ಹಾವೇರಿ

ಬೆಳೆಗೆ ರೋಗ: ಔಷಧೋಪಚಾರ ಮಾಡಿಸಿ

Published On :

ಹಾನಗಲ್ಲ: ಹದವಾದ ಮಳೆಗೆ ಹಾನಗಲ್ಲ ತಾಲೂಕಿನ ರೈತ ಸಮುದಾಯ ನೆಮ್ಮದಿ ನಿಟ್ಟುಸಿರುಬಿಟ್ಟು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಒಂದೆಡೆಯಾದರೂ ಭತ್ತ ಹಾಗೂ ಗೋವಿನ ಜೋಳ ಬೆಳೆಗಳಿಗೆ ರೋಗ ಬಾಧೆ ಕಂಡು ಬಂದಿದ್ದು, ಕೃಷಿ ಸಮುದಾಯ ನಿರ್ಲಕ್ಷಿಸದೇ ಔಷಧೋಪಚಾರ ಮಾಡಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ಮಾಡಿದ್ದಾರೆ.
ಹಾನಗಲ್ಲ ತಾಲೂಕಿನಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬಿತ್ತನೆ ಕಾರ್ಯ ಅತ್ಯಂತ ಸಕಾಲಿಕ ಹಾಗೂ ಸಮಾಧಾನ ತಂದಿದೆ. ಬತ್ತ ಬೆಳೆಯುವುದರಿಂದ ದೂರ ಸರಿಯುತ್ತಿರುವ ಹಾನಗಲ್ಲ ತಾಲೂಕಿನ ರೈತ ಸಮುದಾಯ ಗೋವಿನ ಜೋಳದ ಬೆಳೆಗೆ ಆಸಕ್ತಿ ತೋರಿರುವುದು ಈ ವರ್ಷವೂ ವಿಶೇಷವಾಗಿದೆ.
ವಿವಿಧ ಬೆಳೆ ಬಿತ್ತನೆ: ಹಾನಗಲ್ಲ ತಾಲೂಕಿನಲ್ಲಿ 18 ಸಾವಿರ ಹೆಕ್ಟೇರ್ ಬತ್ತ, 64 ಹೆಕ್ಟೇರ್ ಹೈಬ್ರಿಡ್ ಜೋಳ, 15 ಸಾವಿರ ಹೆಕ್ಟೇರ್ ಗೋವಿನ ಜೋಳ, 15 ಹೆಕ್ಟೇರ್ ರಾಗಿ, 17 ಹೆಕ್ಟೇರ್ ತೃಣ ಧಾನ್ಯಗಳು ಸೇರಿದಂತೆ 33,276 ಹೆಕ್ಟೇರ್‌ನಲ್ಲಿ ಈ ಧಾನ್ಯಗಳು ಬಿತ್ತನೆಯಾಗಿವೆ. 53 ಹೆಕ್ಟೇರ್ ದ್ವಿದಳ ಧಾನ್ಯ 1,234 ಹೆಕ್ಟೇರ್ ಎಣ್ಣೆಕಾಳು ಬೆಳೆಗಳು, 10,618 ಹೆಕ್ಟೇರ್ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಹಾನಗಲ್ಲ ತಾಲೂಕಿನ 48,980 ಹೆಕ್ಟೇರ್ ಕೃಷಿಭೂಮಿಯಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದ್ದು, ಈಗ 45,181 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡು ಉತ್ತಮ ಬೆಳೆ ಕಾಣುತ್ತಿದೆ. ಉಳಿದ ಕೃಷಿ ಭೂಮಿಯಲ್ಲಿ ಭತ್ತದ ನಾಟಿ ಇತರ ಕೆಲ ಬೆಳೆಗಳನ್ನು ಬಿತ್ತನೆ ಮಾಡಬೇಕಾಗಿದೆ.
ರೋಗ: ಹಾನಗಲ್ಲ ತಾಲೂಕಿನಲ್ಲಿ ಬತ್ತಕ್ಕೆ ಕಂದು ಕಪ್ಪುಚುಕ್ಕೆ ರೋಗ ಅಲ್ಲಲ್ಲಿ ಕಾಣಿಸಿಕೊಂಡಿದೆ. ಇದಕ್ಕೆ ರೈತರು ಕೂಡಲೆ ಔಷಧೋಪಚಾರ ಕೈಗೊಳ್ಳುವಂತೆ ಇಲಾಖೆ ಸೂಚಿಸಿದೆ. ಇದರೊಂದಿಗೆ ಗೋವಿನ ಜೋಳಕ್ಕೆ ಕೇದಿಗೆ ರೋಗ ತಾಲೂಕಿನಲ್ಲಿ ಶೇ. 35ರಷ್ಟು ಕಾಣಿಸಿಕೊಂಡಿದೆ. ಪೈರು ಹುಡಿ ಬಣ್ಣಕ್ಕೆ ತಿರುಗಿ ಹಳದಿ ಆಕಾರಕ್ಕೆ ಬಂದು ಒಣಗಿ ಸಾಯುವ ಸಂದರ್ಭಗಳಿವೆ. ರೈತರು ಕೂಡಲೆ ಔಷಧೋಪಚಾರ ಮೂಲಕ ಬೆಳೆಗಳನ್ನು ರಕ್ಷಿಸಿಕೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.
ಬೀಜ ಪೂರೈಕೆ: ಕೃಷಿ ಇಲಾಖೆ ರೈತರಿಗೆ ರಿಯಾಯತಿ ದರದಲ್ಲಿ 3,461 ಕ್ವಿಂಟಲ್ ಗೋವಿನ ಜೋಳ, 3,494 ಕ್ವಿಂಟಲ್ ಬತ್ತ, 984 ಕ್ವಿಂಟಲ್ ಸೋಯಾ ಅವರೆ, 29 ಕ್ವಿಂಟಲ್ ಶೇಂಗಾ ಬೀಜ ಸೇರಿದಂತೆ ಒಟ್ಟು 7,969 ಕ್ವಿಂಟಲ್ ಬಿತ್ತನೆ ಬೀಜವನ್ನು ರಿಯಾಯತಿ ದರದಲ್ಲಿ ರೈತರಿಗೆ ಪೂರೈಸಿದೆ.
ಹಾನಗಲ್ಲ ತಾಲೂಕಿನಲ್ಲಿ ಈವರೆಗೆ ವಾಡಿಕೆಯಷ್ಟು ಮಳೆಯಾಗಿಲ್ಲವಾದರೂ ಸದ್ಯದ ಮಟ್ಟಿಗೆ ಪೈರಿಗೆ ಅಗತ್ಯವಿರುವ ಮಳೆಯಾಗುವ ಮೂಲಕ ರೈತ ಉತ್ತಮ ಬೆಳೆ ಬರಬಹುದಾದ ಆಶಾದಾಯಕ ಮನಸ್ಥಿತಿಯಲ್ಲಿದ್ದಾನೆ. ಆದರೆ, ಹಾನಗಲ್ಲ ತಾಲೂಕಿನಲ್ಲಿ ನಿರೀಕ್ಷಿತ ಮಟ್ಟದ ಮಳೆಯಾಗಿಲ್ಲ ಎಂಬುದಕ್ಕೆ ತಾಲೂಕಿನ ಯಾವುದೇ ಕೆರೆ-ಕಟ್ಟೆಗಳಲ್ಲಿ ನೀರು ತುಂಬಿಲ್ಲದಿರುವುದೇ ಸಾಕ್ಷಿ. ಕೆರೆ-ಕಟ್ಟೆಗಳನ್ನು ಅವಲಂಬಿಸಿದ ಬತ್ತ ಬೆಳೆಯುವ ಕೃಷಿ ಭೂಮಿಯಲ್ಲೂ ಕೂಡಾ ಮಳೆಯ ಮೇಲಿನ ವಿಶ್ವಾಸ ಕಳೆದುಕೊಂಡ ರೈತ, ಬತ್ತದ ಹೊರತಾಗಿ ಗೋವಿನ ಜೋಳ, ಹತ್ತಿಯಂತಹ ಬಯಲು ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾನೆ.
ಈವರೆಗೆ ಹಾನಗಲ್ಲ ತಾಲೂಕಿನಲ್ಲಿ ಒಟ್ಟು 615 ಮಿ.ಮೀ ವಾಡಿಕೆ ಮಳೆಯಾಗಬೇಕಾಗಿತ್ತು. ಆದರೆ, ಜು. 15ರ ವರೆಗೆ ಕೇವಲ 350 ಮಿ.ಮೀ ಮಳೆ ಬಿದ್ದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ರೈತ ಯಾವ ಪೈರು ಬೆಳೆಯಬೇಕೆಂಬ ಗೊಂದಲ ಎದುರಿಸುತ್ತಿದ್ದಾನೆ.  
ಒಟ್ಟಿನಲ್ಲಿ ಹಾನಗಲ್ಲ ತಾಲೂಕಿನ ರೈತ ಸಮುದಾಯ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದು, ಮಳೆರಾಯ ಕೈ ಹಿಡಿದರೆ ಈ ವರ್ಷವಾದರೂ ಉತ್ತಮ ಫಸಲು ಪಡೆಯುವ ಭಾಗ್ಯ ಬರುವುದು ಸಾಧ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.