ಇಂದಿನಿಂದ ಪಿಯು ಪರೀಕ್ಷೆ ಆರಂಭ
ಹಾವೇರಿ: ಜಿಲ್ಲೆಯಲ್ಲಿ ಮಾ.13ರಿಂದ 28ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಜರುಗಲಿದ್ದು, 5944 ಬಾಲಕರು ಹಾಗೂ 5765 ಬಾಲಕಿಯರು ಸೇರಿ 11,739 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ಮತ್ತು ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಪ್ರಭಾರ ಜಿಲ್ಲಾಧಿಕಾರಿ ಜಿ. ಜಗದೀಶ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಪರೀಕ್ಷಾ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರೀಕ್ಷಾ ಕೇಂದ್ರದ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಹಾಗೂ ಗುಂಪುಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ಬರುವ ಝರಾಕ್ಸ್ ಹಾಗೂ ಟೈಪಿಂಗ್ ಸೆಂಟರ್ಗಳನ್ನು ಮುಚ್ಚಲು ಹಾಗೂ ಮೊಬೈಲ್ ಬಳಕೆ ನಿಷೇಧಿಸಲು ಅವರು ತಿಳಿಸಿದ್ದಾರೆ.
ಕಲಾ ವಿಭಾಗ 7412, ವಾಣಿಜ್ಯ ವಿಭಾಗ 2494, ವಿಜ್ಞಾನ ವಿಭಾಗ 1833, ರೆಗ್ಯುಲರ್- 9312, ಪುನರಾವರ್ತಿ 1652 ಹಾಗೂ 775 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹಾವೇರಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜಿಲ್ಲಾಮಟ್ಟದ ಜಾಗೃತದಳ ಹಾಗೂ ಬೇರೆ ಜಿಲ್ಲೆಗಳ 8 ಹಿರಿಯ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಮೊಬೈಲ್ ಸ್ಕ್ವಾಡ್, ವಿಶೇಷ ಜಾಗೃತದಳದ ಸದಸ್ಯರಾಗಿ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಆರ್. ಕೊಣ್ಣೂರ ತಿಳಿಸಿದರು.
ಸಭೆಯಲ್ಲಿ ಹಾನಗಲ್ಲ ತಹಸೀಲ್ದಾರ, ರಾಣಿಬೆನ್ನೂರ ಹಾಗೂ ಬ್ಯಾಡಗಿ ಬಿಇಓಗಳು, ಎಸ್.ಎಸ್. ಬೇವಿನಮರದ, ಕೆ.ಎಚ್. ಮುದಿಗೌಡ್ರ, ಪಿ.ಎಸ್. ಕೂಚಗಾರ ಹಾಜರಿದ್ದರು.
ಪರೀಕ್ಷಾ ವೇಳಾಪಟ್ಟಿ: ಮಾ. 13ರಂದು ಇತಿಹಾಸ, ಗಣಕ ವಿಜ್ಞಾನ, ಮಾ. 14- ಜೀವಶಾಶ್ತ್ರ, ಎಲೆಕ್ಟ್ರಾನಿಕ್ಸ್, ಮಾ.15- ಅರ್ಥಶಾಸ್ತ್ರ ಹಾಗೂ ಭೂಗರ್ಭಶಾಸ್ತ್ರ, ಮಾ.16- ಐಚ್ಛಿಕ ಕನ್ನಡ, ಗೃಹವಿಜ್ಞಾನ, ಬೇಸಿಕ್ ಮ್ಯಾಥ್ಸ್, ಮಾ. 18- ಗಣಿತ ಹಾಗೂ ಭೂಗೋಳಶಾಸ್ತ್ರ, ಮಾ. 19 - ಸಮಾಜಶಾಸ್ತ್ರ ಹಾಗೂ ಲೆಕ್ಕಶಾಸ್ತ್ರ, ಮಾ. 20- ಭೌತಶಾಸ್ತ್ರ, ಮನಃಶಾಸ್ತ್ರ, ಮಾ. 21- ರಾಜ್ಯಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ, ಮಾ. 22- ತರ್ಕಶಾಸ್ತ್ರ ಹಾಗೂ ಶಿಕ್ಷಣ, ಮಾ. 23-ರಸಾಯನಶಾಸ್ತ್ರ, ಬಿಸಿನೆಸ್ ಸ್ಟಡೀಸ್, ಮಾ. 25- ಇಂಗ್ಲಿಷ್, ಮಾ. 26- ಮರಾಠಿ, ಉರ್ದು, ಮಾ. 27- ಕನ್ನಡ, ತಮಿಳು, ಮಲಯಾಳಂ, ಅರೇಬಿಕ್ ಹಾಗೂ ಮಾ. 28- ಹಿಂದಿ, ತೆಲುಗು ಮತ್ತು ಸಂಸ್ಕೃತ ವಿಷಯಯ ಪರೀಕ್ಷೆಗಳು ಬೆಳಗ್ಗೆ 9ರಿಂದ ಮಧ್ಯಾಹ್ನ 12.15ರವರೆಗೆ ಜರುಗಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

