ಹಾವೇರಿ

ಶರೀಫರಿಂದ ಕನ್ನಡ ಸಾಹಿತ್ಯ ಶ್ರೀಮಂತ

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜು. 4
ಸಂತ ಶಿಶುನಾಳ ಶರೀಫ ಶಿವಯೋಗಿಗಳ ಹಾಗೂ ಗುರುಗೋವಿಂದ ಭಟ್ಟರ ಬದುಕು ಇತರರಿಗೆ ಮಾರ್ಗದರ್ಶನವಾಗಿದ್ದು, ಕನ್ನಡ ಸಾಹಿತ್ಯ ಶ್ರೀಮಂತಿಕೆ ಹೆಚ್ಚಿಸಿದ್ದಾರೆ. ಆಡಂಬರ, ನಾಟಕೀಯ, ತತ್ವಾದರ್ಶಗಳನ್ನು ಧರ್ಮ ಚೌಕಟ್ಟನ್ನು ಮೀರಿ ಮಾನವೀಯತೆ ಮೆರೆದವರಾಗಿದ್ದಾರೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಶಿಶುವಿನಹಾಳ ಪಂಚಾಗ್ನಿಮಠ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶರೀಫಗಿರಿಯಲ್ಲಿ ಜರುಗಿದ ಶಿಶುವಿನಾಳ ಸಂತಶರೀಫ ಶಿವಯೋಗಿಗಳ 194ನೇ ಜಯಂತ್ಯುತ್ಸವ ಹಾಗೂ 124ನೇ ಪುಣ್ಯಾರಾಧನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿಶುವಿನಾಳ, ಕಳಸ ಅಭಿವೃದ್ಧಿಗೆ 3 ಕೋಟಿ: ಶರೀಫರ ಹಾಗೂ ಗುರುಗೋವಿಂದ ಭಟ್ಟರ ತತ್ವಪದಗಳ ಸಂಗ್ರಹಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಶಿಶುವಿನಾಳ ಹಾಗೂ ಕಳಸ ಆಭಿವೃದ್ಧಿಗೆ ಬಿಜೆಪಿ ಸರ್ಕಾರದಲ್ಲಿ ತಲಾ ರು. 3 ಕೋಟಿ ಒಪ್ಪಿಗೆ ನೀಡಲಾಗಿದೆ. ಆದ್ದರಿಂದ ಅಭಿವೃದ್ಧಿ ಕೆಲಸಗಳು ನಿಲ್ಲುವುದಿಲ್ಲ. ಶರೀಫರು-ಗೋವಿಂದ ಭಟ್ಟರ ಅದ್ಭುತ ಕಾರ್ಯಕ್ರಮವನ್ನು ದೂರದರ್ಶನದ ಹಿರಿಯ ನಿರ್ದೇಶಕ ಮಹೇಶ ಜೋಶಿ ಸಹಕಾರದಿಂದ ಕೆಲವೆ ದಿನಗಳಲ್ಲಿ ನೀಡುತ್ತೇವೆ ಎಂದರು.
ವಂತಿಗೆಯಿಂದ ಅಧ್ಯಯನ ಪೀಠ ಸ್ಥಾಪನೆ ಪ್ರಾರ್ಥನಾ ಮಂದಿರ ಓಪನ್ ಮ್ಯೂಜಿಯಂ, ಸಭಾಭವನ ನಿರ್ಮಾಣ ಮಾಡಿ ಅಭಿವೃದ್ಧಿ ಮಾಡುತ್ತೇನೆ. ಜಾನಪದ ವಿಶ್ವವಿದ್ಯಾಲಯದಲ್ಲಿ ಶರೀಫರ ಅಧ್ಯಯನ ಪೀಠ ಸ್ಥಾಪಿಸಲು ಸರ್ಕಾರದ ಅನುದಾನಕ್ಕೆ ಕಾಯದೆ ಶಿಗ್ಗಾಂವಿ ತಾಲೂಕಿನಿಂದಲೆ ವಂತಿಗೆ ಕೂಡಿಸುವುದಾಗಿ ತಿಳಿಸಿದರು.
ಸಾಮಾನ್ಯರಲ್ಲಿ ಸಾಮಾನ್ಯನಾಗಿರುವೆ: ಚಿಕ್ಕವನಿದ್ದಾಗಿನಿಂದ ಶರೀಫರ ಮಠಕ್ಕೆ ಭಕ್ತನಾಗಿ ಬರುತ್ತಿದ್ದೆ. ಸಚಿವನಾಗಿರಲಿ, ಶಾಸಕನಾಗಿರಲಿ ಈಗಲೂ ಸಾಮಾನ್ಯ ಭಕ್ತನಾಗಿ ನನ್ನ ಕೊನೆ ಉಸಿರಿರುವರೆಗೆ ಸೇವೆ ಮಾಡುತ್ತೇನೆ ಎಂದರು.
ಶರೀಫರ ಕಾರ್ಯ ಶ್ಲಾಘನೀಯ: ದೂರದರ್ಶನ ನಿರ್ದೇಶಕ ಮಹೇಶ ಜೋಶಿ ಮಾತನಾಡಿ, ಶರೀಫ ಶಿವಯೋಗಿಗಳ ಹಾಗೂ ಗುರುಗೋವಿಂದ ಭಟ್ಟರು ಜಾತಿ, ಮತ, ಪಂಥಗಳನ್ನು ಮೀರಿ ಉತ್ತಮ ಸಮಾಜ ಕಟ್ಟಲು ಬಯಸಿ ಮಹಾನ್ ಮಾನವತಾದಿಯಾದವರು.
ವಿಜ್ಞಾನಕ್ಕೆ ಸವಾಲನ್ನು ನೀಡಿದವರು ಅಮಾವಾಸ್ಯೆಯನ್ನೆ ಹುಣ್ಣಿಮೆಯಾಗಿ ಪರೀಕ್ಷೆ ಮಾಡುವರಿಗೆ ತೋರಿಸಿಕೊಟ್ಟ ಮಹಾತ್ಮಾರಾಗಿದ್ದಾರೆ. ದೇಶದಲ್ಲಿಯೆ ದೂರದರ್ಶನದಲ್ಲಿ ವಾರದ 7 ದಿನಗಳಲ್ಲಿ 'ಈಶ್ವರ ಅಲ್ಲಾ ನೀನೆ ಅಲ್ಲಾ' ಎಂಬ ಧಾರವಾಹಿಯನ್ನು ಮರುಪ್ರಸಾರ ಮಾಡುವುದಾಗಿ ಹೇಳಿದರು.
ಶರೀಫರ ಬರಹದಲ್ಲಿ ಸಮಾಜ ಬದಲಿಸುವ ಶಕ್ತಿ: ಜಾನಪದ ವಿಶ್ವ ವಿದ್ಯಾಲಯ ಕುಲಪತಿ ಅಂಬಳಿಕೆ ಹಿರಿಯಣ್ಣ ಮಾತನಾಡಿ, ಸುಖ, ದುಃಖಗಳನ್ನು ಸಮಾನಾಂತರದಲ್ಲಿ ಕಾಣುವ ಅವರ ಸಾಹಿತ್ಯ ಬದುಕಿನ ಜಂಜಾಟ, ಸಂಸಾರದ ಮೇಲಿನ ಸಿಟ್ಟು ಗುರುವಿನ ಮಹತ್ವ ಸಾರಿ ಹೇಳುತ್ತಿದೆ.
ಸಮಾಜದಲ್ಲಿ ಅಶಾಂತಿ ಕಾಣಸಿಗುತ್ತಿದೆ. ಅದನ್ನು ಬದಲಾಯಿಸುವ ಶಕ್ತಿ ಶರೀಫರ ಪದಗಳಲ್ಲಿ ಅಡಗಿವೆ ಎಂದರು.
ಬಿಡುಗಡೆ: ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೂಡಲದ ಗುರುನಂಜೇಶ್ವರ ಶ್ರೀಗಳು ಸಾಹಿತಿ ಕೆ.ಎಂ. ಸುಂಕದ ವಿರಚಿತ ಸಂಕಲ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರೀಫಗಿರಿಯ ವಿಶ್ವಸ್ಥ ಸಮಿತಿ ಧರ್ಮದರ್ಶಿ ಫಕ್ಕಿರಗೌಡ ಹಿರೇಗೌಡರ ವಹಿಸಿದ್ದರು. ಜಿಪಂ ಸದಸ್ಯರಾದ ಬಿ.ಟಿ. ಇನಾಮತಿ, ಪದ್ಮನಾಭ ಕುಂದಾಪುರ, ತಾಪಂ ಅಧ್ಯಕ್ಷೆ ಉಷಾ ಬಿಳೇಕುದರಿ, ಸದಸ್ಯರಾದ ನಿಂಗಣ್ಣ ಜವಳಿ, ವೀರನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಮಹಾದೇವಿ ವಾಲ್ಮೀಕಿ, ಉಪಾಧ್ಯಕ್ಷೆ ಮಹಾದೇವಪ್ಪ ರಟಗೇರಿ, ಶರೀಫಗಿರಿಯ ವಿಶ್ವಸ್ಥ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭ ಶಾಸಕ ಬಸವರಾಜ ಬೊಮ್ಮಾಯಿ, ಹಿರಿಯ ಪತ್ರಕರ್ತ ಪ್ರಕಾಶ ಜೋಶಿ, ದೂರದರ್ಶನ ನಿರ್ದೇಶಕ ಮಹೇಶ ಜೋಶಿ, ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.
ಬಸವರಾಜ ಮಳಲಿ ಸ್ವಾಗತಿಸಿದರು. ಎಸ್.ಎನ್. ಬ್ಯಾತನಾಳ ನಿರೂಪಿಸಿದರು.

ತತ್ವಪದ ಸಂಗ್ರಹಾಲಯ
ಶರೀಫರ ಹಾಗೂ ಗುರುಗೋವಿಂದ ಭಟ್ಟರ ತತ್ವಪದಗಳ ಸಂಗ್ರಹಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಶಿಶುವಿನಾಳ, ಕಳಸ ಅಭಿವೃದ್ಧಿಗೆ ಬಿಜೆಪಿ ಸರ್ಕಾರದಲ್ಲಿ ತಲಾ ರು. 3 ಕೋಟಿ ಒಪ್ಪಿಗೆ ನೀಡಲಾಗಿದೆ. ಅಭಿವೃದ್ಧಿ ಕೆಲಸಗಳು ನಿಲ್ಲುವುದಿಲ್ಲ. ಶರೀಫರು-ಗುರುಗೋವಿಂದ ಭಟ್ಟರ ಕುರಿತ ಕಾರ್ಯಕ್ರಮವನ್ನು ದೂರದರ್ಶನ ಹಿರಿಯ ನಿರ್ದೇಶಕ ಮಹೇಶ ಜೋಶಿ ಸಹಕಾರದಿಂದ ಪ್ರಸಾರ ಮಾಡುತ್ತೇವೆ.
ಬಸವರಾಜ ಬೊಮ್ಮಾಯಿ, ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.