ಹಾವೇರಿ

ಗಿಡ-ಮರ ರಕ್ಷಿಸದಿದ್ದರೆ ವಿನಾಶ

Published On :

ಬ್ಯಾಡಗಿ: ಜೀವ ಸಂಕುಲಗಳ ಆಶ್ರಯ ತಾಣವಾಗಿರುವ ಭೂಮಿಯ ಮೇಲಿನ ಪ್ರಕೃತಿದತ್ತ ಕೊಡುಗೆಗಳನ್ನು ನಾಶ ಮಾಡುತ್ತಿರುವುದನ್ನು ಅಪರಾಧವೆನ್ನದೇ ಇನ್ನೇನೆಂದು ಅರ್ಥೈಸಲು ಸಾಧ್ಯ. ಗಿಡ-ಮರಗಳ ರಕ್ಷಣೆಗೆ ಮುಂದಾಗದಿದ್ದಲ್ಲಿ ವಿನಾಶವೇ ಅಂತಿಮ ಸತ್ಯವಾಗಲಿದೆ ಎಂದು ತಾಲೂಕು ಪಂಚಾಯ್ತಿ ಸದಸ್ಯ ನಿಂಗಪ್ಪ ದುಂಡೆಣ್ಣನವರ ಎಚ್ಚರಿಸಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತಾಲೂಕಿನ ಖುರ್ದಕೋಡಿಹಳ್ಳಿ ಶಾಲೆಯ ಆವರಣದಲ್ಲಿ ಪರಿಸರ ಜಾಗೃತಿ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಮಾಲಿನ್ಯ ಹಾಗೂ ಸಂರಕ್ಷಣೆ ಅತಿ ಮಹತ್ವದ್ದಾಗಿದೆ. ಪ್ರಕೃತಿ ಆಶ್ರಯದಲ್ಲಿರುವ ಪ್ರತಿಯೊಬ್ಬರು ಅದರ ರಕ್ಷಣೆಗೆ ಮುಂದಾಗಬೇಕಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಸಮೃದ್ಧವಾದ ಅರಣ್ಯ ಸಂಪತ್ತನ್ನು ನಾಶಪಡಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಶುದ್ಧ ಗಾಳಿ, ನೀರು, ಆಹಾರ ಇನ್ನಿಲ್ಲದಂತಾಗಿದೆ ಎಂದರು.
ವೃಕ್ಷಗಳು ಪೂಜ್ಯನೀಯ ವಸ್ತುಗಳಾಗಿದ್ದು, ನಮಗೆ ಬೇಕಾಗಿರುವ ನೆರಳು, ಶುದ್ಧ ಗಾಳಿ, ಪ್ರಾಣಿ-ಪಕ್ಷಿಗಳಿಗೆ ಆಹಾರ, ಆಶ್ರಯ ನೀಡುವ ದೇವರಿದ್ದಂತೆ ಗಿಡ-ಮರಗಳನ್ನು ನಾಶಪಡಿಸುವ ಬದಲಾಗಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆ ಮಾಡಬೇಕು.
ಸಾರ್ವಜನಿಕರು ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಸುಂದರ ಹಾಗೂ ಆದರ್ಶ ಸಮಾಜ ಕಟ್ಟಿ ಆರೋಗ್ಯ ಭಾಗ್ಯ ಪಡೆಯುವಂತೆ ತಿಳಿಸಿದರು.
ಪ್ರಧಾನ ಶಿಕ್ಷಕಿ ಕೆ. ಗಂಗಮ್ಮ ಮಾತನಾಡಿ, ಅಸ್ವಸ್ಥ ಸಮಾಜ ನಿರ್ಮಾಣ ಅಪಾಯಕಾರಿ ಬೆಳವಣಿಗೆಯಾಗಿದೆ. ಸ್ವಾಸ್ಥ್ಯ ಪರಿಸರಕ್ಕಾಗಿ ಅರಣ್ಯ ಸಂರಕ್ಷಣೆ ಅವಶ್ಯಕತೆ ಇದ್ದು, ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ಪರಿಸರದ ಜಾಗೃತಿ ಬಗ್ಗೆ ಅರಿವು ನೀಡಬೇಕಾಗಿದೆ ಎಂದರು.
ಇದಕ್ಕೂ ಮುನ್ನ ಗ್ರಾಮದಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸುವ ಮೂಲಕ ಪರಿಸರ ಜಾಗೃತಿ ಕುರಿತು ಅರಿವು ಮೂಡಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಪಡಿಯಪ್ಪ ತಿಪ್ಪಣ್ಣನವರ, ಮಾಲತೇಶ ಚಿನ್ನಿಕಟ್ಟಿ, ಪ್ರಕಾಶ ಕಾಟೇನಹಳ್ಳಿ, ಷಣ್ಮುಖಪ್ಪ ಮಾತನವರ, ಬಸವರಾಜ ಕರ್ಜಗಿ, ನಿಂಗಪ್ಪ ಹೊನ್ನಕೇರಿ, ಸಾವಿತ್ರಾ ಕುರಗುಂದ, ಶರೀಫಾಬಿ ನೆಲೋಗಲ್, ಹೊನ್ನಮ್ಮ ಮೇಡ್ಲೇರಿ, ಭರಮಪ್ಪ ಕುನಬೇವ, ಶೇಖಪ್ಪ ಪೂಜಾರ, ರೇವಣಸಿದ್ದಪ್ಪ ಮಾತನವರ, ಗೌರವ್ವ ಚಿನ್ನಕಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.