ಮಾಸಾಂತ್ಯಕ್ಕೆ ಪರಿಶಿಷ್ಟ ಪಂಗಡದ ಸಮ್ಮೇಳನ: ಈಶ್ವರ್
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮಾ.12
ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಜನಾಂಗಕ್ಕೆ ಏನೂ ಒಳ್ಳೆಯದು ಮಾಡಲಿಲ್ಲ, ಮಾರ್ಚ್ ಕೊನೆಯ ವಾರ ಚಿತ್ರದುರ್ಗದಲ್ಲಿ ರಾಜ್ಯ ಸಮ್ಮೇಳನ ಏರ್ಪಡಿಸಲು ನಿರ್ಣಯಿಸಲಾಗಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ಕೆಪಿಸಿಸಿ ಪರಿಶಿಷ್ಟ ಪಂಗಡದ ರಾಜ್ಯಾಧ್ಯಕ್ಷ ಟಿ. ಈಶ್ವರ ತಿಳಿಸಿದರು.
ಹಾನಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ನಿಂದ ದೂರ ಉಳಿದ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ನಾಯಕರಾದ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ರಾಜ್ಯದ 4ನೇ ಅತಿ ದೊಡ್ಡ ಸಮುದಾಯವಾದ ಪರಿಶಿಷ್ಟ ಜನಾಂಗವನ್ನು ಕಾಂಗ್ರೆಸ್ ಪಕ್ಷದ ಜೊತೆಗೆ ಜೋಡಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳು ಈ ಜನಾಂಗಕ್ಕೆ ಉಪಕಾರ ಮಾಡಬಲ್ಲವು ಎಂದರು.
ಬಿಜೆಪಿ ತಂತ್ರಕ್ಕೆ ಈಗ ಜನ ಮರುಳಾಗುವುದಿಲ್ಲ. ಬಿಜೆಪಿ ಸ್ವಾಮಿ ವಿವೇಕಾನಂದರ ಹೆಸರು ಭಾವಚಿತ್ರವನ್ನು ತಮ್ಮ ಬ್ಯಾನರಗಳಲ್ಲಿ ಬಳಸಿಕೊಳ್ಳುತ್ತಿರುವುದು ಖಂಡನಾರ್ಹ. ಬಿಜೆಪಿ ಯೋಜನೆಗಳು ಸಂಘ ಪರಿವಾರಕ್ಕೆ ಸೀಮಿತವಾಗಿವೆ. ಶೈಕ್ಷಣಿಕವಾಗಿ ಪ್ರತಿಷ್ಠಿತ ಶಾಲಾ ಯೋಜನೆ ಅಡಿ ರಾಜ್ಯದಲ್ಲಿ 80 ಶಾಲೆಗಳು ಸರ್ಕಾರದ ಅನುದಾನ ಪಡೆಯುತ್ತಿದ್ದವು. ಆದರೆ, ಬಿಜೆಪಿ ಸರ್ಕಾರದಲ್ಲಿ ಈ ಶಾಲೆಗಳ ಸಂಖ್ಯೆ ಕೇವಲ 3 ಉಳಿದಿವೆ. ಅವು ಕೂಡ ಸಂಘ ಪರಿವಾರದ ಶಾಲೆಗಳೆ ಆಗಿವೆ. ಈ ಯೋಜನೆ ಹಿಂದುಳಿದ ವರ್ಗಕ್ಕೆ ಉಪಯುಕ್ತವಾಗಿತ್ತು. ಬಿಜೆಪಿ ಸರ್ಕಾರ ಅದನ್ನು ಕಿತ್ತುಕೊಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ಮಾಜಿ ಉಪಸಭಾಪತಿ ಮನೋಹರ ತಹಸೀಲ್ದಾರ್, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ರುದ್ರಪ್ಪ ಲಮಾಣಿ, ಕೆಪಿಸಿಸಿ ಸದಸ್ಯರಾದ ಸತೀಶ ದೇಶಪಾಂಡೆ, ರಾಜಶೇಖರ ಸಾಲಿಮಠ, ಮಾಜಿ ಜಿಪಂ ಉಪಾಧ್ಯಕ್ಷ ಜಿ.ಎಸ್.ಗಂಟೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಸಿ.ಎಫ್.ಮುದಕಣ್ಣನವರ, ಮಲ್ಲನಗೌಡ ಪಾಟೀಲ, ಎ.ಎಂ.ಪಠಾಣ, ಕೆ.ಎಲ್. ದೇಶಪಾಂಡೆ, ಜಿ.ಟಿ. ಚಂದ್ರಶೇಖರಪ್ಪ, ಈರಪ್ಪ ಮಡ್ಲೂರ, ಸಿ.ಎಸ್.ಬಡಿಗೇರ, ಪುಟ್ಟಪ್ಪ ನರೆಗಲ್ಲ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

