ಕಾಗಿನೆಲೆ ವಿಶ್ವ ಪ್ರವಾಸಿ ತಾಣವಾಗಿಸಲು ಶ್ರಮ
ಬ್ಯಾಡಗಿ: ಸರ್ಕಾರದ ಸಹಕಾರದೊಂದಿಗೆ ಕನಕದಾಸರ ಕರ್ಮಭೂಮಿ ಕಾಗಿನೆಲೆ ಕ್ಷೇತ್ರವನ್ನು ವಿಶ್ವಪ್ರಸಿದ್ಧ ಪ್ರವಾಸಿ ತಾಣ ವನ್ನಾಗಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಖ್ಯಾತ ಉದ್ಯಮಿ, ಶಾಸಕ ಅಶೋಕ ಖೇಣಿ ತಿಳಿಸಿದರು.
ತಾಲೂಕಿನ ಕಾಗಿನೆಲೆ ಗ್ರಾಮದ ಕನಕಗುರುಪೀಠದ ಆವರಣದಲ್ಲಿ ನಿರ್ಮಿಸಿದ ಮಾಳಿಂಗರಾಯ ವಿದ್ಯಾರ್ಥಿ ನಿಲಯದ ಉದ್ಘಾಟನೆ ಹಾಗೂ ದಾಸೋಹ ಭವನ ಶಂಕುಸ್ಥಾಪನೆ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಪೂರ್ಣ ಸಹಕಾರ: ಕನಕದಾಸರ ವಿಚಾರಧಾರೆಗಳು ಜನರಿಗೆ ತಲುಪಿಸುವ ಕಾರ್ಯವಾಗಬೇಕಾಗಿದೆ. ಹೀಗಾಗಿ ಕನಕರ ಕರ್ಮಭೂಮಿ ಕಾಗಿನೆಲೆಯನ್ನು ವಿಶ್ವ ಪ್ರವಾಸಿ ತಾಣವನ್ನಾಗಿಸಬೇಕೆಂಬುದು ನಮ್ಮೆಲ್ಲರ ಸದಿಚ್ಛೆಯಾಗಿದೆ. ಇದಕ್ಕಾಗಿ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಗೌಡರಿಗೆ ಗುದ್ದು: ಮಗನನ್ನು ಮುಖ್ಯಮಂತ್ರಿ ಮಾಡಬೇಕೆಂದು ಕಂಡ ಕಂಡಲ್ಲಿ ಕಣ್ಣೀರಿಟ್ಟು ಮತಯಾಚನೆ ನಾಟಕವಾಡಿದರೂ ರಾಜ್ಯದ ಜನತೆ ಜಾತಿಯನ್ನು ತಿರಸ್ಕರಿಸಿ ಅಭಿವೃದ್ಧಿಗಾಗಿ ಸಿದ್ಧರಾಮಯ್ಯ ಅವರಿಗೆ ಬಹುಮತ ನೀಡಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಚುಚ್ಚಿದರು.
ವಾಗ್ದಾನದಂತೆ ನಡೆ: ಈ ಹಿಂದೆ ಶ್ರೀಮಠದ ಸ್ವಾಮೀಜಿಯವರ ಆಶಯದಂತೆ ಮಠಕ್ಕೆ ಭೇಟಿ ನೀಡಿದ್ದಾಗ ಮಠದಲ್ಲಿ ಮೂಲಸೌಕರ್ಯಗಳಿಂದ ವಂಚಿತರಾಗಿ, ಅನಾಥರಾಗಿದ್ದ ಮಕ್ಕಳನ್ನು ಕಂಡು ಅವರ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನನ್ನ ಸ್ವಂತ ರು. 2 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಿಸಿಕೊಡುವುದಾಗಿ ವಾಗ್ದಾನ ನೀಡಿದ್ದೆ. ಈಗ ಅದನ್ನು ಈಡೇರಿಸಿದ್ದೇನೆ. ಕಾಗಿನೆಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ವಿಶ್ವ ಪ್ರವಾಸೋದ್ಯಮ ತಾಣವನ್ನಾಗಿ ಮಾಡಬೇಕಿದೆ ಎಂದರು.
ಸಿದ್ದರಾಮಯ್ಯರಿಂದ ಹಳ್ಳಿ ಅಭಿವೃದ್ಧಿ: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಆಯ್ಕೆಯಾದ ಬಳಿಕ ಸುವರ್ಣ ಯುಗ ಆರಂಭವಾಗುತ್ತಿದೆ. ಅರವತ್ತು ವರ್ಷಗಳಿಂದ ರಾಜ್ಯದ ಹಳ್ಳಿಗಳು ಅಭಿವೃದ್ಧಿ ಕಂಡಿಲ್ಲ. ಆದರೆ, ಮುಂದಿನ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಎಲ್ಲ ಹಳ್ಳಿಗಳನ್ನು ಅಭಿವೃದ್ಧಿಪಡಿಸಲಿದ್ದಾರೆ ಎಂದರು.
ವಿಷಾದ: ರಾಜ್ಯದಲ್ಲಿಯೇ ಬೀದರ ಜಿಲ್ಲೆ ಸಾಕಷ್ಟು ಹಿಂದುಳಿದಿದೆ. ಸರಿಯಾದ ಆಸ್ಪತ್ರೆ ಇಲ್ಲ, ಕುಡಿಯಲು ಶುದ್ಧ ನೀರಿಲ್ಲ, ಹೇಳಿಕೊಳ್ಳುವಂತಹ ರಸ್ತೆಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಲು ಸಚಿವರ ಮನೆ ಮುಂದೆ ಕುಳಿತುಕೊಳ್ಳಲು ಹಿಂಜರಿಯುವುದಿಲ್ಲ ಎಂದರು.
ಚುನಾವಣೆ ಸಂದರ್ಭ ಬಡವರ ಪ್ರೀತಿ ಗಳಿಸಿ ಶಾಸಕರಾದ ಕೆಲವರು ಬಳಿಕ ಶ್ರೀಮಂತರ ಪ್ರೀತಿ ಗಳಿಸಲು ಹವಣಿಸುತ್ತಾರೆ ಎಂದು ದೂರಿದರು. ಇಂತಹ ಚಾಳಿಯನ್ನು ಬಿಟ್ಟು ಬಡವರ ಸೇವೆ ಮಾಡಬೇಕು ಎಂದು ತಿಳಿಸಿದರು. ಪ್ರತಿಯೊಬ್ಬರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಎಲ್ಲರಲ್ಲಿಯೂ ಒಂದೇ ರೀತಿ ಬುದ್ಧಿಮಂತಿಕೆ ಇರುತ್ತದೆ. ಆದರೆ, ಬಡ ಮಕ್ಕಳಿಗೆ ಅವಕಾಶಗಳು ದೊರೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

