ಹಾವೇರಿ

ಪ್ರವಾಸಿಗರ ಆಕರ್ಷಣೆ ಮದಗ ಕೆರೆ

Published On :

ಹಿರೇಕೆರೂರು: ಐತಿಹಾಸಿಕ ಮದಗ-ಮಾಸೂರು ಕೆರೆ ಸತತವಾಗಿ ಸುರಿದ ಮಳೆ ನೀರಿನಿಂದ ಭರ್ತಿಯಾಗಿ ಜಲಧಾರೆ ಧುಮ್ಮುಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಧುಮ್ಮುಕ್ಕುವ ಜಲಧಾರೆ:  ಹಿರೇಕೆರೂರು ತಾಲೂಕಿನ ಗಡಿಭಾಗದಲ್ಲಿರುವ ಈ ಕೆರೆ ಐತಿಹಾಸಿಕ ಮಹತ್ವ ಪಡೆಯುವ ಮೂಲಕ ಜನಮನ ಸೆಳೆದಿದೆ. ಮದಗದ ಕೆಂಚವ್ವ 'ಮಾಯಾದಂತ ಮಳೆ ಬಂತಣ್ಣ' ಎಂಬ ಜಾನಪದ ಗೀತೆ ಈ ಐತಿಹಾಸಿಕ ಕೆರೆಯ ಮಹತ್ವವನ್ನು ತಿಳಿಸುತ್ತಿದೆ. ಹಲವಾರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ನೀರು ಹರಿದು ಬಂದು ಮದಗದ ಕೆರೆ ಭರ್ತಿಯಾಗಿ ತುಂಬಿ ತುಳುಕುವ ಮೂಲಕ ಜಲಪಾತ ಸೃಷ್ಟಿಸಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಕೆರೆ ಹೂಳು ತೆಗೆಯುವುದು ಹಾಗೂ ಪ್ರವಾಸಿ ತಾಣ ಮಾಡುವಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಎಂಥವರಿಗೂ ತಿಳಿಯುತ್ತಿದೆ. ಬ್ರಿಟಿಷ್ ಸರ್ಕಾರದಲ್ಲಿ ಕೆರೆಯನ್ನು ನಿರ್ಮಾಣ ಮಾಡಿದ್ದಾರೆ. ಬ್ರಿಟಿಷರು ಭಾರತ ಬಿಟ್ಟು ತೊಲಗಿ ಎಂಬ ಕರೆಗೆ ಹಲವಾರು ದಶಕಗಳೇ ಕಳೆಯುತ್ತಾ ಬಂದರೂ ಸರ್ಕಾರಗಳು ಇದರತ್ತ ಗಮನಹರಿಸದಿರುವುದು ಈ ಭಾಗದ ಜನತೆಯ ದೌರ್ಭಾಗ್ಯ.
ಪ್ರವಾಸಿ ತಾಣ: ಹಿರೇಕೆರೂರು ತಾಲೂಕಿನಲ್ಲಿ ಪ್ರವಾಸಿ ತಾಣಗಳನ್ನಾಗಿಸಲು ಹಲವಾರು ಅವಕಾಶಗಳಿದ್ದರೂ ಸಹ ಇದರತ್ತ ಗಮನಹರಿಸಿಲ್ಲ. ಮದಗದ ಕೆರೆಯ ದಂಡೆಯ ಮೇಲ್ಭಾಗದಲ್ಲಿ ಮದಗದ ಕೆಂಚವ್ವನ ದೇವಸ್ಥಾನ ಜನಮನ ಸೆಳೆದೆರೆ, ಹಿಂದಿನ ಕಾಲದಲ್ಲಿದ್ದ ಬ್ರಿಟಿಷರು ನೂರು ಅಡಿ ಎತ್ತರದ ಗುಡ್ಡವನ್ನು ಸುಮಾರು   ಎರಡೂವರೆ ಕಿಲೋ ಮೀಟರ್‌ಗಿಂತ ಹೆಚ್ಚು ಗುಡ್ಡದಡಿಯಲ್ಲಿ ಸುರಂಗ ಮಾರ್ಗವಾಗಿ ಮಾಡಿ ನೀರಿನ ಕಾಲುವೆ ನಿರ್ಮಿಸಿರುವುದು ನೋಡಲು ಅತಿ ಅದ್ಭುತವಾಗಿದೆ. ಹಾಗೆಯ ಕೆರೆಯ ದಂಡೆಯಲ್ಲಿ ಮುಂದೆ ಸಾಗಿದರೆ, ಕೆರೆಯೂ ಗುಡ್ಡವನ್ನು ಸೀಳಿ ತಾನೆ ಮುಂದೆ  ಸಾಗಿರುವುದು ಇದೀಗ ಜಲಪಾತವಾಗಿ ಕಾಣುತ್ತಿದೆ. ಜೋಗದ ನೆನಪನ್ನು ಮಾಡಿಕೊಡುತ್ತಿದೆ. ಇದನ್ನು ಕೆರೆಯ ಒಡಕು ಎಂದು ಕರೆಯುತ್ತಾರೆ. ಅಲ್ಲಿಂದ ಮುಂದೆ ಸಾಗಿದರೆ ಹೆಚ್ಚುವರಿ ನೀರು ಕುಮದ್ವತಿ ನದಿಯಾಗಿ ತಾಲೂಕಿನ ತಿಪ್ಪಾಯಿಕೊಪ್ಪ, ಮಾಸೂರು, ಖಂಡೇಬಾಗೂರು, ಹಿರೇಮೊರಬ, ಯಲಿವಾಲ, ತೋಟಗಂಟಿ, ರಟ್ಟಿಹಳ್ಳಿ, ಮಾದಾಪುರ, ರಾಣಿಬೆನ್ನೂರು ತಾಲೂಕಿನ ಚಿಕ್ಕಮಾಗನೂರು, ಹಿರೇಮಾಗನೂರು ಗೋಡಿಹಾಳ ಕುಪ್ಪೇಲೂರು ಮೂಲಕ ಹರಿದು ಅನ್ವೇರಿ ಬಳಿಯಿರುವ ಕೂಡಲ ಎಂಬಲ್ಲಿ ತುಂಗಭದ್ರಾ ನದಿ ಸೇರುತ್ತಿದೆ.
ಪುಣ್ಯಸ್ನಾನ: ತುಂಗಭದ್ರಾ ನದಿಗೆ ಅಲ್ಲಲ್ಲಿ ಬಂದಾರ ನಿರ್ಮಿಸಿ ನೀರನ್ನು ತಡೆದು ನೀರಿನ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಪ್ರತಿವರ್ಷ ಜನವರಿ ತಿಂಗಳಲ್ಲಿ ಸಂಕ್ರಾಂತಿ ದಿನ ಜನಸಾಗರ ಹರಿದು ಬರುತ್ತಿದೆ. ಇಲ್ಲಿಯೇ ಪುಣ್ಯಸ್ನಾನ ಮಾಡುವ ಮೂಲಕ ಭಕ್ತರು, ಪ್ರವಾಸಿಗರು ಪುನೀತರಾಗುತ್ತಾರೆ.
ಮಾಡಬೇಕಾಗಿರುವುದೇನು: ತಾಲೂಕಿನ ಗಡಿ ಭಾಗದಲ್ಲಿರುವ ಮದಗದ ಕೆರೆಯ ದಂಡೆ ಬಹು ವಿಶಾಲವಾಗಿದೆ. ಸಮೀಪದಲ್ಲಿ ಗುಡ್ಡವಿರುವದರಿಂದ ಉದ್ಯಾನವನಗಳನ್ನು ನಿರ್ಮಿಸಿರುವುದು ಮತ್ತು ಮಾಸೂರು ಶಿಕಾರಿಪುರ ರಸ್ತೆಯಿಂದ ಮದಗದ ಕೆರೆಯ ವೆರೆಗೆ ಉತ್ತಮ ರಸ್ತೆ ಕಲ್ಪಿಸಿದರೆ ಪ್ರವಾಸಿಗರು ಬಂದು ಹೋಗಲು ಅನುಕೂಲವಾಗುತ್ತಿದೆ.
  ಉತ್ತಮ ರಸ್ತೆ ಸಂಪರ್ಕ ಇಲ್ಲದಿರುವುರಿಂದ ಇದು ಐತಿಹಾಸಿಕ ಪ್ರವಾಸಿಗರ ತಾಣವಾಗಿದ್ದರೂ ಪ್ರವಾಸಿಗರ ಪಾಲಿಗೆ ಇಲ್ಲದಂತಾಗಿದೆ. ಇನ್ನಾದರೂ ಸರ್ಕಾರ ಇದರತ್ತ ಗಮನಹರಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕಾಗಿದೆ. ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಈ ಭಾಗದ ಜನತೆಗೆ ಸಿಗುವ ಮೂಲಕ ನಿರುದ್ಯೋಗವನ್ನು ಹೋಗಲಾಡಿಸುವುದು ಹಾಗೂ ಬಂದ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲು ಸಾಧ್ಯವಿದೆ. ಹಾಗೂ ಪ್ರವಾಸೋದ್ಯಮ ಇಲಾಖೆಗೂ ಹೆಚ್ಚಿನ ಲಾಭವಾಗುವುದರಲ್ಲಿ ಸಂದೇಹವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಕಾಶ ಹುಕ್ಕೇರಿ ಪ್ರವಾಸೋದ್ಯಮ ಸಚಿವರ ಗಮನ ಸೆಳೆಯುವ ಮೂಲಕ ಕಾಮಗಾರಿ  ಕಾಯಕಲ್ಪ ನೀಡುವ ಮೂಲಕ ತಾಲೂಕನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಶ್ರಮಿಸಬಲ್ಲರೇ ಕಾದು ನೋಡಬೇಕಿದೆ.
-ಗಂಗಾಧರ ಹಲಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.