ಹಾವೇರಿ

ಬ್ಯಾಡಗಿ ಮಾದರಿ ಕ್ಷೇತ್ರವಾಗಿಸುವೆ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮೇ 24
ಗೆಲುವಿನ ಬಳಿಕ ನನ್ನ ಮೇಲೆ ಜವಾಬ್ದಾರಿ ಹೆಚ್ಚಿದೆ. ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ತಿಳಿಸಿದ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಜನಪರ ಆಡಳಿತ ನೀಡುವುದೇ ನನ್ನ ಗುರಿ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಶುಕ್ರವಾರ ಸ್ಥಳೀಯ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಕಾಂಗ್ರೆಸ್ ಘಟಕ ಏರ್ಪಡಿಸಿದ್ದ ಕಾರ್ಯಕರ್ತರ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ತಂತ್ರಗಾರಿಕೆ ನಡೆಯಲಿಲ್ಲ: ಬದಲಾವಣೆ ಜಗದ ನಿಯಮ. ಇದಕ್ಕೆ ರಾಜಕಾರಣವೂ ಹೊರತಾಗಿಲ್ಲ. ಹರಿಯುವ ನೀರಿನಂತಿರುವ ರಾಜಕೀಯ ವ್ಯವಸ್ಥೆಯಲ್ಲಿ ನಾವೆಲ್ಲಾ ತೇಲುವಂತಹ ವಸ್ತುಗಳಾಗಿದ್ದೇವೆ. ವಿರೋಧಿಗಳ ತಂತ್ರಗಾರಿಕೆ, ನನ್ನನ್ನು ಸೋಲಿಸುವ ಪ್ರಯತ್ನಗಳು ಫಲಿಸಲಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ವಿರೋಧ ಪಕ್ಷದ ಎಲ್ಲ ಷಡ್ಯಂತ್ರಗಳನ್ನು ವಿಫಲಗೊಳಿಸಿದ್ದೇ ನನ್ನ ಗೆಲವಿಗೆ ಸಹಕಾರಿಯಾಯಿತು ಎಂದರು.
ಜನತೆಗೆ ಶ್ರಮ: ಅಧಿಕಾರವಿಲ್ಲದೇ ಕಳೆದ 10 ವರ್ಷಗಳಿಂದ ಪಕ್ಷದ ಕಾರ್ಯಕರ್ತರು ಹಲವಾರು ಸಂಕಷ್ಟಗಳನ್ನು ಎದುರಿಸಿದ್ದು, ಇದೀಗ ಪಕ್ಷ ಅಧಿಕಾರಕ್ಕೆ ಬಂದಿದೆ. ಹಗಲಿರುಳೆನ್ನದೇ ಜನರ ಸೇವೆ ಮಾಡಲು ಕಟಿಬದ್ಧರಾಗುವಂತೆ ಕರೆ ನೀಡಿದರು. ಅಧಿಕಾರವಿದ್ದ ಕಡೆ ಬಾಲ ಅಲ್ಲಾಡಿಸುವ ಇತರೆ ಪಕ್ಷದ ಕಾರ್ಯಕರ್ತರ ಬಣ್ಣದ ಮಾತುಗಳಿಗೆ ಎಂದಿಗೂ ಕಿವಿಗೊಡುವುದಿಲ್ಲ. ಈ ಕುರಿತು ಸಾಕಷ್ಟು ಎಚ್ಚರಿಕೆಯಿಂದ ಹೆಜ್ಜೆಯಿಡಲು ತೀರ್ಮಾನಿಸಿದ್ದೇನೆ ಎಂದರು.
ನಿಮ್ಮೆಲ್ಲರ ಪ್ರೀತಿ, ವಿಶ್ವಾಸದ ಎದುರು ಎಲ್ಲವೂ ಗೌಣ. ಮುಂದಿನ ಎಲ್ಲ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪಕ್ಷ ಗೆಲ್ಲುವಂತ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕಾಗಿದೆ. ಕ್ಷೇತ್ರದ ಸಮಸ್ತ ಅಭಿವೃದ್ಧಿಯ ಜತೆಗೆ ಬ್ಯಾಡಗಿ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಮಾಡಬೇಕೆನ್ನುವ ಅದಮ್ಯ ಆಸೆಯನ್ನು ಹೊಂದಿದ್ದೇನೆ ಎಂದರು.
ಜವಾಬ್ದಾರಿ ಹೆಚ್ಚಿದೆ: ಈ ಹಿಂದೆ ನಡೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಸೋಲುವ ಮೂಲಕ ಸಾಕಷ್ಟು ಅನುಭವ ಹೊಂದಿದ್ದೇನೆ. ಈ ಬಾರಿಯ ಗೆಲವು ನನಗೆ ಅತೀವ ಸಂತಸದ ಜತೆಗೆ ಜವಾಬ್ದಾರಿ ಹೆಚ್ಚಿಸಿದೆ. ತಮ್ಮ ಗೆಲುವಿಗೆ ಸಹಕರಿಸಿದ ಪಕ್ಷದ ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ಕ್ಷೇತ್ರದ ಸಮಸ್ತ ಮತದಾರರಿಗೆ ಇದೇ ಸಂದರ್ಭ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಭಾರಿ ಅಧ್ಯಕ್ಷ ಎಸ್.ಸಿ. ಶಿಡೇನೂರ, ತಾಲೂಕು ಘಟಕದ ಅಧ್ಯಕ್ಷ ಹುಸೇನ್ ಸಾಬ್ ದೊಡ್ಮನಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಸುರೇಶಗೌಡ ಪಾಟೀಲ, ಕೆಪಿಸಿಸಿ ಸದಸ್ಯ ಬಸವರಾಜ ಸವಣೂರು, ಮುಖಂಡರಾದ ಎಸ್.ಆರ್. ಪಾಟೀಲ, ಉಮೇಶ ಬೆಟಗೇರಿ, ದಾನಪ್ಪ ಚೂರಿ, ವೀರಣ್ಣ ಬಳ್ಳಾರಿ, ಎಸ್.ಎಸ್. ಬೆಲ್ಲದ ಲಿಂಗಪ್ಪ ಕೊಂಬಳಿ, ಕಾರ್ಯದರ್ಶಿ ರಮೇಶ ಸುತ್ತಕೋಟಿ, ರುದ್ರಣ್ಣ ಹೊಂಕಣದ, ನಿಸಾರ್ ಅಹ್ಮದ್ ಹಾವನೂರ, ರೇಖಾ ದೊಡ್ಡಮನಿ, ಲಿಂಗನಗೌಡ, ಹುಚ್ಚನಗೌಡ್ರ, ಚಂದ್ರಪ್ಪ ಲಮಾಣಿ, ಮಂಜನಗೌಡ ಹುಚ್ಚನಗೌಡ್ರ, ಮಾರುತಿ ಅಚ್ಚಿಗೇರಿ, ಪರಮೇಶ್ವರ ಶಿವಣ್ಣನವರ ಪಾಲ್ಗೊಂಡಿದ್ದರು.
ಹನುಮಂತ ಲಮಾಣಿ ಸ್ವಾಗತಿಸಿದರು. ಎನ್.ಎಂ. ಹುಬ್ಬಳ್ಳಿ ನಿರೂಪಿಸಿದರು. ಕೇಶವ ಕಿತ್ತೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.