ಹಾವೇರಿ

ಬೇಡಿಕೆ ಈಡೇರಿಸಲು ಸಿಎಂಗೆ ಒತ್ತಾಯ

Published On :

 ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜು. 8
ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ತಿಳಿಸಿದರು.
ಅವರು ರಟ್ಟಿಹಳ್ಳಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಸತತವಾಗಿ ಬರಗಾಲ ಆವರಿಸಿದ್ದು, ರೈತರ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ನೀರಾವರಿ ಪಂಪ್‌ಸೆಟ್‌ಗಳಿಗೆ ಕನಿಷ್ಠ 10 ತಾಸು ನಿರಂತರ ಗುಣ ಮಟ್ಟದ ವಿದ್ಯುತ್ ಪೂರೈಸಬೇಕು ಹಾಗೂ ರಾತ್ರಿ ವೇಳೆ 12 ತಾಸುಗಳ ಕಾಲ ಸಿಂಗಲ್ ಫೇಸ್ ವಿದ್ಯುತ್ ಪೂರೈಸಬೇಕು. ಸೌರಶಕ್ತಿ ವಿದ್ಯುತ್ ಬಳಕೆಗೆ ಹೆಚ್ಚಿನ ಒಲವು ತೋರಿಸಿ ವಿದ್ಯುತ್ ಕೊರತೆ ನೀಗಿಸಲು ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸಬೇಕು. ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ತಂತಿ ಕಂಬ ನೀಡಲು ಹಣ ತುಂಬಿಸಿಕೊಂಡು ಇದುವರೆಗೂ ಹಲವು ರೈತರಿಗೆ ವಿದ್ಯುತ್ ಕಂಬ, ಟಿಸಿ, ತಂತಿ ನೀಡಲು ವಿಳಂಬ ತಪ್ಪಿಸಿ ತಕ್ಷಣವೇ ವಿದ್ಯುತ್ ಸಂಪರ್ಕಕ್ಕೆ ಕಾಯಕಲ್ಪ ನೀಡಬೇಕು. ಹಲವಾರು ವಿದ್ಯುತ್ ಪರಿವರ್ತಕಗಳಿಗೆ ಬೇಕಾಬಿಟ್ಟಿ  ಪಂಪ್‌ಸೆಟ್ಟುಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದಾಗಿ ಯಂತ್ರಗಳು ಸುಟ್ಟು ಹೋಗುತ್ತಿವೆ. ಕಾರಣ ತುರ್ತಾಗಿ ಹೊಸ ಟಿಸಿಗಳನ್ನು ನೀಡಬೇಕು. ಬರಗಾಲದಿಂದ ತತ್ತರಿಸಿದ ರೈತರ ಬೆಳೆವಿಮೆ ನೀಡಿ ಸರ್ಕಾರ ಕೈತೊಳೆದುಕೊಂಡಿದೆ. ಆದರೆ, ಇದುವರೆಗೂ ಅದು ರೈತರಿಗೆ ಸಮರ್ಪಕವಾಗಿ ದೊರೆತಿಲ್ಲ. ತಕ್ಷಣವೇ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕು. ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ಕೊಳ್ಳುವುದು ದುಸ್ತರವಾಗಿದೆ. ಆದ್ದರಿಂದ ಪ್ರತಿಶತ 80 ರಿಯಾಯಿತಿ ದರದಲ್ಲಿ ಕೃಷಿ ಉಪಕರಣಗಳನ್ನು ಪೂರೈಸಬೇಕು. 60 ವರ್ಷ ಮೇಲ್ಪಟ್ಟ ರೈತರ ಜೀವನ ನಿರ್ವಹಣೆ ತುಂಬಾ ಶೋಚನೀಯವಾಗಿದೆ. ಆ ರೈತರಿಗೆ ನಿವೃತ್ತಿ ವೇತನ ನೀಡಬೇಕು. ಯಶಸ್ವಿನಿ ಯೋಜನೆಯ ಮೂಲಕ ರೈತರ ಆರೋಗ್ಯ ಕಾಪಾಡುವುದರ ಹಿನ್ನೆಲೆಯಲ್ಲಿ ಎಲ್ಲ ರೈತರನ್ನು ಸಹಕಾರಿ ಸಂಘಗಳಲ್ಲಿ ಸದಸ್ಯರನ್ನಾಗಿಸುವುದು. ಸಹಕಾರಿ ಸಂಘಗಳ ಮೂಲಕ ರೈತರಿಗೆ ಕನಿಷ್ಠ ರು. 5 ಲಕ್ಷ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸುವಂತಾಗಬೇಕು. ಸಾವಯವ ಕೃಷಿಗೆ ಉತ್ತೇಜನ ನೀಡಬೇಕು. ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸಹಕಾರಿ ಸಂಘಗಳ ಮೂಲಕ ರೈತರಿಗೆ ವಿತರಿಸಬೇಕು. ಕಂದಾಯ ಇಲಾಖೆಯಲ್ಲಿ ಖಾತೆ ಬದಲಾವಣೆ, ಪೋಡಿ ಮಾಡಿಸಲು ರೈತರು ತೀರಾ ಕಷ್ಟಪಡಬೇಕಾಗಿದೆ. ಪಹಣಿಗಳನ್ನು ರು. 5 ಗಳಿಗೆ ಕೊಡುವಂತಾಗಬೇಕು. ತಾಲೂಕಿನ ಗಡಿಭಾಗದಲ್ಲಿರುವ ಮದಗ ಮಾಸೂರು ಕೆರೆಯ ಹೂಳನ್ನು ತೆಗೆದು ಅಲ್ಲಿಂದ ಹಿರೇಕೆರೂರು ಕೆರೆಗೆ ನೀರು ಕೊಡುವ ಮೂಲಕ ಹಿರೇಕೆರೂರು ತಾಲೂಕು ರೈತರಿಗೆ ನೀರಾವರಿ ಅನೂಕೂಲ ಕಲ್ಪಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿದೆ ಎಂದರು.  
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ರಾಜಶೇಖರ ಜೋಗಿಹಳ್ಳಿ, ಬಿ.ಬಿ. ಕಿಚಡೇರ, ಲೋಕಪ್ಪ ಹುಲ್ಲತ್ತಿ, ಮಲ್ಲನಗೌಡ ಸೊರಟೂರ, ಶಿವನಗೌಡ ಪಾಟೀಲ, ಮಹೇಶ ಕುಸಗೂರ, ನಾಗನಗೌಡ ಮರಿಗೌಡ್ರ, ಷಡಕ್ಷರಿಗೌಡ ಚಿಗೌಡ್ರ, ಈರನಗೌಡ ಪ್ಯಾಟಿಗೌಡ್ರ, ಉಮೇಶ ಹೊಸಮನಿ, ಚಂದ್ರಪ್ಪ ಜೋಗಿಹಳ್ಳಿ, ಶ್ರೀಪಾದ ಆಚಾರ, ಶಿವಯೋಗಿ ಕೆಂಚಳ್ಳಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.