ಜಾವಿವಿ ಜಾನಪದ ಸಿದ್ಧಾಂತ ರೂಪಿಸಲಿ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜು. 23
ವಿಜ್ಞಾನ ಹಾಗೂ ಜಾನಪದಗಳ ನಡುವೆ ಅನುಸಂಧಾನದ ಅವಶ್ಯಕತೆ ಇದೆ. ಜಾನಪದಕ್ಕೆ ಅದರದ್ದೇ ಆದ ಸಿದ್ಧಾಂತ ರೂಪಿಸಬೇಕಾದ ಜವಾಬ್ದಾರಿ ವಿಶ್ವವಿದ್ಯಾಲಯದ ಮೇಲೆ ಇದೆ ಎಂದು ಹೆಸರಾಂತ ವಿದ್ವಾಂಸ ಪ್ರೊ ಆರ್.ವಿ.ಎಸ್. ಸುಂದರಂ ಸಲಹೆ ನೀಡಿದರು.
ತಾಲೂಕಿನ ಗೋಟಗೊಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ದ್ವಿತೀಯ ವರ್ಷದ ಸಂಸ್ಥಾಪನಾ ದಿನಾಚರಣೆಯ ಸಂವಾದಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಂಶೋಧನಾ ಪುಸ್ತಕ ಮುದ್ರಣವಾಗಲಿ: ಅಂತಾರಾಷ್ಟ್ರೀಯ ಜರ್ನಲ್ಗಳನ್ನು ಪ್ರಕಟಿಸುವುದು, ಹಳ್ಳಿಗಾಡಿನ ಹಿರಿಯರ ಆತ್ಮಕತೆಗಳ ಬರವಣಿಗೆಗೆ ಕ್ರಮ ವಹಿಸುವುದು, ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನದ ಪುನರುತ್ಪಾದನೆಯಲ್ಲಿ ತೊಡಗುವುದು, ಈವರೆಗೂ ಜಾನಪದ ಕ್ಷೇತ್ರದಲ್ಲಾದ ಎಂಫಿಲ್ ಹಾಗೂ ಪಿಎಚ್ಡಿ ಸಂಶೋಧನಾ ಪ್ರಬಂಧಗಳ ಪರಿಚಯಾತ್ಮಕ ಪುಸ್ತಕ ಹೊರತರುವುದು ಮುಂತಾದ ಅಮೂಲ್ಯವಾದ ಸಲಹೆ-ಸೂಚನೆ, ಅಭಿಪ್ರಾಯಗಳು 'ವಿಶ್ವವಿದ್ಯಾಲಯದ ಮುಂದಿನ ಹೆಜ್ಜೆಗಳು' ಎಂಬ ಸಂವಾದಗೋಷ್ಠಿಯಲ್ಲಿ ವ್ಯಕ್ತವಾದವು.
ವಿಶ್ರಾಂತ ಪ್ರಾಧ್ಯಾಪಕ ಕಾಳೇಗೌಡ ನಾಗವಾರ ಮಾತನಾಡಿ, ತತ್ವಪದಕಾರರ ಪರಂಪರೆ ಕುರಿತು ಹೆಚ್ಚಿನ ಅಧ್ಯಯನಗಳು ಆಗಬೇಕಿದ್ದು, ಸರ್ಕಾರದ ನೆರವು ಪಡೆದುಕೊಂಡು ಹೆಚ್ಚಿನ ಮಟ್ಟದಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ತಿಳಿಸಿದರು.
ಸಾಮೂಹಿಕ ಪ್ರಯತ್ನವಿರಲಿ: ವಿಶ್ರಾಂತ ಪ್ರಾಧ್ಯಾಪಕ ಪ್ರೊ ತೀ.ನಂ. ಶಂಕರನಾರಾಯಣ, ಭಾರತದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಇರುವ ಭಾಷಾ ಅಧ್ಯಯನ ವಿಭಾಗ ಇಲ್ಲವೇ ಜಾನಪದ ಅಧ್ಯಯನ ವಿಭಾಗಗಳ ಜೊತೆಗೂಡಿ ಕಾರ್ಯಕ್ರಮ ರೂಪಿಸಿದರೆ ಮಾತ್ರ ಜಗತ್ತಿಗೆ ಮಾದರಿಯಾಗುವ ನಿಟ್ಟಿನಲ್ಲಿ ಜಾನಪದ ವಿಶ್ವವಿದ್ಯಾಲಯ ಬೆಳೆಯಲಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ ಮಾತನಾಡಿ, ವಿದ್ವಾಂಸರು ನೀಡಿದ ಸಲಹೆ, ಸೂಚನೆಗಳನ್ನು ಗೌರವಪೂರ್ವಕವಾಗಿ ಸ್ವೀಕರಿಸಿ ಅವುಗಳನ್ನು ಆಡಳಿತದ ಅವಧಿಯಲ್ಲಿ ಕಾರ್ಯರೂಪಕ್ಕೆ ತರಲು ಶ್ರಮಿಸಲಾಗುವುದು. ವಿಶ್ವವಿದ್ಯಾಲಯದ ಸರ್ವಾಂಗೀಣ ಬೆಳವಣಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ಎಲ್ಲ ವಿದ್ವಾಂಸರಿಗೆ ವಿಶ್ವವಿದ್ಯಾಲಯದ ವತಿಯಿಂದ ಗಂಧದ ಹಾರ ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಂವಾದ ಗೋಷ್ಠಿಯಲ್ಲಿ ನಾಡಿನ ಖ್ಯಾತ ವಿದ್ವಾಂಸ ಡಾ ಎಂ.ಜಿ. ಬಿರಾದಾರ, ಡಾ ಶ್ರೀರಾಮ ಇಟ್ಟಣ್ಣವರ, ಡಾ ದೇವರಕೊಂಡಾರೆಡ್ಡಿ, ಡಾ ಯು.ಪಿ. ಚಂದ್ರಶೇಖರ್, ಡಾ ಚಕ್ಕೆರೆ ಶಿವಂಶಂಕರ್, ಪ್ರೊ ಶಾಲಿನಿ ರಘುನಾಥ, ಸಾಹಿತಿ ಸತೀಶ ಕುಲಕರ್ಣಿ, ಡಾ ಶ್ರೀಶೈಲ ಹುದ್ದಾರ, ಡಾ ರಾಮು ಮೂಲಗಿ ಮುಂತಾದವರು ಪಾಲ್ಗೊಂಡು ಸಲಹೆಗಳನ್ನು ನೀಡಿದರು.
ಖ್ಯಾತ ಜಾನಪದ ತಜ್ಞರು, ಹಿರಿಯ ವಿದ್ವಾಂಸ ಗೊ.ರು. ಚನ್ನಬಸಪ್ಪ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಡಾ ಸಿ.ಎ. ಸೋಮಶೇಖರಪ್ಪ, ಹಿರಿಯ ಸಂಶೋಧನಾ ಅಧಿಕಾರಿ ಡಾ ಕೆ. ಪ್ರೇಮಕುಮಾರ, ಪ್ರಾಧ್ಯಾಪಕ ಪ್ರೊ ಚಂದ್ರ ಪೂಜಾರಿ, ವಿಶ್ವವಿದ್ಯಾಲಯದ ತಾಂತ್ರಿಕ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಬಂಡಿವಡ್ಡರ ಹಾಗೂ ಲೇಖಕರಾದ ಕಾ.ತ. ಚಿಕಣ್ಣ, ಡಾ ಭೋಜರಾಜ ಪಾಟೀಲ, ವಿಶ್ವವಿದ್ಯಾಲಯದ ವಿವಿಧ ಯೋಜನೆಗಳ ಕಾರ್ಯನಿರ್ವಾಹಕ ಸಂಪಾದಕರು, ಕ್ಷೇತ್ರ ತಜ್ಞರು ಇನ್ನಿತರರು ಉಪಸ್ಥಿತರಿದ್ದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ ಸ.ಚಿ. ರಮೇಶ ಸ್ವಾಗತಿಸಿದರು. ಕ್ಷೇತ್ರ ಸಹಾಯಕ ಸಂಗಮೇಶ ಎಸ್. ಗಣಿ ಕಾರ್ಯಕ್ರಮ ನಿರ್ವಹಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕ ಡಾ ವೃಷಭಕುಮಾರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

