು ವಿನಂತಿಸಿದರು.
ತಾತ್ಕಾಲಿಕ ಆಯ್ಕೆ ಮಾಡಿಕೊಳ್ಳಿ: ಮನವಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಾವು ಇಲಾಖಾ ಮಟ್ಟದಲ್ಲಿ ಈ ಬಗ್ಗೆ ಕ್ರಮಕೈಕೊಳ್ಳಲಾಗುವುದಾಗಿ ತಿಳಿಸಿ, ಜಿಲ್ಲೆಯಲ್ಲಿ ಖಾಲಿಯಿರುವ 46 ತಜ್ಞ ವೈದ್ಯರು ಹಾಗೂ 12 ಸಾಮಾನ್ಯ ಕರ್ತವ್ಯ ವೈದ್ಯರನ್ನು ಸದ್ಯದ ಸರ್ಕಾರಿ ವ್ಯವಸ್ಥೆ ಅಡಿ ಜಿಲ್ಲಾ ಮಟ್ಟದಲ್ಲಿ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಸೂಚಿಸಿದರು. ಈಗ ಶಾಲೆ ಆರಂಭವಾಗಿರುವುದರಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹಾಗೂ ಸಮವಸ್ತ್ರ ಪೂರೈಕೆ ಬಗ್ಗೆ ಸಕಾಲಿಕ ಕ್ರಮಕೈಕೊಳ್ಳಬೇಕೆಂದು ಅಧಿಕಾರಿಗಳಿಗೆ ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು. ಡಿಡಿಪಿಐ ಎಸ್.ಬಿ. ಕೊಡ್ಲಿ ಮಾತನಾಡಿ, ಟೆಂಡರ್ ವಿಳಂಬದಿಂದಾಗಿ ಜಿಲ್ಲೆಯ ರಾಣಿಬೆನ್ನೂರು ಹಾಗೂ ಬ್ಯಾಡಗಿ ತಾಲೂಕುಗಳೆರಡಲ್ಲಿ ಸಮವಸ್ತ್ರ ವಿತರಣೆ ವಿಳಂಬಗೊಂಡಿದ್ದು, 2-3 ದಿನಗಳಲ್ಲಿ ಪೂರೈಕೆಯಾಗಲಿದೆ ಎಂದು ಮಾಹಿತಿ     ನೀಡಿದರು.
ಹೋಬಳಿ ಮಟ್ಟದಲ್ಲಿ ಅಟಲ್‌ಜಿ ಜನಸ್ನೇಹಿ ಕೇಂದ್ರಗಳಲ್ಲಿ ಸದ್ಯಕ್ಕೆ 37 ವಿವಿಧ ಸೇವೆಗಳಿಗೆ ಪ್ರಮಾಣಪತ್ರ ಹಾಗೂ ಆರ್‌ಟಿಸಿಗಳನ್ನು ವಿತರಿಸಲಾಗುತ್ತಿದ್ದು, ಈಗಿರುವ ಕಂಪ್ಯೂಟರ್ ಸಿಬ್ಬಂದಿ ಜತೆಗೆ ಪ್ರತಿ ಕೇಂದ್ರಕ್ಕೆ ಒಬ್ಬರಂತೆ ಆಪರೇಟರ್‌ಗಳ ಅಗತ್ಯವಿದೆ ಎಂದು ಪ್ರಭಾರ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಡೆಂಘೀ ಮತ್ತು ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿ ನೀಡಿದರಲ್ಲದೆ, ಸಕಾಲ ಯೋಜನೆ ಅಡಿ ಹಾವೇರಿ ಜಿಲ್ಲೆಯ ಒಟ್ಟಾರೆ ಸಾಧನೆ ರಾಜ್ಯ ಮಟ್ಟದಲ್ಲಿ 11ನೇ ಸ್ಥಾನದಲ್ಲಿ ಹಾಗೂ ಕಂದಾಯ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆಯೆಂದು ವಿವರ ನೀಡಿದರು.
ಕಾರ್ಯದರ್ಶಿಗಳು, ಹಾಸ್ಟೆಲ್‌ಗಳಲ್ಲಿ ವಾಸವಾಗಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಅಭ್ಯಾಸಕ್ಕೆ ಅನುವಾಗುವಂತೆ, ಅಗತ್ಯವಿರುವೆಡೆಯಲ್ಲಿ ವಿದ್ಯುತ್‌ಗೆ ಪರ್ಯಾಯವಾಗಿ ಸೋಲಾರ್ ಲ್ಯಾಂಪ್ ಅಳವಡಿಸಿಕೊಳ್ಳಬೇಕು. ಈ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿಲ್ಲದ ಪಕ್ಷದಲ್ಲಿ ಪೆಟ್ರೋಮ್ಯಾಕ್ಸ್‌ನ್ನಾದರೂ ವ್ಯವಸ್ಥೆ ಮಾಡಬೇಕು. ಒಟ್ಟಿನಲ್ಲಿ ಹಾಸ್ಟೆಲ್ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ ಹೊರಪೇಟ ಅವರಿಗೆ ಸೂಚಿಸಿದರು.
ಉಸ್ತುವಾರಿ ಕಾರ್ಯದರ್ಶಿಗಳು ವಿವಿಧ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ, ಯಾವುದೇ ಇಲಾಖೆಯ ಅನುದಾನ ಮಂಜೂರಾತಿ ಮತ್ತಿತರ ಸಮಸ್ಯೆಗಳಿದ್ದಲ್ಲಿ ತಮ್ಮ ಗಮನಕ್ಕೆ ತರುವಂತೆ ಸೂಚಿಸಿ, ಅಂಥ ವಿಚಾರಗಳ ಬಗ್ಗೆ ತಾವು ಆಯಾ ಇಲಾಖಾ ಮಟ್ಟದಲ್ಲಿ ವ್ಯವಹರಿಸಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ೤ ಚೇತನಸಿಂಗ್ ರಾಥೋಡ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ, ಜಿಪಂ ಹಾಗೂ  ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.