ದೈಹಿಕ, ಮಾನಸಿಕ ನ್ಯೂನತೆ ತೊಲಗಿಸಿ
ಹಾವೇರಿ: ಆರೋಗ್ಯ ದೇಹಕ್ಕೆ ಸಂಬಂಧಿಸಿದ್ದರೆ, ಮಾನಸಿಕ ಆರೋಗ್ಯ ಮನಸ್ಸು ಹಾಗೂ ದೇಹ ಎರಡಕ್ಕೂ ಸಂಬಂಧಿಸಿದ್ದಾಗಿದೆ. ವಿಶ್ವದ ಶೇ. 30ರಷ್ಟು ಜನ ಮಾನಸಿಕ ನ್ಯೂನತೆಯಿಂದ ಬಳಲುತ್ತಿದ್ದರೆ ಅವರಲ್ಲಿ ಶೇ. 50ರಷ್ಟು ಜನ ಗಂಭೀರ ಮಾನಸಿಕ ಆರೋಗ್ಯ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಡಾ ವಿಜಯಕುಮಾರ ಬಳಿಗಾರ ನುಡಿದರು.
ಇಲ್ಲಿನ ಬಾಪುಗೌಡ್ರ ಕಾಂಪ್ಲೆಕ್ಸ್ನಲ್ಲಿರುವ ಬಳಿಗಾರ ಮಾನಸಿಕ ಆಸ್ಪತ್ರೆ ಆವರಣದಲ್ಲಿ ಸೃಷ್ಠಿ ಫೌಂಡೇಷನ್ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ರೋಗಿಗಳನ್ನು ತಪಾಸಣೆ ಮಾಡಿ ಮಾತನಾಡಿದರು.
ಮಾನಸಿಕ ಆರೋಗ್ಯ ವಿವಿಧ ಕಾರಣಗಳಿಂದ ಹದಗೆಡುತ್ತಿದ್ದು, ಅದರಲ್ಲಿ ಶೇ. 15ರಷ್ಟು ವಂಶವಾಹಿ, ಶೇ. 15ರಷ್ಟು ಬಾಹ್ಯ ಕಾರಣ. ಆದರೆ, ಉಳಿದದ್ದು ಸಾಮಾಜಿಕ ಹಾಗೂ ರೋಗಿಯ ವೈಯಕ್ತಿಕ ಕಾರಣದಿಂದಲೇ ಆಗಿದೆ. ಹತಾಶೆ, ಕೊರಗುವಿಕೆ, ಸತತ ದುಃಖ, ಆಕಸ್ಮಿಕ ಆಘಾತಗಳು ಹಾಗೂ ಅದರ ಪರಿಣಾಮಗಳಿಂದ ವ್ಯಕ್ತಿ ಬಳಲುವುದು ಸಾಮಾನ್ಯವಾಗಿದೆ.
ಆದರೆ, ಸಣ್ಣ ಬಳಲಿಕೆ ಹಾಗೂ ಹತಾಶೆಗಳನ್ನು ನಿರ್ಲಕ್ಷಿಸಬೇಡಿ. ತೊಂದರೆಗೊಳಗಾದವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ. ಅಗತ್ಯ ಎನಿಸಿದಲ್ಲಿ ಚಿಕಿತ್ಸೆ ಕೊಡಿಸಬೇಕು. ನಿರ್ಲಕ್ಷಿಸಿದಲ್ಲಿ ಅದು ಕಣ್ಣಿಗೆ ಕಾಣದಂತೆ ಬೆಳೆದು ವ್ಯಕ್ತಿಯನ್ನು ಆತ್ಮಹತ್ಯೆಯಂತಹ ಪ್ರಾಣ ಹಾನಿಗೂ ನೂಕುತ್ತದೆ ಎಂದು ಸಲಹೆ ಮಾಡಿದರು.
ಸೃಷ್ಟಿ ಫೌಂಡೇಶನ್ ಅಧ್ಯಕ್ಷ ಸುಭಾಸ ಹುಲ್ಯಾಳದ ಮಾತನಾಡಿ, ಆರೋಗ್ಯ ಶಿಬಿರಗಳು ಸಾಮಾನ್ಯ, ಆದರೆ, ಮಾನಸಿಕ ಆರೋಗ್ಯದ ರಕ್ಷಣೆ ಇಂದಿನ ಒತ್ತಡದ ದಿನಗಳಲ್ಲಿ ಅತ್ಯಂತ ಅಗತ್ಯವಾಗಿದೆ ಎಂಬುದನ್ನು ಮನಗಂಡು ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದರು. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜನತೆಯ ದೃಷ್ಟಿಕೋನ ಬದಲಾಗಬೇಕಿದೆ. ಈ ಕುರಿತಂತೆ ಸಾಮಾಜಿಕ ಭಯದಿಂದ ಹೊರಬಂದು ಮಾನಸಿಕ ಆರೋಗ್ಯ ರಕ್ಷಣೆಗೆ ಎಲ್ಲರೂ ಮುಂದಾಗಬೇಕಿದೆ. ಮಾನಸಿಕ ಭ್ರಮೆಯಿಂದ ಹೊರ ಬಂದಾಗಲೇ ಸಾಮಾಜಿಕ ಸ್ವಾಸ್ಥ್ಯ ಸಾಧ್ಯ ಎಂದರು. ಶಿಬಿರದಲ್ಲಿ ಸುಮಾರು 30ಕ್ಕೂ ಅಧಿಕ ರೋಗಿಗಳು ಪಾಲ್ಗೊಂಡು ತಪಾಸಣೆ ಹಾಗೂ ಚಿಕಿತ್ಸೆ ಪಡೆದರು.
ಈ ಸಂದರ್ಭ ಸೃಷ್ಟಿ ಫೌಂಡೇಶನ್ ಕಾರ್ಯದರ್ಶಿ, ನ್ಯಾಯವಾದಿ ಗಂಗಾಧರ ಗೌಡರ, ನಾಗರಾಜ ನಡುವಿನಮಠ, ಚನ್ನಬಸಪ್ಪ ಬಳಿಗಾರ, ಡಾ ಉಮಾ ವಿಜಯಕುಮಾರ, ವಿನೋದಾ ಹಿರೇಮಠ, ನಿಶಾಂತ, ನಂದೀಶ, ಜಗದೀಶ ಚೌಟಗಿ, ಮಾಲತೇಶ ನಾಗಲಾಪುರ, ಶೈಲಾ ಮಹಾಲಿಂಗಶೆಟ್ಟಿ, ರಾಜೇಶ್ವರಿ ಬಸನಗೌಡರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

