ಕಾಳಸಂತೆ ಮಾರಾಟಗಾರರ ಮೇಲೆ ಕ್ರಮ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮೇ 18
ಬೀಜ ಹಾಗೂ ಗೊಬ್ಬರ ವಿತರಣೆಯಲ್ಲಿ ರೈತನಿಗೆ ಅನ್ಯಾಯವಾಗುವುದನ್ನು ಸಹಿಸಲಾಗುವುದಿಲ್ಲ. ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ವಿತರಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಶಾಸಕ ಬಸವರಾಜ ಶಿವಣ್ಣನವರ ಅಧಿಕಾರಿಗಳಿಗೆ ಸೂಚಿಸಿದರು.
ಮುಂಗಾರು ಹಂಗಾಮು ಆರಂಭವಾದ ಹಿನ್ನೆಲೆಯಲ್ಲಿ ಸ್ಥಳೀಯ ತಹಸೀಲ್ದಾರ ಕಚೇರಿಯಲ್ಲಿ ವಿಎಸ್ಎಸ್ ಬ್ಯಾಂಕ್ ಅಧಿಕಾರಿಗಳ, ಬೀಜ, ಗೊಬ್ಬರ ವಿತರಕರ ಹಾಗೂ ರೈತ ಮುಖಂಡರಿಗಾಗಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಎಚ್ಚರಿಕೆ ವಹಿಸಿ: ದೇಶದ ಆಧಾರಸ್ಥಂಭ ಅನ್ನದಾತನ ಮೇಲೆ ನಡೆಯುವ ಶೋಷಣೆಯನ್ನು ಸಹಿಸಲು ಸಾಧ್ಯವಿಲ್ಲ. ಮುಗ್ಧ ರೈತನನ್ನು ಮೋಸಗೊಳಿಸುವಂತಹ ಪ್ರಕರಣಗಳು ನಡೆಯದಂತೆ ಅಧಿಕಾರಿಗಳು ಎಚ್ಚರ ವಹಿಸಿಬೇಕು. ರೈತ ತಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ದ್ರೋಹ ಮಾಡದಂತೆ ವಿತರಕರಲ್ಲಿ ಮನವಿ ಮಾಡಿದರು.
ಇತರ ಕಂಪನಿ ಬೀಜ ಖರೀದಿಸಿ ಒಂದೇ ಕಂಪನಿ ಹತ್ತಿ ಬೀಜಗಳಿಗೆ ರೈತರು ಮುಗಿ ಬೀಳುತ್ತಿರುವುದರಿಂದಲೇ ಕಾಳಸಂತೆಯಲ್ಲಿ ಹೆಚ್ಚಿನ ದರದಲ್ಲಿ ಮಾರಾಟಕ್ಕೆ ಅನುಕೂಲ ಕಲ್ಪಿಸಿದಂತಾಗುತ್ತದೆ. ರೈತರು ಸಮಗ್ರ ಚಿಂತನೆ ನಡೆಸುವ ಮೂಲಕ ಇನ್ನಿತರ ಕಂಪನಿಗಳ ಉತ್ತಮ ತಳಿ ಬೀಜಗಳನ್ನು ಬಳಕೆ ಮಾಡುವಂತೆ ಸಲಹೆ ನೀಡಿದರು.
10 ಸಾವಿರ ಹೆಕ್ಟೇರ್!: ಸಹಾಯಕ ಕೃಷಿ ನಿರ್ದೇಶಕ ಟಿ.ಎಚ್. ನಟರಾಜ ಮಾತನಾಡಿ, ಪ್ರಸಕ್ತ ಮುಂಗಾರಿನಲ್ಲಿ ಹಂಗಾಮಿಗೆ 32 ಸಾವಿರ ಹೆಕ್ಟೇರ್ ಬಿತ್ತನೆಯಾಗುವ ನಿರೀಕ್ಷೆಯಿದೆ. 19 ಸಾವಿರ ಹೆಕ್ಟರ್ನಲ್ಲಿ ಮೆಕ್ಕೆಜೋಳ 10 ಸಾವಿರ ಹೆಕ್ಟೇರ್ನಲ್ಲಿ ಹತ್ತಿ ಬಿತ್ತನೆಯಾಗಲಿದೆ ಎಂದರು.
11,000 ಪ್ಯಾಕೇಟ್ ಹಂಚಿಕೆ: ಕೃಷಿ ಇಲಾಖೆಯಡಿ ವಿತರಿಸುವ ಬಿತ್ತನೆ ಬೀಜಗಳನ್ನು ಶೇ. 50 ರಿಯಾಯತಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ವಿತರಣೆ ಮಾಡಲು ಕ್ರಮ ಜರುಗಿಸಲಾಗಿದೆ. ಮಹಿಕೊ ಕಂಪನಿಯ ಬಿಟಿ(ಕನಕ) ಹತ್ತಿ ಬೀಜಗಳು ಸುಮಾರು 11,000 ಪ್ಯಾಕೇಟ್ ಹಂಚಿಕೆಯಾಗಿದ್ದು, ಖಾಸಗಿ ಮಾರಾಟಗಾರರಲ್ಲಿ ಲಭ್ಯವಿದೆ ಎಂದರು.
ಗುಣಮಟ್ಟದ ಬೀಜ: ಮಹಿಕೊ ಕಂಪನಿಯ ಎಂಆರ್ಸಿ-7201, ಎಂಆರ್ಸಿ-7347, ನಿತ್ಯ, ಚೈತನ್ಯ ತಳಿಗಳು ಸುಮಾರು 12,500 ಪ್ಯಾಕೆಟ್ನಷ್ಟು ಲಭ್ಯವಿದೆ. ಅಲ್ಲದೇ ಇನ್ನಿತರ ಕಂಪನಿಗಳ ಬಿಟಿ ತಳಿ ಹತ್ತಿ ಬೀಜಗಳು ಮಾರಾಟಗಾರರಲ್ಲಿ ಲಭ್ಯವಿದ್ದು, ಅವುಗಳು ಕೂಡ ಉತ್ತಮ ಗುಣಮಟ್ಟವನ್ನು ಹೊಂದಿವೆ ಎಂದರು.
ತೀವ್ರ ನಿಗಾ ಇರಲಿ: ಅಧ್ಯಕ್ಷತೆ ವಹಿಸಿದ್ದ ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಗೋಲಿಬಾರ್ ಘಟನೆಯಿಂದ ಸಾಕಷ್ಟು ಕಲಿತದ್ದಾಗಿದೆ. ನಕಲಿ ಅಭಾವ ಸೃಷ್ಟಿಸುವ ವಿತರಕರ ಮೇಲೆ ನಿಗಾ ಇಡಬೇಕು. ಬೀಜ ಹಾಗೂ ಗೊಬ್ಬರ ಮಾರಾಟ ಮಾಡಲು ಕೃಷಿ ಇಲಾಖೆ ಅನುಮತಿ ನೀಡಿದ್ದರೂ ಸಹ ನಿಗದಿತ ಬೆಲೆಗೆ ಮಾರಾಟ ಮಾಡಲು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ಅಂತಹವರ ಲೈಸನ್ಸ್ ರದ್ದುಪಡಿಸಲು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ತಹಸೀಲ್ದಾರ್ ಸುಭಾಷ ಪುಲಾರಿ, ಸಿಪಿಐ ಚಿಕ್ಕರೆಡ್ಡಿ, ಚಂದ್ರಣ್ಣ ಮುಚ್ಚಟ್ಟಿ, ಎಸ್.ಸಿ. ಶಿಡೇನೂರು, ರೈತ ಮುಖಂಡರಾದ ರುದ್ರಗೌಡ ಕಾಡನಗೌಡ್ರ, ಚಿಕ್ಕಣ್ಣ ಛತ್ರದ, ಕೆ.ವಿ. ದೊಡ್ಡಗೌಡ್ರ, ಮಂಜು ತೋಟದ, ಕೃಷಿಕ ಸಮಾಜದ ಉಪಾಧ್ಯಕ್ಷ ನಿಂಗಪ್ಪ ಹಿತ್ತಲಮನಿ, ಸದಸ್ಯರಾದ ಶಂಭಣ್ಣ ದಾನಪ್ಪನವರ, ಶಂಕರಗೌಡ ಪಾಟೀಲ, ತಿರಕಪ್ಪ ಬಾಸೂರು, ಸುರೇಶಗೌಡ ಪಾಟೀಲ್, ಕರಿಯಪ್ಪ ಅಳಲಗೇರಿ ಎಲ್.ಎಸ್. ಅಜಗಣ್ಣನವರ, ಎ.ಟಿ. ಸ್ವಾಮಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

