ಮತಾಂಧರಿಂದ ಧರ್ಮ ಅಧೋಗತಿಗೆ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜು. 9
ಧಾರ್ಮಿಕ ನೆಲೆಗಳ ಮೇಲೆ ನಡೆಯುತ್ತಿರುವ ಬಾಂಬ್ ದಾಳಿಗಳು ಅಮಾನವೀಯ ಕೃತ್ಯವೆಂದು ದಿಂಡದಹಳ್ಳಿ ಪಶುಪತಿ ಶಿವಾನಂದ ಶಿವಾಚಾರ್ಯ ಶ್ರೀಗಳು ಖಂಡಿಸಿದರು.
ತಾಲೂಕಿನ ಕದಮನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಅನುಷ್ಠಾನ ಕಾರ್ಯಕ್ರಮದಂಗವಾಗಿ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಧರ್ಮದ ಸಾರವನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದ ಮತಾಂಧರು ಹಿಂಸಾತ್ಮಕ ಚಟುವಟಿಕೆಯಲ್ಲಿ ತೊಡಗುವ ಮೂಲಕ ಧರ್ಮವನ್ನು ಅಧೋಗತಿ ತಳ್ಳುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿ ಪ್ರಭಾವಕ್ಕೊಳಗಾದ ಯುವಕರು ಕತ್ತಲೆ ಜಗತ್ತಿನ ಅಮಾನವೀಯ ಕೃತ್ಯಗಳಲ್ಲಿ ತೊಡಗುವ ಮೂಲಕ ಮನುಷ್ಯತ್ವವನ್ನೇ ಮರೆತಿದ್ದಾರೆ ಎಂದರು.
ಬಹು ಹಿಂದಿನಿಂದಲೂ ಮಠಗಳು ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದು ತಮ್ಮದೇ ಆದ ಪರಂಪರೆ ಹೊಂದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಸನ್ಯಾಸ್ಯತ್ವದ ಗಂಧಗಾಳಿಯೂ ಗೊತ್ತಿಲ್ಲದ ಕೆಲವರು ಮಠಗಳನ್ನು ಪ್ರಾರಂಭಿಸುವ ಮೂಲಕ ಹಣ ಮಾಡುವ ಕೇಂದ್ರಗಳನ್ನಾಗಿ ಮಾಡಿಕೊಂಡಿರುವುದು ದುರಂತವೇ ಸರಿ ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಯುವಶಕ್ತಿ ಸದ್ಬಳಕೆಯಾಗದೇ ಸಮಾಜಕ್ಕೆ ತಪ್ಪು ಸಂದೇಶಗಳು ರವಾನೆಯಾಗುತ್ತಿವೆ. ಬಣ್ಣದ ಜಗತ್ತಿನ ಪ್ರಭಾವಕ್ಕೆ ಒಳಗಾದ ಯುವ ಜನಾಂಗ ಮಾರ್ಗದರ್ಶನದ ಕೊರತೆಯಿಂದ ದಿಕ್ಕು ತಪ್ಪಿದಂತೆ ವರ್ತಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಧರ್ಮಪೀಠಗಳು ಜಾಗೃತಿ ಸಭೆಗಳನ್ನು ನಡೆಸುವ ಮೂಲಕ ಸಮಾಜ ಪರಿವರ್ತನೆಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಹಾವೇರಿ ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನಶ್ರೀಗಳು ಮಾತನಾಡಿ, ಹೆಚ್ಚಾಗುತ್ತಿರುವ ಜಾತಿಗಳ ನಡುವಿನ ಸಂಘರ್ಷದಿಂದ ಧರ್ಮದ ಮೂಲ ತತ್ವಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಸಮಾಜದಲ್ಲಿ ಜಾತಿಗಳ ಪ್ರಭಾವ ಕಡಿಮೆ ಯಾಗದಿದ್ದಲ್ಲಿ ಭವಿಷ್ಯ ದಿನಗಳು ಕತ್ತಲೆಯಂತಾಗಲಿವೆ ಎಂದರು.
ಶಹಾಪುರದ ಹಾಲಸಿದ್ಧೇಶ್ವರಶ್ರೀಗಳು, ನಂದಿಗಾವಿ ನಂದೀಶ್ವರಶ್ರೀ, ದುಗ್ಗತ್ತಿ ವೀರಭದ್ರಶ್ರೀ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಶೇಖಣ್ಣ ಮೈಲಾರ, ಯಲ್ಲನಗೌಡ ಪಾಟೀಲ ಮುಂತಾದವರು ಧರ್ಮಸಭೆಯಲ್ಲಿ ಇದ್ದರು.
ಶಿವಯೋಗಯ್ಯ ಹಿರೇಮಠ ಸ್ವಾಗತಿಸಿದರು. ರುದ್ರಯ್ಯ ಪ್ರಸಾದಿಮಠ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

