ಕಡಿಮೆ ದರದಲ್ಲಿ ಗೊಬ್ಬರ ವಿತರಿಸಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜು. 5
ಕೃಷಿ ವ್ಯವಸಾಯೋತ್ಪನ್ನ ಪತ್ತಿನ ಸಹಕಾರಿ ಬ್ಯಾಂಕ್ಗಳನ್ನು (ಸೊಸೈಟಿ) ಆರ್ಥಿಕವಾಗಿ ಸಬಲಗೊಳಿಸುವ ಮೂಲಕ ಕಡಿಮೆ ದರದಲ್ಲಿ ರೈತರಿಗೆ ಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳುವಂತೆ ತಾಪಂ ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಆಗ್ರಹಿಸಿದ ಘಟನೆ ಶುಕ್ರವಾರ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜರುಗಿತು.
ಕ್ರಮ ಜರುಗಿಸಿ: ಕೃಷಿ ಇಲಾಖೆ ಮೇಲೆ ಚರ್ಚೆ ನಡೆದ ಸಂದರ್ಭದಲ್ಲಿ ಗೊಬ್ಬರ ಸಾಗಾಟ ವೆಚ್ಚವನ್ನು ಫೆಡರೇಶನ್ ನೀಡುತ್ತಿದೆ. ರೈತರಿಗೆ ಇದರಿಂದ ಪ್ರತಿ ಚೀಲಕ್ಕೆ ಸುಮಾರು ರು. 30ರಿಂದ 35ನಷ್ಟು ಉಳಿತಾಯವಾಗುತ್ತದೆ, ಆದರೆ, ತಾಲೂಕಿನಲ್ಲಿ 20ಕ್ಕೂ ಅಧಿಕ ವಿಎಸ್ಎಸ್ ಬ್ಯಾಂಕ್ಗಳಿವೆ. ಈ ಪೈಕಿ ಅರ್ಥಕ್ಕಿಂತ ಹೆಚ್ಚು ವಿಎಸ್ಎಸ್ಗಳು ಆರ್ಥಿಕವಾಗಿ ಸಬಲವಾಗಿಲ್ಲದ ಕಾರಣ ಗೊಬ್ಬರ ಖರೀದಿ ಸ್ಥಗಿತಗೊಳಿಸಿದ್ದು, ಖಾಸಗಿ ಡೀಲರ್ಗಳ ಬಳಿ ತೆಗೆದುಕೊಳ್ಳುವುದರಿಂದ ದುಬಾರಿ ಹಣ ನೀಡಬೇಕಾಗುತ್ತದೆ. ಎಲ್ಲ ವಿಎಸ್ಎಸ್ಗಳಿಗೆ ಖರೀದಿಗೆ ಮುಂದಾಗಲು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ವ್ಯಾಪ್ತಿಗೆ ಬರಲ್ಲ: ಇದಕ್ಕೆ ಎಡಿಎ ಟಿ.ಎಚ್. ನಟರಾಜ ಪ್ರತಿಕ್ರಿಯಿಸಿ, ಈ ಕುರಿತು ವಿಎಸ್ಎಸ್ಗಳಿಗೆ ಈಗಾಗಲೇ ಪತ್ರ ಮುಖಾಂತರ ವ್ಯವಹರಿಸಿದ್ದು, ಸ್ಥಳೀಯ ಸಮಸ್ಯೆ ಇರುವಂತಹ ಕೆಲ ವಿಎಸ್ಎಸ್ಗಳಲ್ಲಿ ಗೊಬ್ಬರ ಖರೀದಿ ಸ್ಥಗಿತಗೊಳಿಸಿದ್ದಾರೆ. ಆದರೆ, ಅವುಗಳ ಹಣಕಾಸಿನ ನಿಯಂತ್ರಣ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದರು.
ಬೇಜವಾಬ್ದಾರಿತನ: ಹೆಸ್ಕಾಂ ಅಧಿಕಾರಿ ದಾಸಪ್ಪ ಅವರನ್ನು ಕುರಿತು ತಾಲೂಕು ಪಂಚಾಯ್ತಿ ಇಓ ಕೆ. ಕೃಷ್ಣಮೂರ್ತಿ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ರಸ್ತೆ ಮಧ್ಯದಲ್ಲಿನ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು 2 ವರ್ಷಗಳೇ ಗತಿಸಿವೆ. ತಾಪಂ ಸಭೆಯಲ್ಲಿ ನಾಲ್ಕಾರು ಬಾರಿ ಚರ್ಚಿಸಿ ಆದೇಶ ನೀಡಲಾಗಿದೆ. ಹೆಸ್ಕಾಂ ಅಧಿಕಾರಿಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದೆ ಎಂದು ಹೇಳಿ ಕೈತೊಳೆದುಕೊಳ್ಳುತ್ತೀರಿ. ಆದರೆ, ಲೋಕೋಪಯೋಗಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂಬುದಾಗಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ವಿಷಯ ಪ್ರಕಟವಾದರೂ ಕಾರ್ಯ ಕೈಗೊಂಡಿಲ್ಲ. ಕಂಬಗಳನ್ನು ಕೂಡಲೇ ಸ್ಥಳಾಂತರಿಸಲು ಸೂಚಿಸಿದರು. ಈ ಕುರಿತು ಹೆಸ್ಕಾಂ ಅಧಿಕಾರಿ ದಾಸಪ್ಪ ಹಾಗೂ ಲೋಕೋಪಯೋಗಿ ಸಹಾಯಕ ಅಧಿಕಾರಿ ಟಿ.ಆರ್.ಗುಡಿ ಮಾತನಾಡಿ, ಜಂಟಿಯಾಗಿ ಕಾರ್ಯಕೈಗೆತ್ತಿಕೊಂಡು ಒಂದು ವಾರದೊಳಗೆ ಸ್ಥಳಾಂತರಿಸುವ ಭರವಸೆ ನೀಡಿದರು.
ವನ್ಯ ಜೀವಿಗಳಿಂದ ಬೆಳೆ ರಕ್ಷಿಸಿ: ಅರಣ್ಯ ಇಲಾಖೆ ಮೇಲೆ ಚರ್ಚೆ ನಡೆದ ಸಂದರ್ಭದಲ್ಲಿ ಅಧ್ಯಕ್ಷೆ ಚಿನ್ನವ್ವ ಫಾಸಿ ಮಾತನಾಡಿ, ತಾಲೂಕಿನ ಬಹುತೇಕ ರೈತರ ಹೊಲಗಳಲ್ಲಿ ಬಿತ್ತಿದ ಬೆಳೆಯನ್ನು ಜಿಂಕೆ ಹಾಗೂ ಕಾಡು ಹಂದಿಗಳು ಹಾನಿಪಡಿಸುತ್ತಿವೆ. ಒಬ್ಬೊಬ್ಬರಾಗಿ ರೈತರು ಹೊಲಗಳಿಗೆ ತೆರಳಲು ಭಯ ಬೀಳುತ್ತಿದ್ದಾರೆ. ಈ ಕುರಿತು ತಾಲೂಕಿನ ಬಹುತೇಕ ಕಡೆಗಳಲ್ಲಿ ರೈತರು ದೂರು ನೀಡಿದ್ದಾರೆ. ವನ್ಯ ಜೀವಿಗಳಿಂದ ರಕ್ಷಿಸಲು ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ವಲಯ ಅರಣ್ಯಾಧಿಕಾರಿ ಎಚ್.ಜಿ. ತಿಗರಿ ಪ್ರತಿಕ್ರಿಯಿಸಿ, ಪ್ರತಿವರ್ಷ ಈ ಸಮಸ್ಯೆ ಉದ್ಭವಾಗುತ್ತಿದೆ. ಕೆಲ ರೈತರು ಸಾಮೂಹಿಕ ಬಿತ್ತನೆ ಮೂಲಕ ಸ್ವಲ್ಪ ಮಟ್ಟಿನ ಪರಿಹಾರ ಕಂಡುಕೊಂಡಿದ್ದಾರೆ. ಆದರೆ, ಇಲಾಖೆಯು ಜಿಂಕೆಗಳನ್ನು ರಾಣಿಬೆನ್ನೂರು ಅಭಯಾರಣ್ಯಕ್ಕೆ ಸಾಗಿಸಲು ಹಿರಿಯ ಅಧಿಕಾರಿಗಳು ಚಿಂತನೆ ನಡೆಸಿದ್ದು, ಈ ಕುರಿತು ನಿನ್ನೆಯಷ್ಟೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅರಣ್ಯಾಧಿಕಾರಿಗಳ ಹಾಗೂ ರೈತ ಮುಖಂಡರ ವಿಶೇಷ ಸಭೆ ನಡೆದಿದ್ದು, ಅವರ ಸೂಚನೆ ಮರೆಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಮೊದಲು ಹೆಸರು ಹಾಕ್ರಿ: ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ತಮ್ಮ ಹೆಸರನ್ನು ಹಾಕದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಇಓ, ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು. ಪಶುವೈದ್ಯಾಧಿಕಾರಿ ಡಾ ನಾಗರಾಜ, ಅಕ್ಷರದಾಸೋಹ ಮೇಲ್ವಿಚಾರಕ ಪೀರ್ಜಾದೆ, ಸಮಾಜ ಕಲ್ಯಾಣಾಧಿಕಾರಿ ಎ. ಅಣ್ಣಪ್ಪ, ಶಿಶು ಯೋಜನಾಧಿಕಾರಿ, ಜೆ.ಟಿ. ಶಿರೋಳಕರ, ತೋಟಗಾರಿಕೆ ಅಧಿಕಾರಿ ಎಂ. ಚಿದಾನಂದ ಇತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

