ಬೈಕ್ ರ್ಯಾಲಿ: ಬೊಮ್ಮಾಯಿ ಮತಯಾಚನೆ
ಶಿಗ್ಗಾಂವಿ: ಬೃಹತ್ ಬೈಕ್ ರ್ಯಾಲಿ ಮೂಲಕ ಶಿಗ್ಗಾಂವಿ, ಹುಲಗೂರು ಹಾಗೂ ಬಂಕಾಪುರ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿಯೂ ಆಗಿರುವ ಸಚಿವ ಬಸವರಾಜ ಬೊಮ್ಮಾಯಿ ಮತಯಾಚಿಸಿದರು.
ರ್ಯಾಲಿ ಪೂರ್ವದಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದ ಬೊಮ್ಮಾಯಿ, 5 ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಪ್ರಸಕ್ತ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ತಮನ್ನು ಮತದಾರ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉಸಿರು ಇರುವವರೆಗೂ ಕ್ಷೇತ್ರದ ಜನತೆಯನ್ನು ನೆನಸುವುದಾಗಿ ಹೇಳಿದ ಅವರು, 50 ವರ್ಷಗಳ ಅವಧಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದ ಕಾಂಗ್ರೆಸ್ನ ಹಾಲಿ ಅಭ್ಯರ್ಥಿ ಖಾದ್ರಿ, ಸೋಲಿನ ಭೀತಿಯಿಂದ ಕಣ್ಣೀರು ಸುರಿಸುತ್ತಿದ್ದಾರೆ ಎಂದು ದೂರಿದರು.
ಮತದಾರ ಅಭಿವೃದ್ಧಿ ಕಾರ್ಯಕ್ಕೆ ಮಣೆ ಹಾಕುತ್ತಾರೆ ಹೊರತು, ಅನುಕಂಪಕ್ಕೆ ಮಾರು ಹೋಗುವುದಿಲ್ಲ. ಹಣ, ಹೆಂಡದ ಹೊಳೆ ಹರಿಸಿದರೂ ಕ್ಷೇತ್ರದ ಜನತೆ ತಮ್ಮ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು. ಸಾಮಾಜಿಕ ನ್ಯಾಯವೇ ತಮ್ಮ ಧ್ಯೇಯವಾಗಿದೆ. ಕನಕದಾಸರ, ಶರೀಫ-ಶಿವಯೋಗಿಗಳ ಸ್ಥಳ ಅಭಿವೃದ್ಧಿಪಡಿಸಿದ ತೃಪ್ತಿ ಇದೆ ಎಂದರು.
ರಸ್ತೆ ಅಭಿವೃದ್ಧಿ: ತ್ರಿವಳಿ ತಾಲೂಕಿನ ಜನರಿಗೆ ವ್ಯಾಪಾರ ವಹಿವಾಟು ನಡೆಸಲು ಸಂಪರ್ಕ ರಸ್ತೆಯಾಗಿರುವ ಹುಲಗೂರಿನ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಹುಲಗೂರಿನಲ್ಲಿ ಮತಯಾಚಿಸಿದ ನಂತರ ಮಾತನಾಡಿದ ಅವರು, ಸಾರಿಗೆ ವ್ಯವಸ್ಥೆ, ಕುಡಿಯುವ ನೀರು, ಆಸ್ಪತ್ರೆ ಅಭಿವೃದ್ಧಿ ಜತೆಗೆ ಬಡ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾಗಿರುವ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜ್ಗಳನ್ನು ಮಂಜೂರು ಮಾಡಿಸಿದ ತೃಪ್ತಿ ತಮಗಿದೆ. ಕ್ಷೇತ್ರದ ಪ್ರತಿ ಗ್ರಾಮಗಳ ರೈತರಿಗೆ ನೀರಾವರಿ ಸೌಲಭ್ಯ ಮತ್ತು ಕೈಗಾರಿಕಾ ಕೇಂದ್ರ ಸ್ಥಾಪಿಸಿಕೊಡುವುದು ತಮ್ಮ ಮುಖ್ಯ ಉದ್ದೇಶವಾಗಿದ್ದು ಇದಕ್ಕಾಗಿ ಈ ಬಾರಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ತಂದುಕೊಡಲು ಎಲ್ಲರೂ ತಮ್ಮೊಟ್ಟಿಗೆ ಕೈ ಜೋಡಿಸಬೇಕೆಂದು ಬೊಮ್ಮಾಯಿ ವಿನಂತಿಸಿಕೊಂಡರು.
ಮಾದರಿ ಪಟ್ಟಣ: ಐತಿಹಾಸಿಕ ಪಟ್ಟಣವಾದ ಬಂಕಾಪುರವನ್ನು ಜಿಲ್ಲೆಯಲ್ಲೇ ಮಾದರಿ ಗ್ರಾಮವನ್ನಾಗಿಸಿದ್ದೇನೆ ಎಂದು ಬೊಮ್ಮಾಯಿ ಹೇಳಿದರು.
ಬೈಕ್ ರ್ಯಾಲಿ ಮೂಲಕ ಪಟ್ಟಣದಲ್ಲಿ ಪ್ರಚಾರ ಕಾರ್ಯ ಕೈಗೊಂಡ ಅವರು, ರು. 8 ಕೋಟಿ ವೆಚ್ಚದಲ್ಲಿ ತಾಂತ್ರಿಕ ಕಾಲೇಜ್ ಸ್ಥಾಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಎಂಜಿನಿಯರಿಂಗ್ ಕಾಲೇಜನ್ನಾಗಿ ಮಾರ್ಪಡಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದರು.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ವರದಾ ಶಾಶ್ವತ ಕುಡಿಯುವ ನೀರಿನ ಯೋಡನೆಯಡಿ ಕ್ರಮಕೈಗೊಳ್ಳಲಾಗಿದೆ. ಸಾಹಿತಿ, ಬುದ್ದಿ ಜೀವಿಗಳ ವಾಸಸ್ಥಳವಾದ ಬಂಕಾಪುರದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದೂ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿಯಿಂದ ಆರಂಭಗೊಂಡ ಬೈಕ್ ರ್ಯಾಲಿ ಹುಲಗೂರ, ಕಾರಡಗಿ, ಸವಣೂರ, ಹುರಳಿಕೊಪ್ಪಿ, ಮೆಳ್ಳಾಗಟ್ಟಿ, ಮನ್ನಂಗಿ, ಕುಣಿಮೆಳ್ಳಹಳ್ಳಿ, ದುಂಡಿಸಿ, ತಡಸ, ತಿಮ್ಮಾಪುರ, ಎನ್.ಎಂ. ತಡಸ, ಹಿರೇಬೆಂಡಿಗೇರಿ, ಹಿರೇಮಣ ಕಟ್ಟಿಗಳಲ್ಲಿ ಸಂಚರಿಸಿತು.
ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಎಸ್.ಕೆ. ಅಕ್ಕಿ, ಪುರಸಭೆ ಸದಸ್ಯ ಬಸವರಾಜ ಹೆಸರೂರು, ಸುಭಾಸ ಚವ್ಹಾಣ, ಭರಮ್ಮಜ್ಜ ನವಲಗುಂದ, ನೂರಾರು ಕಾರ್ಯಕರ್ತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

