ಪ್ರಶ್ನೆ ಪತ್ರಿಕೆ ದೋಷ: ವಿದ್ಯಾರ್ಥಿಗಳ ಪರದಾಟ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 24
ಪ್ರಶ್ನೆ ಪತ್ರಿಕೆಯೊಂದರಲ್ಲಿ ಮುದ್ರಣ ದೋಷದಿಂದಾಗಿ ಪ್ರಶ್ನೆಗಳೇ ಮಾಯವಾಗಿದ್ದು, ಇದರಿಂದ ಉತ್ತರ ಬರೆಯಲು ಬಂದಂತಹ ವಿದ್ಯಾರ್ಥಿಗಳು ಪ್ರಶ್ನೆಯನ್ನೇ ಬರೆದುಕೊಳ್ಳಬೇಕಾದ ಘಟನೆ ಭಾನುವಾರ ಜರುಗಿದ ಮೊರಾರ್ಜಿ ಹಾಗೂ ರಾಣಿ ಚನ್ನಮ್ಮ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯಲ್ಲಿ ನಡೆದಿದೆ.
ಪಟ್ಟಣದ ಎಸ್ಎಸ್ಪಿಎನ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮೊರಾರ್ಜಿ ಹಾಗೂ ರಾಣಿ ಚನ್ನಮ್ಮ ವಸತಿ ಶಾಲೆಯ 6ನೇ ತರಗತಿಗೆ ಸೇರ ಬಯಸುವ ವಿದ್ಯಾಥಿಗಳಿಗಾಗಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಇಂತಹದೊಂದು ಘಟನೆ ನಡೆದಿದೆ.
ಸಮಾಜ ಕಲ್ಯಾಣ ಇಲಾಖೆಯು ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿತ್ತು. ಕನ್ನಡ ಮಾಧ್ಯಮದ ಒಟ್ಟು 264 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಪ್ರತಿ 24 ವಿದ್ಯಾರ್ಥಿಗಳಿಗೆ ಒಂದರಂತೆ 11 ಬ್ಲಾಕ್ಗಳನ್ನು ರಚಿಸಲಾಗಿತ್ತು.
ಆದರೆ, ಬ್ಲಾಕ್ 7,8,9 ಮತ್ತು 11ರಲ್ಲಿನ ವಿದ್ಯಾರ್ಥಿಗಳಿಗೆ ವಿತರಿಸಿದ ಪ್ರಶ್ನೆ ಪತ್ರಿಕೆಗಳಲ್ಲಿ ಮಾತ್ರ ಈ ಲೋಪದೋಷ ಕಂಡು ಬಂದಿದೆ. ಪ್ರಶ್ನೆ ಪತ್ರಿಕೆಯ 7ನೇ ಪುಟದಲ್ಲಿ ಪ್ರಶ್ನೆ ಸಂ. 86, 87 ಮತ್ತು 88 ಸಂಪೂರ್ಣ ಮಾಯವಾಗಿದ್ದರೆ, ಇನ್ನೂ ಕೆಲ ಪ್ರಶ್ನೆ ಪತ್ರಿಕೆಗಳಲ್ಲಿ ಈ 3 ಪ್ರಶ್ನೆಗಳು ಮಸುಕಾಗಿ ಮುದ್ರಣವಾಗಿದ್ದು, ವಿದ್ಯಾರ್ಥಿಗಳಿಗೆ ಅರ್ಥವಾಗದ ರೀತಿಯಲ್ಲಿವೆ.
ಮುದ್ರಣ ದೋಷ: ಘಟನೆ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತಿರ್ಲಾಪುರ,ಪ್ರಶ್ನೆಪತ್ರಿಕೆಗಳು ಬೆಂಗಳೂರಿನಲ್ಲಿ ಮುದ್ರಣವಾಗಿದ್ದು, ಧಾರವಾಡದ ಸರ್ಕಾರಿ ಮುದ್ರಣಾಲಯದಿಂದ ಜಿಲ್ಲೆಗೆ ತರಲಾಗಿದೆ. ಪರೀಕ್ಷಾ ನಿಯಮದಂತೆ ಸೀಲ್ ಹಾಕಿದ ಲಕೋಟೆಯಲ್ಲಿದ್ದ ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಸಂದರ್ಭದಲ್ಲಿ ಲೋಪದೋಷ ಕಾಣಿಸಿಕೊಂಡಿದೆ ಎಂದರು.
ಅವಘಡ ಸಂಭವಿಸಿದ್ದರೂ ಪರೀಕ್ಷಾರ್ಥಿಗಳಿಗೆ ಹೆಚ್ಚುವರಿ ಸಮಯ ನೀಡುವುದಿಲ್ಲ. ನಿಗದಿತ ಸಮಯಕ್ಕೆ ಪರೀಕ್ಷೆ ಮುಕ್ತಾಯಗೊಳಿಸಲಾಗುವುದು. ಮುದ್ರಣ ಅವಾಂತರದಿಂದಾಗಿ ಉತ್ತರ ಬರೆಯಲು ಬಂದ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಬರೆದುಕೊಳ್ಳುವಂತಾಗಿದ್ದು ದುರಂತ ಎಂದು ಡಯಟ್ನ ಹಿರಿಯ ಉಪನ್ಯಾಸಕಿ ಉಷಾಕುಮಾರಿ ವಿಷಾದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

