ಹಾವೇರಿ

ಬಜೆಟ್‌ನಲ್ಲಿ ಜಿಲ್ಲೆಗೆ ಸಿಗದ ಆದ್ಯತೆ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಜು. 13
ಅನ್ನ ದೇವರ ಮುಂದೆ ಇನ್ನು ದೇವರು ಇಲ್ಲ... ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಮುಂದೆ ಸರ್ವಜ್ಞನ ಈ ಸಾಲು ನೆನಪಿಸಿಕೊಂಡಿದ್ದೊಂದೆ ಬಂತು.
ಹಾವೇರಿ ಜಿಲ್ಲೆಯ ಸರ್ವಜ್ಞನ ಪ್ರಾಧಿಕಾರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಯವ್ಯಯದಲ್ಲಿ ಅನುದಾನ ಮೀಸಲಾಗಿರಸದೇ ಇರುವುದನ್ನು ನೋಡಿದಾಗ, ಮಹಾನ್ ದಾರ್ಶನಿಕರ ತತ್ವಾದರ್ಶ ಹಾಗೂ ಜೀವನ ಕ್ರಮಗಳ ಬಗ್ಗೆ ಮಾರುದ್ದದ ಭಾಷಣ ಮಾಡಲು ಸಾಧ್ಯವೇನೂ ಎಂಬಂತೆ ಭಾಸವಾಗದೇ ಇರಲಾರದು.
ಹುಸಿಯಾದ ನಿರೀಕ್ಷೆ: ಕಾಂಗ್ರೆಸ್ ಮೇಲೆ ಅತಿಯಾದ ನಿರೀಕ್ಷೆ ಹೊಂದಿದ್ದ ಜಿಲ್ಲೆಯ ಜನತೆ ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಏಳು ತಾಲೂಕುಗಳ ಪೈಕಿ ನಾಲ್ಕು ಕ್ಷೇತ್ರಗಳು ಕೈ ಪಾಲಾಗುವಂತೆ ನೋಡಿಕೊಂಡಿದ್ದರು. ಅಲ್ಲದೇ,  ಸಂಪುಟ ರಚನೆ ಸಂದರ್ಭದಲ್ಲಿ ಜಿಲ್ಲೆಯ ಒಬ್ಬ ಶಾಸಕರಿಗಾದರೂ ಮಂತ್ರಿಗಿರಿ ಸಿಕ್ಕೇ ಸಿಗುತ್ತದೆ ಎಂಬ ಆಶಾಭಾವನೆ ಹೊಂದಿದ್ದರು.
ಆದರೆ, ಜಿಲ್ಲೆಯ ಜನರ ಆಶೋತ್ತರಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿದ ಕಾಂಗ್ರೆಸ್ ಪಕ್ಷ, ಸಂಪುಟದಲ್ಲಿ ಜಿಲ್ಲೆಯ ಯಾರೊಬ್ಬರಿಗೂ ಅವಕಾಶ ನೀಡದಿರುವುದು ಸಹಜವಾಗಿಯೇ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.
ಈಡೇರದ ಬೇಡಿಕೆಗಳು: ಜಿಲ್ಲೆಯ ಪ್ರಮುಖ ಬೇಡಿಕೆಗಳ ಈಡೇರಿಕೆಯತ್ತಲೂ ಸಿಎಂ ಗಮನ ಹರಿಸದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯೇ ಸರಿ. ವೈದ್ಯಕೀಯ ಕಾಲೇಜ್ ಸ್ಥಾಪನೆ, ಸರ್ವಜ್ಞ ಪ್ರಾಧಿಕಾರಕ್ಕೆ ಹಣಕಾಸಿನ ನೆರವು, ಬ್ಯಾಡಗಿಯಲ್ಲಿ ಸ್ಪೈಸ್ ಪಾರ್ಕ್ ಸ್ಥಾಪನೆ ಕನಸನ್ನು ಸಿಎಂ ಸಿದ್ದರಾಮಯ್ಯ ಆದ್ಯತೆ ಮೇಲೆ ಈಡೇರಿಸಲಿದ್ದಾರೆ ಎಂಬ ಜನರ ವಿಶ್ವಾಸದ ಮೇಲೆ ತಣ್ಣೀರೆರಚಿದಂತಾಗಿದೆ.
ವಿಶೇಷ ಪ್ಯಾಕೇಜ್ ಇಲ್ಲ: ದೇವಿಹೊಸೂರು ಮೆಣಸಿನಕಾಯಿ ತಳಿ ಅಭಿವೃದ್ಧಿ ಕೇಂದ್ರಕ್ಕೆ ಮೂಲ ಸೌಕರ್ಯ ಒದಗಿಸಲು ಸೂಕ್ತ ಅನುದಾನ ಹಾಗೂ ಜಾನಪದ ವಿಶ್ವವಿದ್ಯಾಲಯಕ್ಕೆ ವಿಶೇಷ ಅನುದಾನ ಲಭಿಸಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ, ರಾಣಿಬೆನ್ನೂರು ಹತ್ತಿ ಮಾರುಕಟ್ಟೆ ಅಭಿವೃದ್ಧಿಗೂ ಯಾವುದೇ ರೀತಿಯ ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಿಲ್ಲ.
ತುಂಗಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ನೀಡಿಲ್ಲ. ಕವಿ ಕುವೆಂಪು ಅವರ ಕುಪ್ಪಳ್ಳಿ ಅಭಿವೃದ್ಧಿಗೊಳಿಸಿದಂತೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಜಿಲ್ಲೆಯ ವಿ.ಕೃ. ಗೋಕಾಕರ ತವರನ್ನು ಕಡೆಗಣಿಸಲಾಗಿದೆ.
ಸಂತ ಶ್ರೀ ಶಿಶುವಿನಹಾಳ ಶರೀಫರ ಶಿಶುವಿನಹಾಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಣಕಾಸಿನ ನೆರವು ನೀಡುವ ಪ್ರಸ್ತಾವನೆ ಬಜೆಟ್‌ನಲ್ಲಿ ಮಂಡಿಸಲಾಗಿಲ್ಲ. ಅಲ್ಲದೇ, ಶಿಗ್ಗಾಂವಿ ಏತ ನೀರಾವರಿಯ 2ನೇ ಹಂತದ ಯೋಜನೆ ಸೇರಿದಂತೆ ಜಿಲ್ಲೆಯಲ್ಲಿರುವ 24 ಏತ ನೀರಾವರಿಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿರುವುದು ಹಾಗೂ ಜಿಲ್ಲೆಯ ಪ್ರಮುಖ ಬೆಳೆಗಳಾದ ಗೋವಿನಜೋಳ ಹಾಗೂ ಹತ್ತಿ ಬೆಲೆಗಳನ್ನು ಆವರ್ತ ನಿಧಿಯಲ್ಲಿ ಸೇರಿಸದಿರುವುದು ರೈತ ಸಮುದಾಯದಲ್ಲಿ ಬೇಸರ ಮೂಡಿಸಿದ್ದು ಸುಳ್ಳಲ್ಲ.
ಅವ್ರು ಕೊಟ್ರು: ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್, ಬಜೆಟ್‌ನಲ್ಲಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸರ್ವಜ್ಞ ಪ್ರಾಧಿಕಾರಕ್ಕೆ ರು. 2 ಕೋಟಿ, ಕನಕದಾಸರ ಜನ್ಮಭೂಮಿ ಶಿಗ್ಗಾಂವಿ ತಾಲೂಕಿನ ಬಾಡ್‌ದಲ್ಲಿ ಯಾತ್ರಿಕರಿಗೆ ಮೂಲ ಸೌಲಭ್ಯ ಕಲ್ಪಿಸಲು ರು. 1 ಕೋಟಿ ಕಾಯ್ದಿರಿಸಿದ್ದರು. ಇವುಗಳ ಬಗ್ಗೆಯೂ ಸಿಎಂ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್‌ನಲ್ಲಿ ಪ್ರಸ್ತಾಪ ಮಾಡದಿರುವುದು ಶ್ರೀಸಾಮಾನ್ಯರಲ್ಲಿ ಬೇಸರ ಮೂಡಿಸಿದೆ.
   ಆದ್ದರಿಂದ ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್‌ನ್ನು ಆಲಿಸಿದ ಜಿಲ್ಲೆಯ ಜನರು,  ಬಿಜೆಪಿಗರು ಕೊಟ್ರು... ಕಾಂಗ್ರೆಸ್‌ನವರು ಕಸ್ಕೋಂಡ್ರು ಎಂದು ಆಡಿಕೊಳ್ಳುವಂತಾಗಿದೆ.
ಕೊಟ್ಟಿದ್ದೇನು?: ಬಜೆಟ್‌ನಲ್ಲಿ ಜಿಲ್ಲೆಯ ಮಟ್ಟಿಗೆ ಹೇಳಿಕೊಳ್ಳುವಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಸಂಬಂಧಿಸಿದಂತೆ ಪ್ರಸ್ತಾಪ ಮಾಡಲಾಗಿಲ್ಲ. ಸವಣೂರು ಏತ ನೀರಾವರಿ ಯೋಜನೆಗಳಲ್ಲಿ ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆ.
ಆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದು, ಹಾವೇರಿ ನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಸುವ ಯೋಜನೆ, ತುಂಗಭದ್ರಾ ನದಿಯ ಮೇಲ್ದಂಡೆಯ ಉಪ ಕಣಿವೆ ಪ್ರದೇಶ ವ್ಯಾಪ್ತಿಯಲ್ಲಿ ಬ್ಯಾಡಗಿ, ರಾಣಿಬೆನ್ನೂರು ನಗರಕ್ಕೆ ಕುಡಿಯುವ ನೀರು ಯೋಜನೆ, ಒಳಚರಂಡಿ ವ್ಯವಸ್ಥೆ ಒದಗಿಸಿಕೊಡುವುದನ್ನು ಹೊರತುಪಡಿಸಿ ಬಜೆಟ್‌ನಲ್ಲಿ ಜಿಲ್ಲೆಯ ಮಟ್ಟಿಗೆ ಯಾವುದೇ ನೂತನ ಹಾಗೂ ದಶಕಗಳಿಂದ ಬೇಡಿಕೆಗಳ ಈಡೇರಿಕೆಗೆ ಕಿಂಚಿತ್ತೂ ಗಮನಹರಿಸಲಾಗಿಲ್ಲ.
ಅರೆ ಕಾಸಿನ ಮಜ್ಜಿಗೆ  
ಜಿಲ್ಲೆಯ ಮಟ್ಟಿಗೆ ಬಜೆಟ್‌ನಲ್ಲಿ ನೀಡಿರುವ ಯೋಜನೆಗಳು ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.  ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿಗೊಳಿಸಲು ಕೃಷಿ ಬೆಲೆ ಆಯೋಗ ರಚನೆ, ರಾಜ್ಯದ 2 6 ಸಾವಿರ ಕೆರೆಗಳ ಅಭಿವೃದ್ಧಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ನಿರ್ಧಾರದಿಂದ ಜಿಲ್ಲೆಯಲ್ಲಿನ ನೂರಾರು ಕೆರೆಗಳಿಗೆ ಪುರ್ನಜನ್ಮ ಸಿಕ್ಕಂತಾಗಿದೆ ಎಂಬ ವಿಶ್ವಾಸ ಜನತೆ ವ್ಯಕ್ತಪಡಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಚೊಚ್ಚಲ ಬಜೆಟ್ ಹಾವೇರಿ ಜಿಲ್ಲೆಯ ಪಾಲಿಗೆ ಸಿಹಿ ಅನುಭವಕ್ಕಿಂತ ಹೆಚ್ಚಾಗಿ ಕಹಿ ಅನುಭವವನ್ನೇ ನೀಡಿದೆ. ಇದಕ್ಕೆ ತೆಪೆ ಹಚ್ಚುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸುವ ಗುರುತರ ಜವಾಬ್ದಾರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಯಾವ ರೀತಿಯಾಗಿ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

-ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.