ಸ್ತ್ರೀಯರಲ್ಲಿ ಮಾತೃ ಭಾವನೆ ಕ್ಷೀಣ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 23
ವಸಾಹತು ಹಾಗೂ ಪಾಶ್ಚಿಮಾತ್ಯ ಚಿಂತನೆಗಳಿಗೆ ಹೊಂದಿಕೊಳ್ಳುತ್ತಿರುವ ಮಹಿಳೆಯರಲ್ಲಿ ಮಾತೃತ್ವದ ಭಾವನೆಗಳು ಇಲ್ಲದಂತಾಗಿದ್ದು, ಇತ್ತೀಚಿನ ದಿನಗಳಲ್ಲಿ ಪುರುಷರ ಮೋಜಿನ ವಸ್ತುವಾಗುತ್ತಿದ್ದಾರೆ ಎಂದು ಧಾರವಾಡದ ಎಸ್ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರೊಫೆಸರ್ ಡಾ.ಎಸ್.ಬಿ. ಮಲ್ಲೂರ ವಿಷಾದಿಸಿದರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಅವರು ಮಾತನಾಡಿದರು.
ಹಣಕ್ಕೆ ಮರುಳು: ಆಧುನಿಕತೆಯ ಗೀಳಿಗೆ ಬಿದ್ದಿರುವ ಮಹಿಳೆಯರು ಸ್ವೇಚ್ಛಾಚಾರದ ಹೆಸರಲ್ಲಿ ತಾನು ಮುಂದುವರಿದಂತೆ ಎಂದು ಭಾವಿಸಿಕೊಳ್ಳುತ್ತಿರುವುದು ತಪ್ಪು. ಹಣಕ್ಕಾಗಿ ಏನನ್ನಾದರೂ ಮಾಡಬಲ್ಲೆ ಎಂಬ ಹುಚ್ಚು ಮನೋಭಾವನೆ ಬೆಳೆಸಿ ಕೊಳ್ಳುತ್ತಿರುವ ಮಹಿಳೆಯರ ಮನೋವಿಕಾರ ತರ್ಕಕ್ಕೆ ನಿಲುಕದಂತಾಗಿದೆ. ಅಂತಹ ಮಹಿಳೆಯರಿಂದ ಸಮಾಜ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ದೃಷ್ಟಿ ಬದಲಾಗಲಿ: ಪಿಎಸ್ಐ ಬಸವರಾಜ ಕಲ್ಲಮ್ಮನವರ ಮಾತನಾಡಿ, ಕಠಿಣ ಕಾನೂನುಗಳಿಂದ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸಬಹುದೇ ವಿನಃ ಬದಲಾಯಿಸಲು ಸಾಧ್ಯವಿಲ್ಲ. ಆಧುನಿಕ ಸಮಾಜ ಒಮ್ಮೆಲೇ ಬದಲಾವಣೆಯಾಗಲು ಸಾಧ್ಯವಿಲ್ಲ. ಸಮಾಜದಲ್ಲಿ ಮಹಿಳೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ ಎಂದರು.
ಸಂಕಷ್ಟ ಮೆಟ್ಟಿ ನಿಲ್ಲಿ: ಶಿವರಾಜ ಚೂರಿ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿರುವ ಮಹಿಳೆಯರು ಅಸಹಾಯಕ ಮತ್ತು ಅಸಮಾನ ಪರಿಸ್ಥಿತಿಯಲ್ಲಿದ್ದಾರೆ. ಕುಟುಂಬದೊಳಗಿನ ಸಮಸ್ಯೆಗಳಿಗೆ ಮೊದಲು ಪರಿಹಾರ ಕಂಡುಕೊಳ್ಳಲಾಗದವರು ತನ್ನ ಬಾಹ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ? ತನ್ನೆಲ್ಲಾ ಸಂಕಷ್ಟಗಳನ್ನು ಸ್ವೀಕರಿಸುವ ತಾಳ್ಮೆ ಹೊಂದಿರುವ ಮಹಿಳೆ ಅಗತ್ಯ ಸಂದರ್ಭದಲ್ಲಿ ಅವುಗಳನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾಗಿದ್ದಾಳೆ ಎಂದರು.
ಇದಕ್ಕೂ ಮುನ್ನ ಪ್ರೊ. ಪ್ರೇಮಾ ಬಿನ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಎಸ್.ಎಲ್. ಹಳಿಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರಾಮಣ್ಣ ಉಕ್ಕುಂದ ಮಹಿಳಾ ಪೊಲೀಸ್ ನೇತ್ರಾವತಿ, ಇನ್ನಿತರರು ಉಪಸ್ಥಿತರಿದ್ದರು. ಆರ್.ಸಿ. ಉಕ್ಕುಂದ ಸ್ವಾಗತಿಸಿದರು. ಎನ್.ಎನ್. ಅರಬಗೊಂಡ ನಿರೂಪಿಸಿದರು. ಎಚ್.ಎನ್. ಸುರೇಶ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

