ಅನಾರೋಗ್ಯಕ್ಕೀಡಾದ ಹಾನಗಲ್ ಆಸ್ಪತ್ರೆ
ಹಾನಗಲ್ಲ: ದಿನಕ್ಕೆ ಆರು ನೂರು ಹೊರ ರೋಗಿಗಳು, ತಿಂಗಳಿಗೆ 150 ಹೆರಿಗೆ, ಅಂದಾಜು 50 ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ, ಇತರೆ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಕನಿಷ್ಠ 11ರಿಂದ 15 ವೈದ್ಯರಾದರು ಬೇಕು. ಆದರೆ, ಇಲ್ಲಿ ಆಸ್ಪತ್ರೆಯ ಆರೋಗ್ಯ ಕಾಪಾಡಲು ಹೆಣಗಾಡುತ್ತಿರುವ ತಾಲೂಕು ವೈದ್ಯಾಧಿಕಾರಿ ಡಾ ನಾಗರಾಜ ಕುರಿ ಒತ್ತಡಗಳನ್ನೂ ಸಹಿಸಿಕೊಂಡು ಸಾವು ಬದುಕಿನ ನಡುವೆ ಆರೋಗ್ಯಕ್ಕಾಗಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಕಾಪಾಡುವ ಸಂಕಲ್ಪ ಯಾತ್ರೆ ಯಶಸ್ವಿಯಾಗಿಯೇ ನಡೆದಿರುವುದು ಒಂದು ಪವಾಡವೇ ಸರಿ.
ಸಿಬ್ಬಂದಿ ಕೊರತೆ: ಹಾನಗಲ್ಲ ತಾಲೂಕಿನಲ್ಲಿ 14 ಸರ್ಕಾರಿ ಆಸ್ಪತ್ರೆಗಳಿವೆ. ಹಾನಗಲ್ಲಿನಲ್ಲಿ ತಾಲೂಕು ಆರೋಗ್ಯ ಘಟಕ, ಉಳಿದಂತೆ ಅಕ್ಕಿಆಲೂರು, ಶೇಷಗಿರಿ, ತಿಳವಳ್ಳಿ, ಬೊಮ್ಮನಹಳ್ಳಿ, ಚಿಕ್ಕಾಂಸಿ ಹೊಸೂರು, ಶಿರಗೋಡ, ಶಾಡಗುಪ್ಪಿ, ನರೆಗಲ್ಲ, ಬೆಳಗಾಲಪೇಟೆ, ಕೂಸನೂರು, ಬೈಚವಳ್ಳಿ, ಅರಳೇಶ್ವರ, ಕೊಪ್ಪರಸಿಕೊಪ್ಪ, ಆಡೂರು ಗ್ರಾಮಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿವೆ. ಇಷ್ಟಾಗಿಯೂ ಹಾನಗಲ್ಲಿನ ಸರಕಾರಿ ಆಸ್ಪತ್ರೆಯ ಸ್ಥಿತಿ ಮಾತ್ರ ನಿರ್ವಹಿಸಲಸಾಧ್ಯವಾದ ಹೊರ-ಒಳ ರೋಗಿಗಳಿಂದ ತುಂಬಿ ಹೋಗುತ್ತಿದ್ದು, ವೈದ್ಯರಿಲ್ಲದ ಅವ್ಯವಸ್ಥೆಯಲ್ಲಿ ಆರೋಗ್ಯ ವ್ಯವಸ್ಥೆಯೇ ನರಳುವಂತಾಗಿದೆ.
15 ವೈದ್ಯರ ಕಾರ್ಯ ಒಬ್ಬರಿಗೆ: ಪ್ರತಿದಿನ ಕನಿಷ್ಠ 6 ನೂರಕ್ಕೂ ಅಧಿಕ ಹೊರ ರೋಗಿಗಳು ತಪಾಸಣೆ ಆಗಬೇಕು. ಹತ್ತು ಹದಿನೈದು ವೈದ್ಯರು ನಿರ್ವಹಿಸಬೇಕಾದ ಕಾರ್ಯವನ್ನು ಒಬ್ಬರೇ ವೈದ್ಯರು ಎಷ್ಟರ ಮಟ್ಟಿಗೆ ಈ ಒತ್ತಡ ಸಹಿಸಿಕೊಂಡು ಆಸ್ಪತ್ರೆಯ ರೋಗಿಗಳ ಹಾಗೂ ತಮ್ಮ ಆರೋಗ್ಯ ಸರಿಯಾಗಿಡಬಲ್ಲರು ಎಂಬುದು ಇಲ್ಲಿ ಯಕ್ಷಪ್ರಶ್ನೆಯಾಗಿ ಉಳಿದಿದೆ.
ಕೆಲವೇ ವೈದ್ಯರು: 11 ವೈದ್ಯರು ಕಾರ್ಯನಿರ್ವಹಿಸಬೇಕಾದ ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರ ರೋಗಿಗಳನ್ನು ಪರೀಕ್ಷಿಸುವವರು ಹೌದು, ಕಚೇರಿ ಕೆಲಸಗಳಿಗೂ ತಲೆ ಹಾಕಬೇಕು. ಇವರ ಸಹಾಯಕ್ಕೆಂದು ತಾತ್ಕಾಲಿಕವಾಗಿ ಡಾ ಎಸ್.ವೈ. ಹಾದಿಮನಿ (ಆಯುಷ್ ವೈದ್ಯರು), ಶಿರಗೋಡ ಆಸ್ಪತ್ರೆಯಿಂದ ಡಾ ರವಿಂದ್ರಗೌಡ ಪಾಟೀಲ ತಾತ್ಕಾಲಿಕವಾಗಿ ಡಾ ನಾಗರಾಜ ಕುರಿಯವರಿಗೆ ಸಹಾಯಕವಾಗಿರುವುದು ಬಿಟ್ಟರೆ ಇಡೀ ಆಸ್ಪತ್ರೆಯ ಎಲ್ಲ ಒತ್ತಡ ಹೊರಬೇಕಾಗಿರುವುದು ಒಬ್ಬರಿಂದಲೇ ಸಾಧ್ಯವಾಗಿರುವುದೇ ಒಂದು ಪವಾಡ. ದಂತ ವೈದ್ಯರಾದ ಡಾ ನಾಶಿಪುಡಿ ತಮ್ಮ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ.
ನಿಸ್ವಾರ್ಥ ಜೀವಿ: ಇಲ್ಲಿ ಹೆರಿಗೆ ತಜ್ಞರು, ಮಕ್ಕಳ ತಜ್ಞರು, ಎಲುವು ಕೀಲು ತಜ್ಞರು, ಸರ್ಜನ್ ವೈದ್ಯರು, ಹೃದಯರೋಗ ತಜ್ಞರು, ಅನೆಸ್ತೇಸಿಯ ತಜ್ಞರು, ಕಿವಿ-ಮೂಗು-ಗಂಟಲು ತಜ್ಞರು, ನೇತ್ರ ತಜ್ಞರು ಅತ್ಯವಶ್ಯವಾಗಿ ಬೇಕೆ ಬೇಕು. ದಂತ ವೈದ್ಯರನ್ನು ಹೊರತುಪಡಿಸಿ ಬೇರೆ ಯಾವ ತಜ್ಞ ವೈದ್ಯರೂ ಇಲ್ಲಿಲ್ಲ. ಎಲ್ಲ ಕಾರ್ಯವನ್ನು ಡಾ ನಾಗರಾಜ ಕುರಿಯವರೆ ನಿಭಾಯಿಸುತ್ತಿರುವುದು ಇಲ್ಲಿನ ಸತ್ಯ ಸಂಗತಿ. ಒಬ್ಬ ವೈದ್ಯರು ಹೆಚ್ಚೆಂದರೆ ಎಷ್ಟು ಸಮಯ ಕಾರ್ಯ ನಿರ್ವಹಿಸಬಲ್ಲರು ಎಂಬುದಕ್ಕೆ ಈ ವೈದ್ಯರೆ ಒಂದು ಉದಾಹರಣೆ ಎಂಬುದರಲ್ಲಿ ಬೇರೆ ಮಾತಿಲ್ಲ.
ರಜೆ ಅಪರೂಪ: ಇಷ್ಟೆಲ್ಲ ಒತ್ತಡಗಳ ನಡುವೆ ಒಂದಷ್ಟೂ ನಿಷ್ಕಾಳಜಿ ತೋರದೆ ವೈದ್ಯರು ಕೆಲಸ ಮಾಡುತ್ತಿರುವಾಗಲೂ, ಇದನ್ನೆಲ್ಲ ಅರಿಯದೇ ಕೆಲವರು ವೈದ್ಯರ ಮೇಲೆ ಆಕ್ರಮಣ ಮಾಡಿದ ಸಂದರ್ಭಗಳೂ ಇವೆ. ಇದಕ್ಕಾಗಿ ದೂರು ಸಲ್ಲಿಸಿದ್ದಕ್ಕೆ ಪರಿತಪಿಸುತ್ತಿರುವ ಸಂದರ್ಭಗಳೂ ಇವೆ. ಅಚ್ಚರಿಯ ಸಂಗತಿ ಎಂದರೆ ಇಲ್ಲಿನ ತಾಲೂಕು ವೈದ್ಯಾಧಿಕಾರಿಗಳು ಆದ ಡಾ ಕುರಿಯವರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಒಂದು ರಜೆ ಹಾಕುವುದು ದುಸ್ಥರವಾಗಿದೆ.
ಸಮಸ್ಯೆ ಉಲ್ಬಣ: ಹಗಲು ರಾತ್ರಿ ಬಿಡುವಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ವೈದ್ಯಕೀಯ ಇಲಾಖೆ ಏಕೆ ಸಹಕರಿಸುತ್ತಿಲ್ಲ. ಹಾನಗಲ್ಲ ತಾಲೂಕು ಮಟ್ಟದ ಆಸ್ಪತ್ರೆಯನ್ನು ಈ ಪರಿ ನಿರ್ಲಕ್ಷಿಸಿದ್ದೇಕೆ ಎಂಬ ಪ್ರಶ್ನೆಗಳಿಗೆ ಉತ್ತರಗೆಲ್ಲ ಅಸಹಾಕಯವಾದವುಗಳೇ ಅಗಿವೆ. ಕಳೆದ ಏಳೆಂಟು ತಿಂಗಳುಗಳಿಂದ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಿರುವುದು ಭಾರೀ ತಲೆನೋವಾಗಿದೆ.
ಮೂವರು ಮಾತ್ರ: ಇಲ್ಲಿರಲು ನಾನು ಒಲ್ಲೆ, ನನ್ನನ್ನು ಬೇರೆ ಕಡೆ ವರ್ಗಾವಣೆ ಮಾಡಿಬಿಡಿ ಎಂದು ಇರುವ ಒಬ್ಬ ವೈದ್ಯರೂ ದುಂಬಾಲು ಬಿದ್ದಿದ್ದಾರೆ. ಹಾಗೇನಾದರೂ ಆದರೆ, ಆಸ್ಪತ್ರೆಯನ್ನು ದೇವರೆ ಕಾಪಾಡಬೇಕು. ಇಲ್ಲಿನ ಇಲ್ಲಗಳ ಪಟ್ಟಿ ಬೆಳೆಯುತ್ತಲೇ ಇದೆ. ಅಂದಾಜು 30ರಷ್ಟಿರಬೇಕಾದ ಸ್ಟಾಫ್ ನರ್ಸ್ ಪೈಕಿ ಇದ್ದವರು ಕೇವಲ 12, ಡಿ ದರ್ಜೆ ನೌಕರರು ಇರಬೇಕಾದ್ದು 35, ಇರುವವರು 3 ಮಾತ್ರ. ಉಳಿದಂತೆ ಇಲ್ಲಿ ಯಾವುದು ಕೂಡ ಅಗತ್ಯಕ್ಕೆ ತಕ್ಕಂತೆ ಇಲ್ಲವೆ ಇಲ್ಲ ಎಂಬುದು ಇಲ್ಲಿನವರ ಅಳಲು. ಇದರ ನಡುವೆ ಜನಪ್ರತಿನಿಧಿಗಳ ದೂರವಾಣಿ ಕರೆಗಳು, ಅನಗತ್ಯ ಒತ್ತಡಗಳ ನಡುವೆ ಆಸ್ಪತ್ರೆ ಈಗ ತಂತಿ ಮೇಲಿನ ನಡಿಗೆಯಂತಾಗಿದೆ. ಇದಕ್ಕೊಂದು ಸರಿಯಾದ ಚಿಕಿತ್ಸೆ ಬೇಕಾಗಿದೆ. ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ ಇಲ್ಲಿ ಕೆಲಸ ಮಾಡುವಂತಾಗಬೇಕು. ವೈದ್ಯರ ನೆಮ್ಮದಿ ಉಳಿದು ರೋಗಿಗಳು ಗುಣಮುಖವಾಗಬೇಕು. ಆಸ್ಪತ್ರೆಯನ್ನು ನೂರು ಹಾಸಿಗೆ ಮೇಲ್ದರ್ಜೆಗೇರಿಸಿ ರು. 10 ಕೋಟಿ ಮೊತ್ತದ ಕೆಲಸ ಆರಂಭವಾಗಿದೆ. ಪಕ್ಕದ ಸರ್ಕಾರಿ ಕಟ್ಟಡಕ್ಕೆ ಆಸ್ಪತ್ರೆ ಸ್ಥಳಾಂತರಿಸಲಾಗಿದೆ. ಆಸ್ಪತ್ರೆ ಸರಿ ಮಾಡಲು ಒಂದು ಸಂಕಲ್ಪವೇ ಬೇಕು. ಇದಕ್ಕಾಗಿ ನೂತನ ಶಾಸಕ ಮನೋಹರ ತಹಸೀಲ್ದಾರ್, ಡಾ ನಾಗರಾಜ ಕುರಿಯವರನ್ನು ಕರೆದು ಹಾನಗಲ್ಲ ತಾಲೂಕು ಆಸ್ಪತ್ರೆಯ ಸಮಸ್ಯೆಗೆ ಪರಿಹಾರ ಒದಗಿಸಲ್ಲಿದ್ದಾರೆ. ಆದರೆ, ತಾಲೂಕು ಕೇಂದ್ರಗಳಿಗೆ ವೈದ್ಯರೇ ಬರಲು ನಿರಾಕರಿಸುವಂತಾದರೆ ಯಾರು ಈ ಸಮಸ್ಯೆ ಪರಿಹರಿಸಲು ಸಾಧ್ಯ ಎಂಬುದೇ ಯಕ್ಷಪ್ರಶ್ನೆ.
ಇನ್ನು ಒಂದೇ ವರ್ಷದ ಅವಧಿಯಲ್ಲಿ ರು. 10 ಕೋಟಿ ವೆಚ್ಚದಲ್ಲಿ ಆರಂಭವಾದ ನೂರು ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ತಾಲೂಕಿನ ಆರೋಗ್ಯಕ್ಕಾಗಿ ಸಜ್ಜಾಗುತ್ತದೆ. ಆದರೆ, ವೈದರು ಬೇಕಲ್ಲ ಎಂಬುದೆ ಮತ್ತೆ ಆಗಿನ ಪ್ರಶ್ನೆಯಾಗಬಾರದಷ್ಟೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

