ಹಾವೇರಿ

ಹಾವೇರಿ: ಹಳೆ ಹುಲಿಗಳ ದರ್ಬಾರ್

Published On :

 ಕಿರಣ ಮಾಸಣಗಿ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 28
ಹಾವೇರಿ ಜಿಲ್ಲೆಯ ವಿಧಾನಸಭಾ ಚುನಾವಣಾ ಕಣದಲ್ಲಿ ಬಹುತೇಕ ಮಾಜಿಗಳದ್ದೇ ದರ್ಬಾರ್ ಮುಂದುವರಿಯುವಂತಿದೆ.
ಕಾರಣ ಈಗಾಗಲೇ ಕೆಜೆಪಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ 5 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಅಭ್ಯರ್ಥಿಗಳೆಲ್ಲ ಮಾಜಿ ಶಾಸಕರೇ. ಅಲ್ಲದೇ ಕಾಂಗ್ರೆಸ್ ಸಂಭವನೀಯರ ಪಟ್ಟಿಯಲ್ಲೂ ಇಬ್ಬರು ಹಳಬರ ಹೆಸರುಗಳೇ ಇವೆ.
ಕೆಜೆಪಿಯಿಂದ ಮೀಸಲು ಕ್ಷೇತ್ರ ಹಾವೇರಿಗೆ ಮಾಜಿ ಶಾಸಕ ನೆಹರು ಓಲೇಕಾರ, ಹಾನಗಲ್ಲ- ಮಾಜಿ ಸಚಿವ ಸಿ.ಎಂ. ಉದಾಸಿ, ಬ್ಯಾಡಗಿ-ಮಾಜಿ ಶಾಸಕ ಸುರೇಶಗೌಡ ಪಾಟೀಲ, ರಾಣಿಬೆನ್ನೂರು- ಮಾಜಿ ಶಾಸಕ ಜಿ. ಶಿವಣ್ಣ ಹಾಗೂ ಹಿರೇಕೆರೂರು- ಮಾಜಿ ಶಾಸಕ ಯು.ಬಿ. ಬಣಕಾರ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
ಕೈ ಕಾರ್ಯಕರ್ತರಲ್ಲಿ ಇರುಸು ಮುರುಸು: ಶಿಗ್ಗಾಂವಿ-ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಸಂಭವನೀಯರ ಪಟ್ಟಿಯಲ್ಲಿದ್ದಾರೆ. ಹಿರೇಕೆರೂರು- ಹಾಲಿ ಶಾಸಕ ಬಿ.ಸಿ. ಪಾಟೀಲರಿಗೆ ಟಿಕೆಟ್ ಸಿಕ್ಕಲ್ಲ ಎನ್ನಲಾಗಿದೆ.
ಬಿಜೆಪಿ, ಜೆಡಿಎಸ್ ಇತರೆ ಪಕ್ಷಗಳು ಇದುವರೆಗೂ ತಮ್ಮ ಅಭ್ಯರ್ಥಿಗಳ ಘೋಷಣೆ ಮಾಡದಿರುವುದು ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಲ್ಲಿ ಇರುಸು ಮುರಿಸು ಉಂಟು ಮಾಡಿದೆ.
ಮಾಜಿಗಳಿಗೆ ಕೆಜೆಪಿ ಪ್ರಾಶಸ್ತ್ಯ: 2008ರಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದ ಹಾವೇರಿ ಕೆಜೆಪಿ ಉದಯದೊಂದಿಗೆ ಬಿಎಸ್ವೈಗೆ ಅಧಿಕೃತವಾಗಿ ಬೆಂಬಲಿಸಿ ನಾಲ್ವರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ಮೂಲಕ ನಿಷ್ಠೆ ಪ್ರದರ್ಶಿಸಿದ್ದರು. ಈಗ ಎಲ್ಲ ನಾಲ್ವರಿಗೂ ಟಿಕೆಟ್ ಸಿಕ್ಕಿದೆ.
ಹಾವೇರಿಯಲ್ಲಿ ಕೈಗೆ 4ನೇ ಸ್ಥಾನ: 2008ರಲ್ಲಿ ನಡೆದ ಚುನಾವಣೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ 4ನೇ ಸ್ಥಾನದಲ್ಲಿತ್ತು ಎಂಬುದು ಗಮನಿಸಬೇಕಾದ ಅಂಶ. ಅಂದರೆ 2008ರಲ್ಲಿ ಬಿಜೆಪಿಯಿಂದ ಚುನಾಯಿತರಾದ ನೆಹರು ಓಲೇಕಾರ 41,068 ಮತ ಗಳಿಸಿದ್ದರೆ 2 ಮತ್ತು ಮೂರನೇ ಸ್ಥಾನದಲ್ಲಿ ಪಕ್ಷೇತರರು ಇದ್ದರು.
ಕೈ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕಣದಲ್ಲಿ ಬರೊಬ್ಬರಿ 16 ಅಭ್ಯರ್ಥಿಗಳಿದ್ದರು ಎಂಬುದು ಗಮನಾರ್ಹ. ಆಗ ಕಾಂಗ್ರೆಸ್ ಗಳಿಸಿದ್ದು ಕೇವಲ 14,902 ಮತಗಳು.
ಆದರೆ, ಉಳಿದಂತೆ ಜಿಲ್ಲೆಯಲ್ಲಿ ಕೈ 2ನೇ ಸ್ಥಾನದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿತ್ತು. ಹಿರೇಕೆರೂರಲ್ಲಿ ಕೈ ಮೇಲುಗೈ ಸಾಧಿಸಿ ಬಿಜೆಪಿ ಮೂರನೇ ಸ್ಥಾನದಲ್ಲಿತ್ತು. ಪಕ್ಷೇತರರಾಗಿದ್ದ ಯು.ಬಿ. ಬಣಕಾರ 2ನೇ ಸ್ಥಾನದಲ್ಲಿದ್ದರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ದೆಹಲಿಯತ್ತ ಮುಖ ಮಾಡಿದ್ದರೆ, ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಬೆಂಗಳೂರಲ್ಲಿ ಠಿಕಾಣಿ ಹೂಡಿದ್ದಾರೆ. ಮಾಜಿ ಸಚಿವ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ರುದ್ರಪ್ಪ ಲಮಾಣಿ, ಜಿಪಂ ಮಾಜಿ ಅಧ್ಯಕ್ಷ ಡಾ೤ ಮಲ್ಲೇಶಪ್ಪ ಹರಿಜನ, ಜಿಲ್ಲಾ ಸ್ಲಂ ಬೋರ್ಡ್ ಅಧ್ಯಕ್ಷ ಬಸವರಾಜ ಪೇಲನವರ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಆದರೆ, ಹೈಕಮಾಂಡ್ ಸಂಸ್ಕೃತಿಯ ಕಾಂಗ್ರೆಸ್, ಕಾದು ನೋಡುವ ತಂತ್ರದಲ್ಲಿರುವ ಬಿಜೆಪಿ, ಬಂಡಾಯದ ಬಿಸಿ ತಗ್ಗಿಸಲು ಯತ್ನಿಸುತ್ತಿರುವ ಜೆಡಿಎಸ್ ತಮ್ಮ ಅಭ್ಯರ್ಥಿಗಳ ಆಯ್ಕೆ ಗೊಂದಲಕ್ಕೆ ಸದ್ಯ ಉತ್ತರ ಕಂಡುಕೊಳ್ಳುವುದು ಕಷ್ಟಸಾಧ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.