ಏತ ನೀರಾವರಿ ಕಾಮಗಾರಿ ಶೀಘ್ರ ಪೂರ್ಣ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮೇ 23
ಆಡಳಿತ ಯಂತ್ರಕ್ಕೆ ಚುರುಕು ನೀಡುವ ಮೂಲಕ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರಿಕೆ ವಹಿಸಲಾಗುವುದಲ್ಲದೇ ಕುಂಟುತ್ತಾ ಸಾಗಿರುವ ಗುಡ್ಡದ ಮಲ್ಲಾಪುರ ಏತ ನೀರಾವರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ರೈತರ ಕೃಷಿಭೂಮಿಗೆ ನೀರುಣಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
ಗುರುವಾರ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಜನಸಂಪರ್ಕ ಕಚೇರಿಗೆ ಪೂಜೆ ನೆರವೇರಿಸಿ ಬಳಿಕ ನಡೆಸಿದ ಪ್ರಥಮ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡುವುದಾಗಿ ಘೋಷಿಸಿದ ಶಾಸಕ ಶಿವಣ್ಣನವರ, ಬ್ಯಾಡಗಿ ಕ್ಷೇತ್ರ ವ್ಯಾಪ್ತಿಯ 117 ಗ್ರಾಮಗಳಲ್ಲಿ ಕುಡಿಯುವ ನೀರು ಕೊರತೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದರು. ಎಲ್ಲ ಗ್ರಾಮಗಳಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ಕುರಿತು ಚರ್ಚೆ ನಡೆದಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದರು.
ರಾಜೀವ್ಗಾಂಧಿ ಸಬ್ಮಿಶನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಶಾಶ್ವತ ನೀರೊದಗಿಸಲಾಗುವುದು. ಈ ಕುರಿತಂತೆ ಕಾಗಿನೆಲೆ ಹಾಗೂ ಆಣೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದರು.
ಕೆರೆಗೆ ನೀರು: ತಾಲೂಕು ವ್ಯಾಪ್ತಿಯಲ್ಲಿ ಪ್ರಮುಖ ನದಿಗಳು ಹರಿದಿಲ್ಲ. ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಹೀಗಾಗಿ ಬ್ಯಾಡಗಿ ತಾಲೂಕಿನಲ್ಲಿ ಕೃಷಿ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ಜನ- ಜಾನುವಾರು ಸೇರಿದಂತೆ ಅಂತರ್ಜಲ ಹೆಚ್ಚಿಸುವಲ್ಲಿ ಸಹಕಾರಿಯಾಗಲಿರುವ ಕೆರೆಗಳಿಗೆ ನದಿ ಮೂಲಗಳಿಂದ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಮೇ 27ರಂದು ರಾಣಿಬೆನ್ನೂರಿನಲ್ಲಿ ರೈತ ಮುಖಂಡರ ಹಾಗೂ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.
ಅಧಿಕಾರಿಗಳೇ ಹೊಣೆ: ಕುಂಟುತ್ತಾ ಸಾಗಿರುವ 20 ಗ್ರಾಮಗಳ 13 ಸಾವಿರ ಎಕರೆ ಕೃಷಿ ಪ್ರದೇಶಕ್ಕೆ ನೀರೊದಗಿಸುವ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ಕಾಮಗಾರಿ ಕಳಪೆಯಾಗಿರುವ ಕುರಿತು ಆರೋಪಗಳು ಕೇಳಿ ಬರುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿ ಹಾಗೂ ಗುತ್ತಿಗೆದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದ ಶಾಸಕರು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಇಂದೇ ಸೂಚಿಸುವುದಾಗಿ ತಿಳಿಸಿದರು.
ಅಗಲೀಕರಣ ನಿರ್ಧಾರ: ವಾಣಿಜ್ಯ ನಗರಿ ಬ್ಯಾಡಗಿ ಪಟ್ಟಣದ ಮುಖ್ಯರಸ್ತೆ ಅಗಲೀಕರಣಗೊಳಿಸಬೇಕೆಂಬುದು ಬಹುದಿನದ ಬೇಡಿಕೆ. ಆದರೆ, ಇಚ್ಛಾಶಕ್ತಿ ಕೊರತೆಯಿಂದ ಅಗಲೀಕರಣಕ್ಕೆ ಹಿನ್ನೆಡೆಯಾಗಿದೆ. ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಸಾರ್ವಜನಿಕರ ಸಹಕಾರ ಕೋರಿದರು. ಮುಖ್ಯರಸ್ತೆ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಅಧಿಕಾರಿಗಳಿಗೆ ಎಚ್ಚರ: ಕಚೇರಿಗಳಿಗೆ ಸಾರ್ವಜನಿಕರು ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆಡಳಿತ ಯಂತ್ರಕ್ಕೆ ಚುರುಕು ನೀಡುವುದಾಗಿ ತಿಳಿಸಿದ ಅವರು, ಕೆಲಸ ಮಾಡದೇ ಸಾರ್ವಜನಿಕರನ್ನು ಸತಾಯಿಸುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಮೂಲಭೂತ ಸೌಕರ್ಯ: ಪಟ್ಟಣದಲ್ಲಿನ ಆಶ್ರಯ ಬಡಾವಣೆ, ಇನ್ನಿತರ ಹಿಂದುಳಿದ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಕ್ರಮ ಜರುಗಿಸಲಾಗುವುದು. ಬಡವರಿಗೆ ನೀಡುವ ಬಿಪಿಎಲ್ ಕಾರ್ಡ್ ವಿತರಣೆಗೆ ಆದ್ಯತೆ ನೀಡುವುದಾಗಿ ಶಾಸಕರು ತಿಳಿಸಿದರು.
ತಾಂತ್ರಿಕ ಕಾಲೇಜು: ಕ್ಷೇತ್ರದ ವ್ಯಾಪ್ತಿಯಲ್ಲಿನ ಬಡವರು ತಾಂತ್ರಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೀಗಾಗಿ ಪಟ್ಟಣದಲ್ಲಿ ಡಿಪ್ಲೋಮಾ, ಐಟಿಐ ತಾಂತ್ರಿಕ ಮಹಾವಿದ್ಯಾಲಯಗಳನ್ನು ಸ್ಥಾಪಿಸಲು ಚಿಂತನೆ ನಡೆಸಿರುವುದಾಗಿ ತಿಳಿಸಿದ ಅವರು, ಶೀಘ್ರ ಕಾರ್ಯೋನ್ಮುಖವಾಗುವುದಾಗಿ ತಿಳಿಸಿದರು.
ವದಂತಿಗೆ ಕಿವಿಗೊಡದಿರಿ: ಬೀಜ ಹಾಗೂ ಗೊಬ್ಬರ ಸಮರ್ಪಕ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, ತಪ್ಪು ಮಾಹಿತಿ ಪಡೆದು ರೈತರು ಅನಗತ್ಯ ಗೊಂದಲ ಸೃಷ್ಟಿಸದಂತೆ ಮನವಿ ಮಾಡಿದ ಅವರು, ತಾಲೂಕಿನ ರೈತ ಮುಖಂಡರ ಈಗಾಗಲೇ ಸಭೆ ನಡೆಸಲಾಗಿದೆ ಎಂದರು. ಈ ಸಂದರ್ಭ ಹುಸೇನಸಾಬ್ ದೊಡ್ಮನಿ, ಎಸ್.ಸಿ. ಶಿಡೇನೂರ, ರಮೇಶ ಸುತ್ತಕೋಟಿ, ದಾನಪ್ಪ ಚೂರಿ, ಮಂಜುನಾಥ ಬೋವಿ. ರುದ್ರಪ್ಪ ಹೊಂಕಣ, ಹುಚ್ಚನಗೌಡ ಲಿಂಗನಗೌಡ್ರ, ನಿಸಾರ್ ಅಹ್ಮದ್ ಹಾವನೂರು, ಇನ್ನಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

