ಅಕ್ಷರ ದಾಸೋಹ ರಾಜ್ಯಕ್ಕೆ ಮಾದರಿ!
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜೂ. 9
ಸಾರ್ವಜನಿಕರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ನೀಡಿರುವ ಸಹಕಾರದ ಫಲವಾಗಿ ತಾಲೂಕು ಮಟ್ಟದಲ್ಲಿ ಅನುಷ್ಠಾನಗೊಂಡ ಅಕ್ಷರ ದಾಸೋಹ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಲು ಕಾರಣವಾಗಿದೆ ಎಂದು ತಾಲೂಕು ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ಎಂ.ಎಚ್. ಪಾಟೀಲ ಹೇಳಿದರು.
ತಾಲೂಕು ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾಗಿದ್ದ ಎಂ.ಎಚ್. ಪಾಟೀಲ ಅವರನ್ನು ಬೆಳಗಾವಿಯ ಡಯಟ್ ಕಾಲೇಜಿಗೆ ಇಂಗ್ಲಿಷ್ ಉಪನ್ಯಾಸಕರೆಂದು ಸರ್ಕಾರ ಪದೋನ್ನತ್ತಿಗೊಳಿಸಿರುವ ನಿಮಿತ್ತ ಬೆಳಗಾವಿಗೆ ತೆರಳುತ್ತಿರುವ ಎಂ.ಎಚ್ ಪಾಟೀಲರನ್ನು ಅಭಿನಂದಿಸುವುದಕ್ಕಾಗಿ ತಾಪಂ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಾರ್ವಜನಿಕ ಮೆಚ್ಚುಗೆ ಕಾರ್ಯ
ಅಧಿಕಾರ ಶಾಸ್ವತವಾದುದ್ದಲ್ಲ. ಅಧಿಕಾರದಲ್ಲಿರುವಷ್ಟು ಸಮಯ ಮತ್ತು ಸಾರ್ವಜನಿಕರು ಹಾಗೂ ನಮ್ಮ ಕೆಳಗಿನ ನೌಕರರು ನೀಡುವ ಸಹಕಾರ ಸದುಪಯೋಗಪಡಿಸಿಕೊಂಡು ಸಾರ್ವಜನಿಕರು ಮತ್ತು ಸರ್ಕಾರ ಮೆಚ್ಚುವಂತ ಕೆಲಸ ಮಾಡಿದ ಸಂತೃಪ್ತಿ ನನಗಿದೆ ಎಂದರು.
ಜನತೆ ಸಹಕಾರ ಮರೆಯೊಲ್ಲ
ಶಾಲೆ ದಾಖಲಾತಿಗಳಲ್ಲಿ ದಾಖಲಾಗುವ ಹಾಗೂ ಹಾಜರಾತಿಯಲ್ಲಿ ಹಾಜರಾಗುವ ಮಕ್ಕಳ ಸಂಖ್ಯೆಯಲ್ಲಿ ಸಮಾನಾಂತರ ಕಾಪಾಡುವುದಕ್ಕಾಗಿ ಹಾಗೂ ಬಡವರ ಮಕ್ಕಳು ಶಿಕ್ಷಣ ಇಲಾಖೆ ಸೌಲಭ್ಯ ಪಡೆಯಲು ಪೂರಕ ಶಕ್ತಿ ಒದಗಿಸುವುದಕ್ಕಾಗಿ ಸರ್ಕಾರ 10 ವರ್ಷಗಳ ಹಿಂದೆಯೇ ಅಕ್ಷರ ದಾಸೋಹ ಕಾರ್ಯಕ್ರಮ ಜಾರಿಗೆ ತಂದಿದ್ದು, ತಾಲೂಕಿನ 35 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿನ ಸರ್ಕಾರಿ ಪ್ರಾರ್ಥಮಿಕ, ಪ್ರೌಢ ಹಾಗೂ ಖಾಸಗಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಮಹತ್ತರ ಕಾರ್ಯದಲ್ಲಿ 8 ವರ್ಷಗಳಲ್ಲಿ ಉತ್ತಮ ಪ್ರಗತಿ ಸಾಧಿಸಲು ಹಾಗೂ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗುವಂತೆ ಸಾಧನೆ ಮಾಡಲು ತಾಲೂಕಿನ ಸಮಸ್ತ ಜನತೆ ನೀಡಿರುವ ಸಹಕಾರವನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.
ಸೇವೆ ಮರೆಯಲು ಅಸಾಧ್ಯ
ಸರ್ಕಾರಿ ಸೌಲಭ್ಯಗಳಿಂದ ವಂಚಿತಗೊಂಡಿದ್ದ ಹಾಗೂ ತಾಲೂಕಿನ ಕಟ್ಟಕಡೆಯ ಪುಟ್ಟ ಗ್ರಾಮವೆಂಬ ಖ್ಯಾತಿಗೆ ಪಾತ್ರವಾಗಿದ್ದ ಪತ್ತೆಪುರ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದ ದಿ. ಹನುಮಂತಗೌಡ ಪಾಟೀಲರ ಮಗ ಹಾಗೂ ಕನ್ನಡ ಮಾಧ್ಯಮದಲ್ಲಿ ಓದಿದವನಾದ ನಾನು ಬೆಳಗಾವಿಯ ಡಯಟ್ ಕಾಲೇಜಿನಲ್ಲಿ ಓದುವವರಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ ಹೇಳಲು ತೆರಳುತ್ತಿರುವುದನ್ನು ನನ್ನ ತಂದೆ ನೋಡಿದ್ದರೆ ಅದೆಷ್ಟು ಸಂತಸ ಪಡುತ್ತಿದ್ದರೇನೊ ಹೇಳತೀರದೆಂದು ತಂದೆಯವರನ್ನು ನೆನೆದು ಪಾಟೀಲರು ಕಂಬನಿ ಮಿಡಿದರು.
ತಾಲೂಕು ಪಂಚಾಯಿತಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಡಾ. ನಾಗನಗೌಡ ಮಾತನಾಡಿ, ತಾಲೂಕಾದ್ಯಂತ ಅಕ್ಷರ ದಾಸೋಹ ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ಎಂ.ಎಚ್. ಪಾಟೀಲರು ಸಾಧಿಸಿದ ಸಾಧನೆಗಳ ಕುರಿತು ವಿವರಿಸಿದರು.
ವ್ಯವಸ್ದಾಪಕ ಶಿವಾನಂದ ಕುದರಿ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಅಕ್ಷರ ದಾಸೋಹ ಕಾರ್ಯಕ್ರಮದ ಅಧಿಕಾರಿ ಈರಣ್ಣ, ರಾಜ್ಯ ಶಿಕ್ಷಕರ ಸಂಘದ ಸದಸ್ಯ ಪರಮೇಶ ಕಂಬಳಿ, ಕೆ.ಕೆ. ಶಿರೋಳಕರ, ಶ್ರೀಕಾಂತ ಸಾಗರ, ಹಾಲಸ್ವಾಮಿ ಹಾಗೂ ವಿವಿಧ ಇಲಾಖೆ ನೌಕರರು ಉಪಸ್ಥಿತರಿದ್ದರು.
ಶಾಲೆ ದಾಖಲಾತಿ, ಹಾಜರಾಗುವ ಮಕ್ಕಳ ಸಂಖ್ಯೆಯಲ್ಲಿ ಸಮಾನಾಂತರ ಕಾಪಾಡುವುದಕ್ಕಾಗಿ, ಬಡವರ ಮಕ್ಕಳು ಶಿಕ್ಷಣ ಇಲಾಖೆ ಸೌಲಭ್ಯ ಪಡೆಯಲು ಪೂರಕ ಶಕ್ತಿ ಒದಗಿಸುವುದಕ್ಕಾಗಿ ಸರ್ಕಾರ 10 ವರ್ಷ ಹಿಂದೆಯೇ ಅಕ್ಷರ ದಾಸೋಹ ಕಾರ್ಯಕ್ರಮ ಜಾರಿಗೆ ತಂದಿದ್ದು, ತಾಲೂಕಿನ 35 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿನ ಸರ್ಕಾರಿ ಪ್ರಾರ್ಥಮಿಕ, ಪ್ರೌಢ ಹಾಗೂ ಖಾಸಗಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಮಹತ್ತರ ಕಾರ್ಯದಲ್ಲಿ 8 ವರ್ಷಗಳಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ. ಅಕ್ಷರ ದಾಸೋಹ ಯಶಸ್ಸಿಗೆ ಸಹಕರಿಸಿದ ಸಾರ್ವಜನಿಕರ ಸಹಕಾರವನ್ನು ನಾನೆಂದಿಗೂ ಮರೆಯುವುದಿಲ್ಲ.
ಎಂ.ಎಚ್. ಪಾಟೀಲ,
ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

