ಮೈಲಾರ ಮಹದೇವ ಹೋರಾಟಕ್ಕೆ 70 ವರ್ಷ
ಶಿವಾನಂದ ಮಲ್ಲನಗೌಡರ
ಬ್ಯಾಡಗಿ: ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ದೇಶದ ಸ್ವಾತಂತ್ರ್ಯ ಹೋರಾಟವು ವಿಶ್ವದ ಇತರ ರಾಷ್ಟ್ರಗಳಲ್ಲಿ ಜರುಗಿದ ಹೋರಾಟಕ್ಕಿಂತ ವಿಭಿನ್ನ. ಬ್ರಿಟಿಷರ ವಸಾಹತುಶಾಹಿ ವಿರುದ್ಧ ಶಾಂತಿ ಹಾಗೂ ಅಹಿಂಸೆ ಮೂಲಕ ಸತ್ಯಾಗ್ರಹಗಳನ್ನು ನಡೆಸಿ ಸ್ವಾತಂತ್ರ್ಯ ಪಡೆದುಕೊಳ್ಳಲಾಯಿತು.
ವಿಶಿಷ್ಟ ಹೋರಾಟಗಾರ: ಕೆಲ ಚಳುವಳಿಗಾರರು ತಮ್ಮದೇ ಆದ ವಿಶಿಷ್ಟ ನಿಲುವು ತಳೆದಿದ್ದು ಮಾತ್ರ ಕಾಕತಾಳೀಯ. ಬ್ರಿಟಿಷರು ಸಂಗ್ರಹಿಸಿಟ್ಟಿದ್ದ ಕಂದಾಯ ಹಣ ಲೂಟಿ ಮಾಡಲು ಮುಂದಾದ ತಾಲೂಕಿನ ಮೋಟೆಬೆನ್ನೂರಿನ ಮಹದೇವ ಮೈಲಾರರು ವಿಶಿಷ್ಟ ಹೋರಾಟಗಾರರಲ್ಲಿ ಒಬ್ಬರು.
ಸುದೀರ್ಘ ಕಾಲ ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದ ಭಾರತವನ್ನು ಮುಕ್ತಗೊಳಿಸಲು ಅದೆಷ್ಟೋ ದೇಶ ಭಕ್ತರು ಪ್ರಾಣತ್ಯಾಗ ಮಾಡಿದ್ದಾರೆ. ಕೇವಲ 32 ವರ್ಷ ಬದುಕಿದ್ದ ಮಹದೇವ ಮೈಲಾರರು ಬ್ರಿಟಿಷರ ಗುಂಡುಗಳಿಗೆ ಅಂಜದೇ ಸ್ವಾತಂತ್ರ್ಯಕ್ಕಾಗಿ ವೀರಮರಣವನ್ನಪ್ಪಿದವರಲ್ಲಿ ಒಬ್ಬರು. ಅಂತಹ ವೀರಸೇನಾನಿ ದೇಶಸೇವೆ ಭಾರತೀಯರಾದ ನಾವೆಲ್ಲರೂ ಸ್ಮರಿಸದಿದ್ದರೆ ತಪ್ಪಾದೀತು.
ಶಿಕ್ಷಣ ತ್ಯಜಿಸಿ ಹೋರಾಟಕ್ಕೆ: 1911ನೇ ಸೆ. 8ರಂದು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಮಾರ್ತಾಂಡಪ್ಪ ಹಾಗೂ ಬಸಮ್ಮನವರ ಉದರದಲ್ಲಿ ಜನಿಸಿದ ಮೈಲಾರರು, ಪ್ರಾಥಮಿಕ ಶಿಕ್ಷಣವನ್ನು ಮೋಟೆಬೆನ್ನೂರಿನಲ್ಲಿ ಪೂರೈಸಿ ಬಳಿಕ ಪ್ರೌಢ ಶಿಕ್ಷಣಕ್ಕಾಗಿ ಹಿರೇಕೆರೂರು ತಾಲೂಕಿನ ಹಂಸಬಾವಿಗೆ ತೆರಳಿದರು. ಮೂಲತಃ ಕೃಷಿ ಕುಟುಂಬವಾಗಿದ್ದರೂ ಮಗ ಮಹದೇವ ಉತ್ತಮ ಶಿಕ್ಷಣ ಪಡೆದು ಸುಶಿಕ್ಷಿತನಾಗಬೇಕೆಂಬುದು ಪಾಲಕರ ಹಂಬಲ. ಆದರೆ, ವಿಧಿಲಿಖಿತವೇ ಬೇರೆಯಾಗಿತ್ತು. ಹರ್ಡೇಕರ ಮಂಜಪ್ಪನವರ ಪ್ರಭಾವಕ್ಕೆ ಒಳಗಾದ ಮೈಲಾರರು ಪ್ರೌಢ ಶಿಕ್ಷಣಕ್ಕೆ ವಿದಾಯ ಹೇಳಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು.
ಸ್ವದೇಶಿ ಚಳುವಳಿಗೆ ಒತ್ತು: ಹಂಸಬಾವಿಯಿಂದಲೇ ಸ್ವಾತಂತ್ರ್ಯ ಹೋರಾಟ ಆರಂಭಿಸಿದ ಮೈಲಾರರು, ಟಿ.ಆರ್. ನೇಶ್ವಿ, ಕೆ.ಎಫ್. ಪಾಟೀಲ ಸರ್ಧಾರ ವೀರನಗೌಡ್ರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ರಾಷ್ಟ್ರೀಯ ಚಳುವಳಿಯಲ್ಲಿ ಧುಮುಕಿದರು. ವಿದೇಶಿ ವಸ್ತುಗಳಿಗೆ ಬಹಿಷ್ಕಾರ ಹಾಕುವ ಮೂಲಕ ಸ್ವದೇಶಿ ಚಳವಳಿ ಚುರುಕುಗೊಳಿಸಿದ ಅವರು, ಖಾದಿ ಉತ್ಪಾದನೆ, ಹರಿಜನೋದ್ಧಾರ, ಸಫಾಯಿ ಮುಂತಾದ ಕೆಲಸಗಳಲ್ಲಿ ತೊಡಗಿದರು.
ತರುಣ ಸಂಘ ಸಕ್ರೀಯ: ಇಷ್ಟೊತ್ತಿಗಾಗಲೇ ಭಾರತೀಯ ತರುಣ ಸಂಘವು ಯುವಕರಲ್ಲಿ ರಾಷ್ಟ್ರಾಭಿಮಾನ ಮೂಡಿಸಿ ಜಾಗೃತಗೊಳಿಸುವ ಕಾರ್ಯದಲ್ಲಿ ತೊಡಗಿತ್ತು. ಅದರ ಪರಿಣಾಮವಾಗಿ ಅಪಾರ ದೇಶಭಕ್ತರ ದಂಡು ಸೃಷ್ಟಿಯಾಯಿತು. ತರುಣ ಸಂಘದ ಪ್ರಭಾವಕ್ಕೊಳಗಾದ ಮೈಲಾರರು ಅದರ ಸದಸ್ಯತ್ವ ಪಡೆದು ಸಕ್ರಿಯ ಕಾರ್ಯಕರ್ತರಾದರು.
ಸೆರೆಮನೆಗೆ: ತರುಣ ಸಂಘ ಸೇರುವ ಸಮಯಕ್ಕೆ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದ ಮೈಲಾರರು 1930ರಲ್ಲಿ ಮಹಾತ್ಮ ಗಾಂಧೀಜಿಯವರು ನಡೆಸಿದ ಉಪ್ಪಿನ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಸಾಬರಮತಿ ಆಶ್ರಮದಲ್ಲಿ ಧರ್ಮಪತ್ನಿ ಸಿದ್ದಮ್ಮ ಜೊತೆ ಹೋರಾಟದ ತರಬೇತಿ ಪಡೆದ ಮೈಲಾರರು ಬಳಿಕ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮವನ್ನು ಹೋರಾಟದ ಕಾರ್ಯಕ್ಷೇತ್ರವನ್ನಾಗಿಸಿಕೊಂಡರು. 1941ರಲ್ಲಿ ನಡೆದ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಮೈಲಾರ ದಂಪತಿಯನ್ನು ಬ್ರಿಟಿಷ್ ಪೊಲೀಸರು ಬಂಧಿಸಿ ಸೆರೆಮನೆಗೆ ಕಳುಹಿಸಿದರು.
ಹೋರಾಟ, ವೀರ ಮರಣ: ಮಹದೇವ ಮೈಲಾರರ ಗುಂಪು ಬ್ರಿಟಿಷರ ವಿರುದ್ಧ ಚಲೇಜಾವ್ ಚಳವಳಿಯಲ್ಲಿ ಕಾಲಿಟ್ಟಿತು. ಧಾರವಾಡದ ದಕ್ಷಿಣ ಪ್ರದೇಶದಲ್ಲಿ ತನ್ನ ಹೋರಾಟದ ಚಟುವಟಿಕೆಯನ್ನು ಪ್ರಾರಂಭಿಸಿ ರೈಲು ನಿಲ್ದಾಣಗಳಲ್ಲಿನ ಅಂಚೆ ಚೀಲ ಸುಡುವುದು, ಇನ್ನಿತರ ಬ್ರಿಟಿಷ್ ಆಡಳಿತ ವಿರೋಧಿ ಚಟುವಟಿಕೆಯಲ್ಲಿ ತೊಡಗಿತು.
ಚಳವಳಿ ತೀವ್ರಗೊಳಿಸಿದ ಮೈಲಾರರ ತಂಡ 1943 ಏ. 1ರಂದು ಹೊಸರಿತ್ತಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಂಗ್ರಹಿಸಿದ್ದ ಕಂದಾಯ ಹಣ ಲೂಟಿಗೆ ಮುಂದಾಯಿತು. ಸ್ಥಳಕ್ಕಾಗಮಿಸಿದ ಬ್ರಿಟಿಷ್ ಪೊಲೀಸರು ಲೂಟಿಕೋರರ ಮೇಲೆ ಗುಂಡಿನ ಮಳೆಗೈದರು, ಮಹದೇವ ಮೈಲಾರರ ಎದೆಯನ್ನು ಗುಂಡುಗಳು ಸೀಳಿದವು. ಸ್ಥಳದಲ್ಲೇ ಮೈಲಾರರು ವೀರ ಮರಣವನ್ನಪ್ಪಿದರು. ಸ್ಯಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಏ. 1ಕ್ಕೆ 70 ವರ್ಷಗಳು ಪೂರ್ಣಗೊಳ್ಳಲಿವೆ. ಮೈಲಾರರ ಜೀವನ ಚರಿತ್ರೆ ಪಠ್ಯಪುಸ್ತಕಗಳಲ್ಲಿ ಅಳವಡಿಸುವುದು ಹಾಗೂ ಪ್ರತಿಷ್ಠಾನ ರಚಿಸಬೇಕೆನ್ನುವುದು ಜನರ ಬಹುದಿನದ ಬೇಡಿಕೆ. ಇದಕ್ಕೆ ಸ್ಪಂದಿಸದ ಸರ್ಕಾರ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರನ್ನು ಮರೆಯುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ಲಕ್ಷಿಸುತ್ತಿದೆ. ದಶಕಗಳೇ ಕಳೆದರೂ ಪ್ರತಿಷ್ಠಾನ ಸ್ಥಾಪನೆಯಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ಅಥವಾ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ? ಇದು ಸಾರ್ವಜನಿಕರ ಪ್ರಶ್ನೆ.
ಸ್ವದೇಶಿ ಚಳವಳಿಗೆ ಒತ್ತು
ಹಂಸಬಾವಿಯಿಂದಲೇ ಸ್ವಾತಂತ್ರ್ಯ ಹೋರಾಟ ಆರಂಭಿಸಿದ ಮೈಲಾರರು, ಟಿ.ಆರ್. ನೇಶ್ವಿ, ಕೆ.ಎಫ್. ಪಾಟೀಲ ಸರ್ಧಾರ ವೀರನಗೌಡ್ರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ರಾಷ್ಟ್ರೀಯ ಚಳವಳಿಯಲ್ಲಿ ಧುಮುಕಿದರು. ವಿದೇಶಿ ವಸ್ತುಗಳಿಗೆ ಬಹಿಷ್ಕಾರ ಹಾಕುವ ಮೂಲಕ ಸ್ವದೇಶಿ ಚಳುವಳಿ ಚುರುಕುಗೊಳಿಸಿದ ಮೈಲಾರ ಮಹದೇವ ಅವರು, ಖಾದಿ ಉತ್ಪಾದನೆ, ಹರಿಜನೋದ್ಧಾರ, ಸಫಾಯಿ ಮುಂತಾದ ಕೆಲಸಗಳನ್ನು ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

