ನೀರಿನ ಸಮಸ್ಯೆಗೆ ಬಿಜೆಪಿ, ಕೆಜೆಪಿ ಸದಸ್ಯರೇ ಕಾರಣ: ಸುಣಗಾರ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮೇ 24
ಹಾನಗಲ್ಲ ಪುರಸಭೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರು ಕಳೆದ 10 ವರ್ಷಗಳಿಂದ ಅಧಿಕಾರ ನಡೆಸಿ, ಒಟ್ಟು 23 ಸ್ಥಾನಗಳಲ್ಲಿ 15 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಇದೇ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸಣ್ಣ ನೀರಾವರಿ ಇಲಾಖೆ ಮತ್ತು ಪುರಸಭೆಯ ಮುಖ್ಯಾಧಿಕಾರಿಗೆ ತಾವೇ ಮನವಿ ಸಲ್ಲಿಸುವುದು ಎಷ್ಟು ಸಮಂಜಸ ಎಂದು ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯ ಸಂತೋಷ ಸುಣಗಾರ ಪ್ರಶ್ನಿಸಿದ್ದಾರೆ.
ಶುಕ್ರವಾರ ಪತ್ರಿಕಾ ಪ್ರಕಟಣೆಯೊಂದನ್ನು ನೀಡಿರುವ ಅವರು, ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರದಲ್ಲಿ ಅಧಿಕಾರ ನಡೆಸಿ, ಈಗ ಕೆಜೆಪಿ ಪಕ್ಷದಡಿ ಪುನರಾಯ್ಕೆಯಾದ ಅದೇ ಸದಸ್ಯರು ಅವರ ಅಧಿಕಾರಾವಧಿಯಲ್ಲಿ ನಗರದ ಕುಡಿಯುವ ನೀರು ಸಂಗ್ರಹಗಾರವಾದ ಆನೆಕೆರೆಯ ಅಭಿವೃದ್ಧಿ ಕಾಮಗಾರಿ ಪ್ರಾರಂಭ ಮಾಡುವ ಮುನ್ನ ಪಟ್ಟಣದ ಜನತೆಗೆ ಪರ್ಯಾಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮುಂದಾಲೋಚನೆ ಮಾಡದೇ ಇರುವುದು ನೀರಿನ ಸಮಸ್ಯೆಗೆ ಕಾರಣವಾಗಿದೆ. ಆನೆಕೆರೆಯಲ್ಲಿ ಸಂಗ್ರಹವಿರುವ ನೀರಿನ ನೆಪದಲ್ಲಿ ಪುರಸಭೆ ಕೊರೆಸಿದ ಕೊಳವೆ ಬಾವಿಗಳನ್ನು ದುರಸ್ತಿಗೊಳಿಸದೇ, ನಿರ್ಲಕ್ಷ್ಯ ತೋರಿದ್ದಾರೆ. ಪಟ್ಟಣದ ಜನತೆ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ತೊಂದರೆ ಅನುಭವಿಸುವಂತೆ ಮಾಡಿದ್ದಾರೆ ಎಂದು ಸಂತೋಷ ಆರೋಪಿಸಿದ್ದಾರೆ.
ಈ ಮನವಿ ಸಲ್ಲಿಕೆ ಹಿಂದೆ ರಾಜಕೀಯ ದುರುದ್ದೇಶ ಹೊಂದಿರುವುದು ಎದ್ದು ಕಾಣುತ್ತಿದ್ದು, ತಾವೇ ಮಾಡಿದ ತಪ್ಪನ್ನು ಮುಚ್ಚಿ ಹಾಕಲು ಅಧಿಕಾರದಲ್ಲಿರುವ ಹೊಸ ಕಾಂಗ್ರೆಸ್ ಸರ್ಕಾರದ ವಿರುದ್ಧ ಗೂಬೆ ಕೂರಿಸಲು ಹವಣಿಸುತ್ತಿದ್ದಾರೆ ಎಂದು ಕೆಜೆಪಿ ಸದಸ್ಯರ ನಡವಳಿಕೆ ಖಂಡಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಜನ ಬಿಜೆಪಿ ಆಡಳಿತಕ್ಕೆ ಬೇಸತ್ತಿದ್ದು, ಹೊಸ ಸರ್ಕಾರವನ್ನು ಪಟ್ಟಣಕ್ಕೆ ತಂದಿರುವ ಮತದಾರನಿಗೆ ಇವರ ತಪ್ಪುಗಳ ಅರಿವು ಇದೆ ಎನ್ನುವುದು ಕೆಜೆಪಿ ಸದಸ್ಯರಿಗೆ ತಿಳಿದಿರಲಿ ಎಂದು ತಿಳಿಸಿರುವ ಅವರು, ಕೂಡಲೇ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಕ್ಷಭೇದ ಮರೆತು ಚರ್ಚಿಸಿ ಮುಂದಿನ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿ ಎಂದು ಸಂತೋಷ ಕೆಜೆಪಿ ಸದಸ್ಯರಿಗೆ ಕರೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

