ಡೆಂಘೀ: ಸ್ವಚ್ಛತೆ ಕಾಯ್ದುಕೊಳ್ಳಿ
ಬ್ಯಾಡಗಿ: ತಾಲೂಕಿನಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿದ್ದು ಪಟ್ಟಣ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ಮೂಲಕ ಆರೋಗ್ಯ ಇಲಾಖೆ ಗ್ರಾಪಂ ಹಾಗೂ ಪುರಸಭೆಗಳು ಮುಂಜಾಗ್ರತೆ ವಹಿಸಿ ರೋಗ ಉಲ್ಬಣಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳೇ ಹೊಣೆ ಎಂದು ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ತಾಕೀತು ಮಾಡಿದರು.
ಶುಕ್ರವಾರ ಸುವರ್ಣಸೌಧದಲ್ಲಿ ಜರುಗಿದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆ ಕುರಿತು ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದೊಂದು ವಾರದಿಂದ ಡೆಂಘೀ ಕುರಿತಾದ 9 ಪ್ರಕರಣಗಳು ಬೆಳಕಿಗೆ ಬಂದಿದ್ದು, ಹೀಗಿದ್ದರೂ ಆರೋಗ್ಯ ಇಲಾಖೆ ಮಾತ್ರ ತ್ವರಿತಗತಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುತ್ತಿಲ್ಲ. ಹೀಗಾಗಿ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಉತ್ತರ ಹೇಳಲು ಸಾಧ್ಯವಾಗುತ್ತಿಲ್ಲ ಎಂದರು.
ತಡೆಗೋಡೆ ನಿರ್ಮಿಸಿ: ಲೋಕೋಪಯೋಗಿ ಇಲಾಖೆ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ನಿಸಾರ್ ಅಹ್ಮದ್ ಕಂಗನವರ, ತಾಲೂಕಿನ ಮಲ್ಲೂರ, ಚಿಕ್ಕಬಾಸೂರ, ಹೆಡಿಗ್ಗೊಂಡ, ಘಾಳಪೂಜಿ ಮೋಟೆಬೆನ್ನೂರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ರಸ್ತೆಗೆ ಹೊಂದಿಕೊಂಡಿರುವ ಬಹುತೇಕ ಕೆರೆಗಳಿಗೆ ಇಂದಿಗೂ ತಡೆಗೋಡೆ ನಿರ್ಮಾಣವಾಗಿಲ್ಲ. ಇದರಿಂದ ಯಾವುದೇ ಕ್ಷಣದಲ್ಲಿ ಅಪಘಾತಗಳು ಸಂಭವಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಕೆರೆಗಳಿಗೂ ಶೀಘ್ರವೇ ತಡೆಗೋಡೆ ನಿರ್ಮಿಸುವಂತೆ ಸಭೆಗೆ ತಿಳಿಸಿದರು.
ವಿದ್ಯುತ್ ಕಂಬಗಳನ್ನು ಅಳವಡಿಸಿ: ಸದಸ್ಯೆ ಅಖಿಲಾಬಾನು ಬ್ಯಾಡಗಿ, ತಾಲೂಕಿನ ಬಹುತೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು ಶಿಥಿಲಗೊಂಡಿದ್ದು ಗ್ರಾಮೀಣ ಪ್ರದೇಶದ ಜನರು ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ. ಹೀಗಾಗಿ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುವ ಮುನ್ನವೇ ಹೆಸ್ಕಾಂ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದರು.
ಸದಸ್ಯ ನಾಗರಾಜ ಬಳ್ಳಾರಿ ಮಾತನಾಡಿ, ಅರಣ್ಯ, ರೇಷ್ಮೆ, ಸಮಾಜ ಕಲ್ಯಾಣ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ತಾಪಂ ಸಭೆಯ ಗಮನಕ್ಕೆ ತರದೇ ಫಲಾನುಭವಿಗಳ ಜತೆ ಹಣಕಾಸಿನ ಒಪ್ಪಂದ ಮಾಡಿಕೊಂಡು ಹೆಸರು ಅಂತಿಮಗೊಳಿಸಿದ ಕುರಿತು ವದಂತಿಗಳಿವೆ. ಫಲಾನುಭವಿಗಳನ್ನು ನಿವೇ ಆಯ್ಕೆ ಮಾಡುವುದಾದರೇ ಜನಪ್ರತಿನಿಧಿಗಳ ನಾವು ಏತಕ್ಕೆ ಬೇಕು? ಇನ್ನು ಮುಂದೆ ನಮ್ಮ ಗಮನಕ್ಕೆ ತಾರದೇ ಫಲಾನುಭವಿಗಳನ್ನು ಆಯ್ಕೆ ಮಾಡಿದಲ್ಲಿ ಅಂಥವರ ಹೆಸರನ್ನು ರದ್ದುಪಡಿಸಲು ಸಭೆಯಲ್ಲಿ ತೀರ್ಮಾನಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಂಬೇಡ್ಕರ್ ನಿಗಮ ನಿರ್ಲಕ್ಷ್ಯ: ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ ಮಾತನಾಡಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳೆದ ಸಾಲಿನಲ್ಲಿ 75 ಎಸ್ಸಿ-ಎಸ್ಟಿ ಫಲಾನುಭವಿಗಳ ಸಿಗಬೇಕಾಗಿದ್ದ ಸಾಲ-ಸೌಲಭ್ಯ ಹಾಗೂ ಸಹಾಯಧನ ಕೇವಲ 26 ಜನರಿಗೆ ಲಭ್ಯವಾಗಿದ್ದು, ಇದರ ಬಗ್ಗೆ ಸೂಕ್ತ ಉತ್ತರ ನೀಡುವಂತೆ ಆಗ್ರಹಿಸಿದಾಗ, ಬ್ಯಾಂಕ್ ಅಧಿಕಾರಿಗಳು ಸಾಲ ನೀಡದಿರುವುದೇ ಇದಕ್ಕೆ ಕಾರಣ ಎಂಬುದಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಉತ್ತರಿಸಿದರು. ಮಧ್ಯ ಪ್ರವೇಶಿಸಿದ ತಾಪಂ ಇಓ ಕೃಷ್ಣಮೂರ್ತಿ, ಸಭೆಗೆ ಸಮಂಜಸವಾದ ಉತ್ತರ ನೀಡಬೇಕು. ಬಿಎಲ್ಬಿಸಿ ಸಭೆಗೆ ನಿಗಮದ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಫಲಾನುಭವಿಗಳಿಗೆ ಸಾಲ ಕೊಡಿಸಲು ವಿಫಲವಾಗಿದ್ದು ಹೀಗಾಗಿ ಶೇ. 30ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಕೂಡಲೇ ಎಲ್ಲ ಫಲಾನುಭವಿಗಳ ಯಾದಿಯನ್ನು ತಾಪಂ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದರು. ತಾಪಂ ಅಧ್ಯಕ್ಷೆ ಚಿನ್ನವ್ವ ಪಾಸಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಚನ್ನಬಸಪ್ಪ ದೇಸಾಯಿ, ಮಲ್ಲಿಕಾರ್ಜುನ ಕರಲಿಂಗಪ್ಪನವರ, ಸುಶೀಲವ್ವ ಮೇಗಳಮನಿ, ಕಮಲೆವ್ವ ಲಮಾಣಿ, ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

