ಹಾವೇರಿ

ಖಾಸಗಿ ಶಾಲೆಗಳತ್ತ ಮಕ್ಕಳು: ಆತಂಕ

Published On :

ಹಾವೇರಿ: ಪೋಷಕರಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಬದಲಾಗಿ ಖಾಸಗಿ ಶಾಲೆಗೆ ಸೇರಿಸುವ ಪ್ರವೃತ್ತಿ ಹೆಚ್ಚುತ್ತಿರುವುದಕ್ಕೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಿ.ನಾಗರಾಜ ಅವರು ಆತಂಕ ವ್ಯಕ್ತಪಡಿಸಿದರು.
ಹುಕ್ಕೇರಿಮಠದ ಸಭಾಭವನದಲ್ಲಿ ಹಾವೇರಿ ಜಿಲ್ಲಾಮಟ್ಟದ ಮೀನಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸಕಲ ಸೌಲಭ್ಯ ಮತ್ತು ಸಂಪನ್ಮೂಲಗಳಿಂದ ಸುಸಜ್ಜಿತವಾಗಿವೆ. ಸ್ಪರ್ಧಾತ್ಮಕವಾಗಿ ಆಯ್ಕೆಯಾಗಿ ಬಂದ ಉತ್ತಮ ಶಿಕ್ಷಕರನ್ನು ಹೊಂದಿರುವುದರಿಂದ, ಮಕ್ಕಳ ಕಲಿಕೆ ಅರ್ಥಪೂರ್ಣವಾಗುತ್ತದೆ. ಆದ್ದರಿಂದ ಪಾಲಕರ ಆಯ್ಕೆ ಸರ್ಕಾರಿ ಶಾಲೆಯಾಗಲಿ ಎಂದು ಸಲಹೆ ಮಾಡಿದರು.
ಮೀನಾ ಎನ್ನುವುದು, ಮಹಿಳೆಯರ ಸಬಲೀಕರಣದ ಹಿನ್ನೆಲೆಯಲ್ಲಿ ಬಾಲಕಿಯರ ಶಿಕ್ಷಣ ಉತ್ತೇಜಿಸಲು ಸರ್ಕಾರ ರೂಪಿಸಿರುವ ಕಾರ್ಯಕ್ರಮವಾಗಿದ್ದು, ಮೀನಾ ಎನ್ನುವ ಕಾಲ್ಪನಿಕ ಬಾಲೆ ಆದರ್ಶವನ್ನು ಪ್ರತಿನಿಧಿಸುತ್ತಾಳೆ. ನಮ್ಮ ಮಕ್ಕಳು ಬಾಲ್ಯದಿಂದಲೇ ಮೀನಾಳಂತೆ ಸಮಾಜದ ಒಳಿತಿಗಾಗಿ ಶ್ರಮಿಸುವ ಆದರ್ಶಗಳನ್ನು ರೂಢಿಸಿಕೊಳ್ಳಬೇಕು. ಮನೆಯಲ್ಲಿ ಪಾಲಕರು ಹಾಗೂ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಲ್ಲಿ ಮೌಲ್ಯಗಳನ್ನು ಉತ್ತೇಜಿಸಬೇಕು ಎಂದು ಕರೆ ನೀಡಿದರು.
ಅತಿಥಿಯಾಗಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಶಿವಪುತ್ರ ಬಾಬುರಾವ್ ಅವರು, ಪಾಲಕರು ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗಿ ಮಕ್ಕಳನ್ನು ಖಾಸಗಿ ಕಾನ್ವೆಂಟ್‌ಗಳಿಗೆ ಕಳಿಸುವ ಬದಲು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಸಲಹೆ ಮಾಡಿದರು.
ಪರಿಸರ ಚಿಂತಕಿ ಮಾಧುರಿ ದೇವಧರ ಅವರು, ಪ್ರಪಂಚದ ಬಹುಮಟ್ಟಿನ ದೇಶಗಳಲ್ಲಿ ಮಹಿಳೆಯರು ಹೋರಾಟದ ಮೂಲಕ ತಮ್ಮ ಹಕ್ಕು ಬಾಧ್ಯತೆಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಭಾರತದಲ್ಲಿ ಮಹಿಳೆಯರಿಗೆ ಅಂಥ ಹೋರಾಟದ ಅಗತ್ಯವಿಲ್ಲದೇ ಸಂವಿಧಾನಬದ್ಧ ಸಮಾನತೆ ಪ್ರಾಪ್ತವಾಗಿದ್ದು, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದರು.
ಇಡಾರಿ ಸರ್ಕಾರೇತರ ಸಂಸ್ಥೆ ಮುಖ್ಯಸ್ಥೆ ಪರಿಮಳಾ ಜೈನ್, ಮಹಿಳಾ ಪೊಲೀಸ್ ಅಧಿಕಾರಿ ಬೆಟಗೇರಿ, ಸ್ಮೀತಾ ಕಡಕೋಳ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮಿಗಳು, ಸುಶಿಕ್ಷಿತ ಸಮಾಜವೇ ದೇಶದ ಬಹುಮುಖ್ಯ ಸಂಪನ್ಮೂಲವಾಗಿರುವುದರಿಂದ, ಮಹಿಳಾ ಸಾಕ್ಷರತೆಗೆ ಆದ್ಯತೆ ನೀಡಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ.ಕೊಡ್ಲಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ 705 ಶಾಲೆಗಳಿಂದ 2000 ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮೇಳದಲ್ಲಿ ಪಾಲ್ಗೊಂಡಿದ್ದು, ತಮ್ಮ ಕ್ರಿಯಾಶೀಲತೆಯನ್ನು ಇಲ್ಲಿ ಅನಾವರಣ ಮಾಡಲಿದ್ದಾರೆ ಎಂದರು.
ಮೀನಾ ಮೇಳದ ನೋಡಲ್ ಅಧಿಕಾರಿ ಎಂ.ಎಸ್.ಗುಂಡಪಲ್ಲಿ ಅವರು ಮಕ್ಕಳಿಗೆ ಮೀನಾ ಸಂಕಲ್ಪವನ್ನು ಬೋಧಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳು ತಾವು ರಚಿಸಿದ ಚುಟುಕು ಕವನಗಳನ್ನು ನಿವೇದಿಸಿದರಲ್ಲದೇ ಬಾಲ್ಯ ವಿವಾಹ ಕುರಿತ ರೂಪಕವನ್ನು ಪ್ರಸ್ತುತಪಡಿಸಿದರು.
ಹೊಸರಿತ್ತಿ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಹತ್ತಿಮತ್ತೂರ ಶಾಲಾ ಮಕ್ಕಳು ನಾಡಗೀತೆ ಪ್ರಸ್ತುತಪಡಿಸಿದರು. ಸಮಾರಂಭದಲ್ಲಿ ಅಗಡಿಯ ಸಾವಯವ ಕೃಷಿಕರಾದ ನಿಜಲಿಂಗಪ್ಪ ಬಸೇಗಣ್ಣಿ, ಶಿಕ್ಷಣಾಧಿಕಾರಿಗಳು ಸೇರಿದಂತೆ ಹಲವರು ಗಣ್ಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.