ಹಾವೇರಿ ನಿವಾಸಿಗಳಿಗೆ ಜಲ ಕ್ಷಾಮ
ಹಾವೇರಿ: ಕಳೆದೆರಡು ವರ್ಷಗಳಿಂದ ಬರದಿಂದ ಕಂಗೆಟ್ಟಿರುವ ಜಿಲ್ಲೆಯ ಜನತೆ ಈಗಾಗಲೇ ಎದುರಾಗಲಿರುವ ಬೇಸಿಗೆ ಎದುರಿಸಲು ತಯಾರಿ ನಡೆಸುವಂತಾಗಿದೆ. ಇದರೊಂದಿಗೆ ಹಾವೇರಿ ನಗರ ನಿವಾಸಿಗಳು ನೀರಿಗಾಗಿ ಪ್ರಸಕ್ತ ಸಾಲಿನಲ್ಲೂ ತೀವ್ರ ಜಲಕ್ಷಾಮ ಎದುರಾಗಲಿದೆ. ಇದುವರೆಗೂ ಹಾವೇರಿಗೆ ಅಗತ್ಯದಷ್ಟು ನೀರು ನೀಡುತ್ತಿದ್ದ ಕಂಚಾರಗಟ್ಟಿಯ ಜಾಕ್ವೆಲ್ನಲ್ಲಿ ಈಗ ನೀರಿಲ್ಲ. ಅಲ್ಲದೆ ತುಂಗಭದ್ರಾ ನದಿಯಲ್ಲೇ ನೀರಿಲ್ಲ.
ಹಾವೇರಿ ನಗರಕ್ಕೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಹಾಗೂ ಮಾರ್ಚ್-ಏಪ್ರಿಲ್ನಲ್ಲಿ ಎದುರಾಗುವ ಬೇಸಿಗೆಯನ್ನು ಸಮರ್ಥವಾಗಿ ನಿರ್ವಹಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ ತಿಂಗಳಲ್ಲಿ ತಾಲೂಕಿನ ಕಂಚಾರಗಟ್ಟಿಯಲ್ಲಿ ತುಂಗಭದ್ರಾ ಸೇತುವೆಗೆ ಅಡ್ಡಲಾಗಿ ಮರಳಿನ ಚೀಲಗಳನ್ನಿರಿಸಿ ತಡೆಗೋಡೆ ನಿರ್ಮಿಸಿ ನೀರನ್ನು ತಡೆದು ಶೇಖರಿಸಲಾಗುತ್ತಿತ್ತು. ಇದು ಬೇಸಿಗೆ ದಿನಗಳಲ್ಲಿ ಹಾವೇರಿ ನಗರಕ್ಕೆ ಅಗತ್ಯದಷ್ಟು ನೀರು ನೀಡುತ್ತಿತ್ತು. ಆದರೆ, ಕಳೆದೆರಡು ವರ್ಷದಿಂದ ಬರಗಾಲದ ಛಾಯೆ ಜಿಲ್ಲೆಯಲ್ಲಿ ಆವರಿಸಿದ್ದರಿಂದಾಗಿ ನೀರಿಗಾಗಿ ಪರಿತಪಿಸುವುದರಲ್ಲಿ ಎರಡು ಮಾತಿಲ್ಲ.
ನಿರ್ಲಕ್ಷ್ಯ: ಕಳೆದ ಸಾಲಿನ ನಗರಸಭೆ ಆಡಳಿತ ಮಂಡಳಿ ನೀರಿನ ವ್ಯವಸ್ಥೆ ಕುರಿತಂತೆ ಮುಂದಾಲೋಚನೆ ತೋರದೇ ಮರಳಿನ ಚೀಲದ ತಡೆಗೋಡೆ ನಿರ್ಮಿಸುವಲ್ಲಿ ನಿಧಾನಗತಿಯ ಕಾರ್ಯ ಕೈಗೊಂಡಿದ್ದರಿಂದ ಸುಮಾರು 70 ದಿನಗಳ ಬಳಿಕ ಚುನಾವಣೆ ಸಂದರ್ಭ ಹಾವೇರಿ ಜನರಿಗೆ ನದಿನೀರು ಪೂರೈಸಲಾಗಿತ್ತು. ಈ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳೂ ನಿರ್ಲಕ್ಷ್ಯ ತೋರಿದ್ದರಿಂದಾಗಿ ತುಂಬಾ ತಡವಾಗಿ ಮರಳಿನ ಚೀಲಗಳ ತಡೆಗೋಡೆ ನಿರ್ಮಿಸಿ ಹಾವೇರಿ ಜನತೆಗೆ ನೀರು ಪೂರೈಸಿದ್ದರು. ಆದರೆ, ಪ್ರಸಕ್ತ ಸಾಲಿನಲ್ಲಿ ಭದ್ರಾ ಜಲಾಶಯದಿಂದ ಬಿಡುಗಡೆ ಮಾಡಲಾಗಿದ್ದ ನೀರನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಹಾವೇರಿ ನಗರಸಭೆ ವಿಫಲವಾಗಿದೆ.
ಸಂಕಷ್ಟದಲ್ಲಿ ಹಾವೇರಿಗರು: ಇದೇ ಕಾಲಕ್ಕೆ ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಹೊಂದಿಕೊಂಡಂತೆ ತುಂಗಭದ್ರಾ ನದಿ ಅಕ್ಕಪಕ್ಕದ ರೈತರು ತಡೆಗೋಡೆ ಕಿತ್ತು ಹಾಕಿ ನದಿನೀರು ಹರಿದುಹೋಗುವಂತೆ ಮಾಡಿದ್ದು, ಇದರಿಂದ ಕೃಷಿ ಕಾರ್ಯಗಳಿಗೆ ನೀರು ಲಭ್ಯವಾಗುವಂತೆ ಮಾಡಿದ್ದಾರೆ. ತಡೆಹಿಡಿಯಲಾಗಿದ್ದ ನೀರು ಹರಿದು ಹೋಗಿದ್ದರಿಂದ ಹಾವೇರಿ ಜನತೆ ನೀರಿನ ಸಮಸ್ಯೆ ಎದುರಿಸುವಂತಾಗಿದೆ.
ಭದ್ರಾ ಜಲಾಶಯದಿಂದ ನೀರು: ಹಿಂದೆ ಹಾವೇರಿ ನಗರಕ್ಕೆ ನೀರಿನ ಕೊರತೆ ತಲೆದೋರಿದ ಸಂದರ್ಭ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳು ಭದ್ರಾ ಜಲಾಶಯದ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ತುಂಗಭದ್ರಾ ನದಿಗೆ ನೀರು ಬಿಡುವಂತೆ ಮನವಿ ಮಾಡಿಕೊಂಡಿದ್ದರು. ಅದೇ ಸಂದರ್ಭ ಬಳ್ಳಾರಿ ಜಿಲ್ಲೆಯ ಮೈಲಾರ ಹಾಗೂ ಕುರುವತ್ತಿ ಜಾತ್ರೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಭದ್ರಾ ಜಲಾಶಯದ ಅಧಿಕಾರಿಗಳು ತುಸು ಹೆಚ್ಚಿನ ನೀರನ್ನೇ ಹರಿಸಿದ್ದರು. ಆ ಸಂದರ್ಭ ಮೊದಲೆರಡು ದಿನ ಅರ್ಧ ಟಿಎಂಸಿ ನೀರು ಹಾಗೂ ಸುಮಾರು ಒಂದು ವಾರ ಕಾಲ 500 ಕ್ಯುಸೆಕ್ ನೀರನ್ನು ತುಂಗಭದ್ರಾ ನದಿಗೆ ಹರಿಸಿದ್ದರು. ಇದು ಹಾವೇರಿ ನಗರದ ಜನತೆಯಲ್ಲಿ ಕೊಂಚ ಆಶಾಭಾವನೆ ಮೂಡಿಸಿ ಬೇಸಿಗೆಯಲ್ಲಿ ತೊಂದರೆಯಾಗಲಿಕ್ಕಿಲ್ಲ ಎಂದು ಆಸೆ ಹೊತ್ತಿದ್ದರು. ಆದರೆ, ನಗರಸಭೆ ಅಧಿಕಾರಿ ವರ್ಗ ಈ ನಿಟ್ಟಿನಲ್ಲಿ ಮರಳಿನ ತಡೆಗೋಡೆಯನ್ನು ಸಮರ್ಪಕ ನಿರ್ವಹಿಸುವ ನಿಟ್ಟಿನಲ್ಲಿ ಎಚ್ಚರ ತಪ್ಪಿದ್ದೇ ನೀರಿಗಾಗಿ ಹಾವೇರಿ ನಗರದ ಜನತೆ ದುಬಾರಿ ಬೆಲೆ ತೆರಬೇಕಿದೆ.
ಅಗತ್ಯ ಕ್ರಮ: ಪ್ರಭಾರಿ ಜಿಲ್ಲಾಧಿಕಾರಿ ಜಿ. ಜಗದೀಶ ಪತ್ರಿಕೆಯೊಂದಿಗೆ ಮಾತನಾಡಿ, ನೀರಿನ ಸಮಸ್ಯೆ ಕುರಿತು ಅಗತ್ಯ ಕ್ರಮಗಳನ್ನು ಜರುಗಿಸಲಾಗಿದೆ. ಭದ್ರಾ ಜಲಾಶಯದಿಂದ ದಿನಂಪ್ರತಿ 250 ಕ್ಯುಸೆಕ್ ನೀರು ಬಿಡುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದ್ದು ಒಪ್ಪಿಕೊಂಡಿದ್ದಾರೆ.
ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ನದಿ ದಡದ ಎಲ್ಲ ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸಂಬಂಧಿಸಿದವರಿಗೆ ಮನವಿ ಮಾಡಲಾಗಿದೆ. ರೈತರೂ ಕುಡಿಯುವ ಉದ್ದೇಶಕ್ಕೆ ಬಿಡುಗಡೆ ಮಾಡಿರುವ ನೀರನ್ನು ಕೃಷಿಗೆ ಬಳಕೆ ಮಾಡದಂತೆ ಮನವಿ ಮಾಡಲಾಗಿದೆ.
- ಕಿರಣ ಮಾಸಣಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

