ಹಾವೇರಿ

ಯಡ್ಯೂರಪ್ಪಗೆ ಒಲವು ತೋರಿದ ಹಳ್ಯಾನ ಜನ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 5
ಜಲ್ಲೆಯೊಳಗ ಈ ಬಾರಿ ಚುನಾವಣೆ ಭಾರಿ ಮಜಾ ಐತ್ರಿ... ಯಡಿಯೂರಪ್ಪನವ್ರ ಕೆಜೆಪಿ ಮತ್ತು ಬಿಜೆಪಿ ಅವ್ರ ಹೆಚ್ಚಾಗಿ ಆರಿಸಿ ಬರೋಹಂಗ್ ಕಾಣಸತ್ತೈತ್ರಿ.. ನಾವ್ ಇನ್ನೂ ಓಟ್ ಹಾಕಾಕ್ ಹೋಗಿಲ್ರಿ... ವಾರೆ ಮುಗಿಸಿ ಹಾಕಿ ಬರ್ತೇವ್ರಿ. ಈ ಸಲಾ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರ ವರೆಗೆ ಅಂದ್ರ ಕಳೆದ ಬಾರಿಗಿಂತಲೂ ಒಂದು ತಾಸು ಓಟ್ ಹಾಕಾಕ್ ಹೆಚ್ಗಿ ಟೈಮ್ ಕೋಟಾರ್ ಅವಸರಾ ಮಾಡೋದೇನೈತ್ರಿ...
ಕೃಷಿ ಕಾರ್ಯದಲ್ಲಿ ತಲ್ಲೀನ: ನಗರ ಹಾಗೂ ಪಟ್ಟಣ ವಾಸಿಗಳು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಊರಿ ಬಿಸಿಲಿನಲ್ಲಿ ಮತದಾನಕ್ಕೆ ತೆರಳುವುದಕ್ಕಿಂತಲೂ ಬೆಳಗ್ಗೆಯೇ ತಮ್ಮ ಹಕ್ಕು ಚಲಾಯಿಸಿ ಕೈತೊಳೆದುಕೊಳ್ಳಬೇಕೆಂಬ ಉದ್ದೇಶದಿಂದ ಬೆಳಗ್ಗೆ 7ರಿಂದಲೇ ಆಯಾ ಮತಗಟ್ಟೆಗಳಿಗೆ ತೆರಳಿ ಮತದಾನಕ್ಕಾಗಿ ಸಾಲುಗಟ್ಟಿ ನಿಂತಿದ್ದು ಬಹುತೇಕ ಮತಗಟ್ಟೆಗಳಲ್ಲಿ ಕಂಡು ಬಂದರೆ, ರೈತಾಪಿ ಕುಟುಂಬದವರು ಬೆಳಗಿನ ತಂಪಾದ ವಾತಾವರಣದಲ್ಲಿ ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಗಮನ ಸೆಳೆಯಿತು.
ಯಡ್ಯೂರಪ್ಪ, ಉದಾಸಿಯವರ್‌ಗೆ ವೋಟು: ಬಂಕಾಪುರ, ಸವಣೂರು, ಅಕ್ಕಿಆಲೂರು, ಹಾನಗಲ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ಕನ್ನಡಪ್ರಭ ಸಂಪರ್ಕಿಸಿದಾಗ ಅವರು ಮನಬಿಚ್ಚಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾವು ಬಿಜೆಪಿಗೆ ಮತ ನೀಡುತ್ತ ಬಂದಿದ್ದು, ಈ ಬಾರಿಯೂ ಕಮಲಕ್ಕೆ ಮತ ನೀಡುವುದಾಗಿ ಹೇಳಿಕೊಂಡರೆ ಮತ್ತೆ ಕೆಲವರು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಚೋಲೋ ಕೆಲ್ಸಾ ಮಾಡ್ಯಾರ್ರಿ. ಅಲ್ದ ನಮ್ ಉದಾಸಿ ಸಾಹೇಬ್ರು ನಮ್ ಊರಾಗ ಸಾಕಷ್ಟು ಕೆಲ್ಸಾ ಮಾಡಶ್ಯಾರ ಅದ್ಕಾಗಿ ನಾವ್ ಈ ಬಾರಿ ಉದಾಸಿ ಅವರ ಪಕ್ಷಕ್ನ ಓಟ್ ಹಾಕತ್ತೇವ್ರಿ ಎಂದರು.
ನಗರ ಜನತೆಯಿಂದ ತ್ರಿಶಂಕು ಸ್ಥಿತಿ: ರೈತರ ಬಾಯಿಯಲ್ಲಿ ಯಡಿಯೂರಪ್ಪ, ಉದಾಸಿ ಕುರಿತು ಮಾತು ಕೇಳಿ ಬಂದರೆ, ಪಟ್ಟಣ ಹಾಗೂ ನಗರಗಳಲ್ಲಿ ವಾಸವಾಗಿರುವ ಜನತೆ ಬಿಜೆಪಿ, ಕೆಜೆಪಿ ಹಾಗೂ ಕಾಂಗ್ರೆಸ್ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದರಿಂದಾಗಿ ಆರು ಕ್ಷೇತ್ರಗಳ ಪೈಕಿ ಹಳ್ಳಿಗಾಡಿನ ಪ್ರದೇಶಗಳನ್ನು ಹೆಚ್ಚಾಗಿ ಒಳಗೊಂಡಿರುವ ಕ್ಷೇತ್ರಗಳಲ್ಲಿ ಮೂರು ಪಕ್ಷಗಳಲ್ಲಿ ಹಣಾಹಣಿ ನಡೆಯುವ ಸಾಧ್ಯತೆ ಇದೆ ಎಂಬುದಕ್ಕೆ ಸಾಕ್ಷಿಯಾಯಿತು.
ಬೆಳಗಿನ ಸಮಯವನ್ನು ಹೊಲದ ಕೃಷಿ ಕಾರ್ಯಕ್ಕೆ ಮೀಸಲಿಟ್ಟ ರೈತರು, ಸಂಜೆ 4ರ ನಂತರ ತಂಡೋಪತಂಡವಾಗಿ ಮತ ಚಲಾಯಿಸಲು ಮತಕೇಂದ್ರಗಳಲ್ಲಿ ಧಾವಿಸಲಾರಂಭಿಸಿದರು. ಇದರಿಂದಾಗಿ ಆಯಾ ಮತಕೇಂದ್ರಗಳ ಎದುರು ಮಾರುದ್ದದ ಸಾಲು ಕಂಡು ಬಂದಿತು.
ಗಲಿಬಿಲಿ: ಬೆಳಗ್ಗೆಯೇ ಉತ್ಸಾಹದಿಂದ ಮತದಾರರು ಹಕ್ಕು ಚಲಾಯಿಸಲು ಮತಕೇಂದ್ರಗಳಿಗೆ ತೆರಳಿದ್ದರಿಂದ ಇದ್ದ ಕಡಿಮೆ ಸಿಬ್ಬಂದಿಯಲ್ಲಿ ಎಲ್ಲ ಮತದಾರರನ್ನು ನಿಯಂತ್ರಿಸಲು ಅಸಾಧ್ಯವಾದ ಪರಸ್ಥಿತಿ ಕೆಲವಡೆ ಕಂಡು ಬಂದಿತು. ನಂತರ, ಮಧ್ಯಾಹ್ನ ಬಿಸಿಲಿನ ತಾಪ ಹೆಚ್ಚಾಗುತ್ತಿದಂತೆಯೇ ಮತ್ತೆ ಮತಕೇಂದ್ರಗಳು ಬಿಕೋ ಎನ್ನುವಂತಿದ್ದವು. ಸಂಜೆ 4ರ ಹೊತ್ತಿಗೆ ಬಿಸಿಲಿನ ತಾಪ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ ನಗರವಾಸಿಗಳು ಸೇರಿದಂತೆ ರೈತರು ತಂಡೋಪತಂಡವಾಗಿ ಮತ್ತೆ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತುಕೊಳ್ಳಲಾರಂಭಿಸಿದ್ದನ್ನು ನೋಡಿ ಚುನಾವಣಾಧಿಕಾರಿಗಳೆ ಕೆಲಕಾಲ ಗಲಿಬಲಿಗೆ ಒಳಗಾದಂತೆ ಭಾಸವಾಯಿತು.
33 ಸೆಕೆಂಡ್: ಈ ಬಾರಿ ಚುನಾವಣೆ ಮತದಾನಕ್ಕೆ ಎಲೆಕ್ಟ್ರಾನಿಕ್ ಉಪಕರಣ ಬಳಸಲಾಗಿದ್ದರಿಂದ ಮತದಾರ ಹಾಗೂ ಅಧಿಕಾರಿಗಳಿಬ್ಬರೂ ಸಾಕಷ್ಟು ಅನುಕೂಲ ಮಾಡಿಕೊಂಡಿದ್ದಂತೂ ಸತ್ಯ. ಆದರೆ, 1,500ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ವಾರ್ಡ್‌ಗಳನ್ನು ಒಂದೇ ಮತಗಟ್ಟೆಗೆ ಸೇರಿಸಲಾಗಿದ್ದರಿಂದ ಚುನಾವಣಾಧಿಕಾರಿಗಳಿಗೆ ಸ್ವಲ್ಪಮಟ್ಟಿಗೆ ಕಿರಿಕಿರಿಯುಂಟಾಯಿತು.
ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಕೇವಲ ಗುಂಡಿ ಒತ್ತಬೇಕಾಗುತ್ತದೆಯೇನೋ ನಿಜ. ಆದರೆ, ಗುಂಡಿ ಒತ್ತಿದ ನಂತರ ಯಂತ್ರದಿಂದ ಕೇಳಿಬರುವ ಸದ್ದು ಸುಮಾರು 33 ಸೆಕೆಂಡುಗಳವರೆಗೆ ಇರುತ್ತದೆ. ಇದರಿಂದಾಗಿ ಮತ್ತೊಬ್ಬ ಮತದಾರನಿಗೆ ಈ ಅವಧಿಯಲ್ಲಿ ಹಕ್ಕು ಚಲಾಯಿಸಲು ಅವಕಾಶ ನೀಡಲಾಗುವುದಿಲ್ಲ. ಒಂದೊಮ್ಮೆ ಅವಕಾಶ ನೀಡಿದರೂ ಯಂತ್ರ ಅದನ್ನು ಪರಿಗಣಿಸುವುದಿಲ್ಲ. ಆದರೆ, ಇದನ್ನು ತಿಳಿಯದ ಮತದಾರ ಅಧಿಕಾರಿಗಳ ಮೇಲೆ ಏರಿ ಹೋಗಲು ಯತ್ನಿಸಿದರೆನ್ನಲಾಗಿದೆ.
ಸಾವಿರ ಮತಗಳಿಗೆ: ಪ್ರತಿಯೊಂದು ಮತಗಟ್ಟೆಗೆ 1,000 ಮತದಾರರನ್ನು ಸೇರಿಸಿದ್ದರೆ ಇಷ್ಟೊಂದು ಗದ್ದಲ ಉಂಟಾಗುತ್ತಿರಲಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ಕನ್ನಡಪ್ರಭದೊಂದಿಗೆ ಮಾತನಾಡಿ ತಿಳಿಸಿದರು. ಬಹುತೇಕ ಮತಗಟ್ಟೆಗಳಿಗೆ 1,500ಕ್ಕಿಂತಲೂ ಹೆಚ್ಚು ಮತದಾರರನ್ನು ಸೇರಿಸಲಾಗಿದ್ದರಿಂದ ಸಿಬ್ಬಂದಿ ಸಾಕಷ್ಟಿದ್ದರೂ ಜನರನ್ನು ನಿಯಂತ್ರಿಸಲು ಸ್ವಲ್ಪಮಟ್ಟಿಗೆ ಕಷ್ಟವಾಗಿದ್ದು ನಿಜ.
ಮುಂಬರುವ ಚುನಾವಣೆಯಲ್ಲಿಯಾದರೂ ಹಿರಿಯ ಅಧಿಕಾರಿಗಳು ಇಂಥ ಅಚಾತುರ್ಯ ತಡೆಯಲು ಕ್ರಮ ಕೈಗೊಂಡಲ್ಲಿ ಉತ್ತಮವಾಗಿ ಮತದಾನ ಪ್ರಕ್ರಿಯೆ ನಡೆಸಲು ಸಾಧ್ಯ ಎಂಬ ಅಭಿಪ್ರಾಯವನ್ನು ಜನತೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.