ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಬ್ಯಾಡಗಿ: ಮೆಣಸಿನಕಾಯಿ ತುಂಬು ತೆಗೆಯುವ ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ಅಸಂಘಟಿತ ಕೂಲಿ ಕಾರ್ಮಿಕ ಮಹಿಳೆಯರು ಮಂಗಳವಾರ ಸ್ಥಳೀಯ ಎಪಿಎಂಸಿ ಕಾರ್ಯಾಲಯ ಹಾಗೂ ವರ್ತಕರ ಸಂಘದ ಕಚೇರಿಗೆ ಮುತ್ತಿಗೆ ಹಾಕಿ ಸುಮಾರು ಮೂರು ತಾಸಿಗೂ ಅಧಿಕ ಕಾಲ ಹಠಾತ್ ಪ್ರತಿಭಟನೆ ನಡೆಸಿದರು.
ಎಪಿಎಂಸಿ ಎದುರಿಗೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಕೂಲಿ ಕಾರ್ಮಿಕ ಮಹಿಳೆಯರು, ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಸೀಸನ್ ಅವಧಿಯಲ್ಲಿ (ಜನವರಿಯಿಂದ ಏಪ್ರಿಲ್ವರೆಗೆ ಮೆಣಸಿನಕಾಯಿ ತುಂಬು ತೆಗೆಯಲು ಕೆಜಿಯೊಂದಕ್ಕೆ ರು. 6ರಿಂದ ರು. 12 ನೀಡುತ್ತಿದ್ದ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಇದೀಗ ರು. 4ರಿಂದ 6ಗಳಿಗೆ) ದರ ಇಳಿಸಿದ್ದೇ ಪ್ರತಿಭಟನೆಗೆ ಕಾರಣವೆನ್ನಲಾಗುತ್ತಿದೆ.
ತುಂಬು ತೆಗೆಯಲು ಪಟ್ಟಣ, ತಾಲೂಕಿನ ಬನ್ನಿಹಟ್ಟಿ, ಛತ್ರ, ಗುಂಡೇನಹಳ್ಳಿ, ತಡಸ, ಬಿಸಲಹಳ್ಳಿ, ಅಂಗರಗಟ್ಟಿ ಸೇರಿದಂತೆ ಜಿಲ್ಲೆಯ ಯಲವಿಗಿ, ಸವಣೂರು, ಕರ್ಜಗಿ, ಹನುಮನಮಟ್ಟಿ, ಕಜ್ಜರಿ, ಕಾಕೋಳ ಮತ್ತು ಧಾರವಾಡ ಜಿಲ್ಲೆಯ ಗುಡಗೇರಿ, ಕಳಸ ಗ್ರಾಮಗಳಿಂದ ಪ್ರತಿನಿತ್ಯ ಸುಮಾರು 5 ಸಾವಿರಕ್ಕೂ ಹೆಚ್ಚು ಮಹಿಳಾ ಕೂಲಿ ಕಾರ್ಮಿಕರು ಮೆಣಸಿನಕಾಯಿ ತುಂಬು ತೆಗೆಯುವ ಕೆಲಸಕ್ಕೆ ಸ್ಥಳೀಯ ಮಾರುಕಟ್ಟೆಗೆ ಆಗಮಿಸುತ್ತಾರೆ. ಆದರೆ, ಸ್ಥಳೀಯ ವ್ಯಾಪಾರಸ್ಥರು ವರ್ತಕರ ಸಂಘ ನಿಗದಿಪಡಿಸಿದ ದರಕ್ಕಿಂತ ಕಡಿಮೆ ಹಣ ನೀಡುತ್ತಿರುವುದೇ ಮಹಿಳಾ ಕೂಲಿ ಕಾರ್ಮಿಕರು ಆಕ್ರೋಶಗೊಳ್ಳಲು ಕಾರಣವಾಗಿದೆ.
ಕೈಗೊಂಬೆಗಳಾಗಿದ್ದೇವೆ: ಪ್ರತಿಭಟನಾನಿರತರನ್ನುದ್ದೇಶಿಸಿ ವಾಲ್ಮೀಕಿ ಸಂಘದ ದ್ಯಾಮವ್ವ ತಳವಾರ ಮಾತನಾಡಿ, ಕೂಲಿ ಕಾರ್ಮಿಕರ ಆವಶ್ಯಕತೆ ಇದ್ದಾಗ ಹೆಚ್ಚು ಹಣ ನೀಡಿ (ನಾವು ಕೇಳಿದಷ್ಟು) ದುಡಿಸಿಕೊಳ್ಳುವ ಇಲ್ಲಿನ ವ್ಯಾಪಾರಸ್ಥರು, ಸೀಸನ್ ಕಡಿಮೆಯಾಗುತ್ತಿದ್ದಂತೆ ನಮ್ಮ ಬಗ್ಗೆ ನಿರ್ಲಕ್ಷ್ಯ ಭಾವನೆ ತೋರುತ್ತಾರೆ. ಅಲ್ಲದೇ ಅತೀ ಕಡಿಮೆ ದರಕ್ಕೆ ದುಡಿಸಿಕೊಳ್ಳುವ ಅವಕಾಶವಾದಿ ವ್ಯಾಪಾರಸ್ಥರು ಕೂಲಿ ಕಾರ್ಮಿಕರನ್ನು ಕೈಗೊಂಬೆಯಂತೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರಲ್ಲದೆ, ಪ್ರತಿ ಕೆಜಿಗೆ ರು. 10 ನಿಗದಿಪಡಿಸುವಂತೆ ಆಗ್ರಹಿಸಿದರು.
ಕೈತುಂಬ ಕೆಲಸ ಇಲ್ಲ: ದಾವಲ್ಬಿ ಕೂರಗುಂದ ಮಾತನಾಡಿ, ಪ್ರಸಕ್ತ ಆವಕ ಕಡಿಮೆಯಾಗಿದ್ದಕ್ಕಾಗಿ ಮಹಿಳಾ ಕೂಲಿ ಕಾರ್ಮಿಕರಿಗೆ ಕೈತುಂಬ ಕೆಲಸವಿಲ್ಲದಂತಾಗಿದೆ. 4 ಜನ ಕೆಲಸದಲ್ಲಿ 8 ಜನರು ಮಾಡಬೇಕಾಗಿದ್ದು, ಬಂದಂತಹ ಕೂಲಿ ಹಣದಲ್ಲೇ ಹಂಚಿಕೊಳ್ಳಬೇಕಾಗಿದೆ ಎಂದರು.
ಚಾರ್ಜ್ ಕೊಟ್ಟು ಬರಬೇಕ್ರಿ: ಆಟೋ, ಬಸ್, ರೈಲ್ವೆ ಇನ್ನಿತರ ವಾಹನಗಳಲ್ಲಿ ದೂರದ ಊರುಗಳಿಂದ ಬಸ್ ಚಾರ್ಜ್ ಕೊಟ್ಟು ಮಾರುಕಟ್ಟೆಗೆ ಆಗಮಿಸುವ ಕೂಲಿ ಕಾರ್ಮಿಕ ಮಹಿಳೆಯರು ಪ್ರತಿನಿತ್ಯ ಸುಮಾರು ರು. 10ರಿಂದ ರು. 50 ವ್ಯಯಿಸುತ್ತಿದ್ದಾರೆ. ಸೀಸನ್ನಲ್ಲಿ ರು. 300ರಿಂದ ರು. 500 ಪಡೆಯುತ್ತಿದ್ದ ಕಾರ್ಮಿಕರಿಗೆ ಇದೀಗ ರು. 100 ಸಿಗುತ್ತಿಲ್ಲ. ಹೀಗಾಗಿ ದಿನವಿಡೀ ದುಡಿದರೂ ಹೊಟ್ಟೆಪಾಡಿಗೆ ಸಾಲದಂತಾಗಿದೆ ಎಂದು ಅರಬಗೊಂಡ ಗ್ರಾಮದ ಉಚ್ಚಂಗೆಮ್ಮ ದೊಡ್ಮನಿ ತಿಳಿಸಿದರು.
ಬಿಗಿಪಟ್ಟು: ಎಪಿಎಂಸಿ ಕಚೇರಿಗೆ ನುಗ್ಗಿದ ಪ್ರತಿಭಟನಾನಿರತ ಮಹಿಳೆಯರಿಗೆ ಕಾರ್ಯದರ್ಶಿ ಅನುಪಸ್ಥಿತಿಯಲ್ಲಿ ಲೆಕ್ಕ ಪರಿಶೋಧಕ ಪ್ರಭು ದೊಡ್ಮನಿ ಸಮಜಾಯಿಷಿ ನೀಡಲು ಮುಂದಾದರು, ತಮ್ಮ ಬೇಡಿಕೆ ಎಪಿಎಂಸಿ ವ್ಯಾಪ್ತಿಗೆ ಬರುವುದಿಲ್ಲ. ವರ್ತಕರಿಗೆ ಸಂಬಂಧಿಸಿದ ವಿಚಾರ ಎಂದರು. ಸಂತುಷ್ಟರಾಗದ ಕೂಲಿ ಕಾರ್ಮಿಕರು ಎಪಿಎಂಸಿ ನೇತೃತ್ವದಲ್ಲಿಯೇ ಸಮಸ್ಯೆ ಪರಿಹರಿಸುವಂತೆ ಬಿಗಿಪಟ್ಟು ಹಿಡಿದರು.
ಸಂಘದ ನಿರ್ಣಯ ಅಂತಿಮ: ವರ್ತಕರ ಸಂಘ ಕಳೆದ ವರ್ಷ ಜರುಗಿಸಿದ ಕೂಲಿಕಾರ್ಮಿಕರ ಸಭೆಯಲ್ಲಿ ನಿರ್ಣಯಿಸಿದಂತೆ ಡಬ್ಬಿ ಮೆಣಸಿನಕಾಯಿ ತುಂಬು ತೆಗೆಯಲು ಪ್ರತಿ ಕೆಜಿಗೆ ರು. 5, ದಪ್ಪ ತಳಿಗೆ ರು. 6 ಇಂಡೋ ಹಾಗೂ ಡಿಡಿ ತಳಿಗೆ ರು. 7 ಹಾಗೂ ರ್ಯಾಲೀಸ್ ತಳಿಗೆ ರು. 8 ನಿಗದಿಪಡಿಸಿದೆ. ಸಂಘದ ನಿರ್ಣಯದಂತೆ ವರ್ತಕರು ಈಗಲೂ ತುಂಬು ತೆಗೆಯುವವರಿಗೆ ಕೂಲಿ ನೀಡಬೇಕು ಹಾಗೂ ಅದನ್ನು ಒಪ್ಪಿಕೊಂಡು ಕೂಲಿಕಾರ್ಮಿಕರು ಕಾರ್ಯನಿರ್ವಹಿಸುವಂತೆ ಪ್ರಭು ದೊಡ್ಮನಿ ತಿಳಿಸಿದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸಿಪಿಐ ಸಿ.ಎಸ್. ಚಿಕ್ಕರೆಡ್ಡಿ, ಪಿಎಸ್ಐ ಬೇಲೂರು, ಎನ್.ಎಚ್. ಹೊಸೂರು ಭದ್ರತೆ ಒದಗಿಸಿ, ಮೂನ್ಲೂಚನೆ ಇಲ್ಲದೆ ಪ್ರತಿಭಟನೆಗಿಳಿಯುವುದು ತಪ್ಪು, ವರ್ತಕರ ಸಂಘದ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಪರಿಹರಿಸಿಕೊಳ್ಳುವಂತೆ ಸಮಜಾಯಿಷಿ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಹಿಂದೆ ಸರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

