ಹಾವೇರಿ

ಜಾನುವಾರು ಅಡೆತಡೆ: ಚಾಲಕರಿಗೆ ಜೀವ ಭಯ

Published On :

ಬ್ಯಾಡಗಿ: ಎಂಗಳ್ ಉಯಿರ್‌ಪೋವುಂ ಸಾರ್.. ಇನ್ನ ಪಂಡ್ರದು ಸಾರ್ ಕೇಕರವುಂಗೋ, ಪಾಕ್ಕರವುಂಗೋ ಯಾರುಮೇ ಇಲ್ಲೈ ಡ್ರೈವಿಂಗ್ ರುಂಭಾ ಕಷ್ಟಮ್ ಇರುಕ್ಕು... ಇದು ನಮ್ಮ ಚತುಷ್ಪಥ ರಸ್ತೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆವ ದುರಾವಸ್ಥೆ ಕುರಿತು ತಮಿಳುನಾಡಿನ ಚಾಲಕನೊಬ್ಬನ ಮನದಾಳದ ಮಾತುಗಳು. ಅರ್ಥವಿಷ್ಟೇ ಜಾನುವಾರು ಜೀವ ರಕ್ಷಣೆಗೆ ಮುಂದಾದರೇ ನಮ್ಮ ಜೀವ ಉಳಿಸಿಕೊಳ್ಳುವುದು ಕಷ್ಟ. ಇಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದ್ದು, ವಾಹನ ಚಾಲನೆ ತುಂಬ ಕಷ್ಟಕರವಾಗಿದೆ.
ಜೀವ ಭಯ: ಸುಗಮ ಸಂಚಾರಕ್ಕೆ ಉತ್ತಮ ರಸ್ತೆಗಳು ಬೇಕು, ಇದಕ್ಕಾಗಿ ಸರ್ಕಾರ ಕೋಟಿಗಟ್ಟಲೇ ಹಣ ವ್ಯಯಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿದೆ.
ನಿರಾತಂಕ ವಾಹನ ಸಂಚಾರದಿಂದ ಚಾಲಕರು ಹಾಗೂ ಪ್ರಯಾಣಿಕರಿಗೆ ಅನುಕೂಲವಾಗಬೇಕಾಗಿದ್ದ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಜೀವ ಹಿಡಿದು ಸಂಚರಿಸಬೇಕಾದ ಅನಿವಾರ್ಯ ಸ್ಥಿತಿಗೆ ತಳ್ಳಿರುವುದು ವಿಪರ್ಯಾಸವೇ ಸರಿ.
ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ: ವಾಸ್ತವ ಅಂಶವನ್ನು ಸಮೀಪದಿಂದ ಗಮನಿಸಿದಾಗ ರಸ್ತೆಯಲ್ಲಿ ಸಂಚರಿಸುವವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕದವರಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ರಸ್ತೆ ಮಧ್ಯದಲ್ಲಿನ ವಿಭಜಕ(ಡಿವೈಡರ್)ಗಳಲ್ಲಿ ಹುಲ್ಲು ಮೇಯಲು ಬರುವ ಜಾನುವಾರುಗಳು ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ. ಯಾವುದೇ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಜೀವಹಾನಿ ಸಂಭವಿಸಿದರೂ ಆಶ್ಚರ್ಯವೇನಿಲ್ಲ.
ಸುರಕ್ಷತೆಗೆ ಧಕ್ಕೆ: ಜಾನುವಾರುಗಳನ್ನು ಬದುಕಿಸಬೇಕೋ ಅಥವಾ ತಾನು ಬದುಕಬೇಕೋ ಎಂಬ ಧರ್ಮ ಸಂಕಟವನ್ನು ವಾಹನ ಚಾಲಕರು ಮಾತ್ರ ಇಲ್ಲಿ ನಿತ್ಯ ನೋವು ಅನುಭವಿಸುತ್ತಿದ್ದಾರೆ. ಹೀಗಾಗಿ ಪ್ರಯಾಣಿಕರ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ-4 ಎಷ್ಟು ಸುರಕ್ಷಿತ.. ಎಂಬ ಪ್ರಶ್ನೆಗಳು ಹೆದ್ದಾರಿಯಲ್ಲಿ ಸಂಚರಿಸಿದವರ ಮನದಲ್ಲಿ ಮೂಡದೇ ಇರಲು ಸಾಧ್ಯವಿಲ್ಲ. ಸರ್ಕಾರ ನಿರ್ಮಿಸಿದ ಚತಷ್ಪಥ ರಸ್ತೆಗಳು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಅಕ್ಷರಶಃ ಅಪಘಾತದ ಕೇಂದ್ರಗಳಾಗುತ್ತಿವೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ, ಅದರಲ್ಲಿ ಡಿವೈಡರ್‌ಗಳಲ್ಲಿ ಜಾನುವಾರುಗಳನ್ನು ಮೇಯಿಸುವುದು ಕೂಡ ಒಂದು.
ವೇಗಕ್ಕೆ ಆದ್ಯತೆ: ಇತ್ತೀಚೆಗೆ ಅಭಿವೃದ್ಧಿಪಡಿಸಿರುವ ಹೊಸ ವಿನ್ಯಾಸದ ಕಾರುಗಳಲ್ಲಿ ವೇಗಕ್ಕೆ ಆದ್ಯತೆ ನೀಡಲಾಗಿದೆ.
ಹೆದ್ದಾರಿಯಲ್ಲಿ ಸಂಚರಿಸುವ ಕಾರುಗಳು ಸರಾಸರಿ 100ರಿಂದ 140 ಕೀ.ಮೀ ವೇಗದಲ್ಲಿ ಸಂಚರಿಸುತ್ತವೆ. ಇಷ್ಟೊಂದು ವೇಗದಲ್ಲಿ ಚಲಿಸುವ ವಾಹನಗಳನ್ನು ಕ್ಷಣದಲ್ಲಿ ನಿಯಂತ್ರಿಸುವುದು ಅಸಾಧ್ಯ. ಯಾವುದೇ ಮುನ್ಸೂಚನೆಯಿಲ್ಲದೇ ರಸ್ತೆಗಿಳಿಯುವ ಜಾನುವಾರುಗಳಿಂದ ಅಪಘಾತ ಕಟ್ಟಿಟ್ಟ ಬುತ್ತಿ ವೇಗ ನಿಯುಂತ್ರಿಸಲು ಮುಂದಾದ ವಾಹನಗಳು ಆಯತಪ್ಪಿ ನೆಲಕ್ಕುರುಳಿ ಪ್ರಾಣಹಾನಿ ಸಂಭವಿಸಿದ ಬಹಳಷ್ಟು ಉದಾಹರಣೆಗಳಿವೆ.
ಇಂಧನ ಮಿತವ್ಯಯಕ್ಕೆ ಅಡ್ಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಭಾರೀ ವಾಹನಗಳು ಸರಾಸರಿ 60ರಿಂದ 70 ಕೀ.ಮೀ ವೇಗದಲ್ಲಿ ಚಲಿಸುತ್ತವೆ.
ಡಿವೈಡರ್‌ಗಳಲ್ಲಿರುವ ಜಾನುವಾರುಗಳು ರಸ್ತೆಗಿಳಿಯುವುದರಿಂದ ಭಾರೀ ವಾಹನಗಳ ವೇಗಕ್ಕೆ ಕಡಿವಾಣ ಹಾಕುತ್ತವೆ. ಇಂತಹ ವಾಹನಗಳು ಮತ್ತೆ ಮೊದಲಿನ ವೇಗದಲ್ಲಿ ಸಂಚರಿಸಲು ಹೆಚ್ಚು ಇಂಧನ ಬೇಕಾಗುತ್ತದೆ. ಅಲ್ಲದೇ ಸಮಯವೂ ವ್ಯರ್ಥವಾಗುತ್ತದೆ.
ಸಂಘರ್ಷಕ್ಕೆ ನಾಂದಿ: ಜಾನುವಾರುಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸುವುದರಿಂದ ಆಗುವ ಅನಾಹುತಗಳು ಅಷ್ಟಿಷ್ಟಲ್ಲ ಕೆಲ ಸಂದರ್ಭಗಳಲ್ಲಿ ಜೀವಹಾನಿ ಆಗದಿದ್ದರೂ ಸಹ ಪೊಲೀಸ್ ಕೇಸ್ ಸೇರಿದಂತೆ ರೈತರ ಜೊತೆ ಸಂಘರ್ಷಗಳು ನಡೆದಿವೆ. ಇದರಿಂದ ದೂರ ಸಂಚರಿಸುವ ವಾಹನಗಳಿಗೆ ಅನಗತ್ಯ ಕಿರಿಕಿರಿ ಅನುಭವಿಸಬೇಕಾಗುತ್ತದೆ.
ರಕ್ಷಣಾಗೋಡೆ ಕಾಮಗಾರಿ ಸ್ಥಗಿತ: ಜನ, ಜಾನುವಾರು ಎತ್ತಿನಗಾಡಿ ಸೇರಿದಂತೆ ಇನ್ನಿತರ ವಾಹನಗಳು ಚತುಷ್ಪಥ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ನುಸುಳದಿರಲಿ ಎಂಬ ಉದ್ದೇಶದಿಂದ ಕಬ್ಬಿಣ ಹಾಗೂ ಅಲ್ಯೂಮಿನಿಯಂ ರಕ್ಷಣಾಗೋಡೆಗಳನ್ನು ನಿರ್ಮಿಸಲಾಗುತ್ತದೆ. ಆದರೆ, ಸದರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ನುಸುಳುವಿಕೆಗೆ ಕಡಿವಾಣ ಹಾಕುವವರು ಇಲ್ಲದಂತಾಗಿದೆ.
ಕೇಳುವವರಿಲ್ಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾನುವಾರು ಅಡೆತಡೆಯಿಂದಾಗಿ ಅಪಘಾತದ ಪ್ರಕರಣಗಳು ನಿತ್ಯ ಸಂಭವಿಸುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಇತ್ತ ಗಮನಹರಿಸಿಲ್ಲ. ಹೀಗಾಗಿ ರೈತರು ಬೇಕಾಬಿಟ್ಟಿಯಾಗಿ ಜಾನುವಾರು ಮೇಯಿಸುತ್ತಿರುವುದು ಕಾಣ ಸಿಗುತ್ತದೆ. ನಿತ್ಯ ಸಂಭವಿಸುವ ಹಲವಾರು ದುರ್ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಪೊಲೀಸ್ ಇಲಾಖೆಯೂ ಕೂಡ ಪರ್ಯಾಯ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದೆ.
ಸೌಂದರ್ಯಕ್ಕೆ ಧಕ್ಕೆ: ಚತುಷ್ಪಥ ರಸ್ತೆ ಯೋಜನೆ ಅನುಷ್ಟಾನಕ್ಕಾಗಿ ನೂರಾರು ವರ್ಷ ಬೆಲೆ ಬಾಳುವ ಮರಗಳನ್ನು ಕಡಿದು ಹಾಕಿರುವ ಪ್ರಾಧಿಕಾರ ಡಿವೈಡರ್‌ಗಳಲ್ಲಿ ಸುಂದರವಾದ ಹೂ ಗಿಡಗಳನ್ನು ಬೆಳೆಸಿಲ್ಲ. 2-3 ಬಾರಿ ನೆಟ್ಟಿದ್ದ ಸಸಿಗಳನ್ನು ಜಾನುವಾರುಗಳು ತಿಂದು ಹಾಕಿದ್ದು, ಮುಳ್ಳಿನ ಗಿಡಗಳು ಬೆಳೆಯುತ್ತಿವೆ. ಇದೀಗ ಮಳೆಗಾಲ ಆರಂಭವಾಗಿದ್ದು, ಡಿವೈಡರ್‌ಗಳಲ್ಲಿ ಹಸಿರು ಹುಲ್ಲು ಬೆಳೆಯುತ್ತಿದೆ. ಜಾನುವಾರು ಮೆಯಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೆದ್ದಾರಿಗಿಳಿಯುವ ಜಾನುವಾರುಗಳನ್ನು ನಿಯಂತ್ರಿಸಲು ಇನ್ನಾದರೂ ಪ್ರಾಧಿಕಾರ ಮುಂದಾಗುವುದೇ ಕಾದು ನೋಡಬೇಕಾಗಿದೆ.

- ಶಿವಾನಂದ ಮಲ್ಲನಗೌಡರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.