ವೈದ್ಯ ಕಾಲೇಜು ಸ್ಥಾಪನೆಗೆ ಒತ್ತಡ
ಕನ್ನಡಪ್ರಭ ವಾರ್ತೆ, ಹಾವೇರಿ, ನ. 1
ಹಾವೇರಿ ಜಿಲ್ಲೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಸಣ್ಣ ಕೈಗಾರಿಕೆ, ಮುಜರಾಯಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಭರವಸೆ ನೀಡಿದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಡಳಿತ ಶುಕ್ರವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಅವರು, ಮುಂದಿನ ವರ್ಷ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತಾಗಲು ಜಿಲ್ಲಾಡಳಿತಕ್ಕೆ ರು. 50 ಲಕ್ಷ ಅನುದಾನ ಒದಗಿಸಲಾಗುವುದು. ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನವಿರಿಸಿ ಕನ್ನಡ ಸಂಸ್ಕೃತಿ ಹಾಗೂ ಪರಂಪರೆಯ ಏಳಿಗೆಗೆ ನಮ್ಮ ಕಾಣಿಕೆ ಸಲ್ಲಿಸಬೇಕು ಎಂದರು.
ಅಖಂಡ ಕರ್ನಾಟಕವನ್ನು ಒಂದಾಗಿ ಮುನ್ನಡೆಸುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ. ಯುವಕರು ಓದಿನ ಜತೆಗೆ ಕನ್ನಡ ಸಾಹಿತ್ಯ-ಸಂಸ್ಕೃತಿಯ ಬಗ್ಗೆ ಆಸಕ್ತಿ ತಾಳಿ ಎಲ್ಲಿದ್ದರೂ ನಾನು ಕನ್ನಡಿಗ ಎಂಬ ಅಭಿಮಾನ ಹೊಂದಬೇಕು. ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಹಾವೇರಿಯ ಹೊಸಮನಿ ಸಿದ್ದಪ್ಪ, ಟಿ.ಆರ್. ನೇಸ್ವಿ, ವೀರನಗೌಡ ಪಾಟೀಲ್, ಕೆ.ಎಫ್. ಪಾಟೀಲ್, ಹಳ್ಳಿಕೇರಿ ಗುದ್ಲೆಪ್ಪ, ಪಂಚಾಕ್ಷರಪ್ಪ ಒಳಸಂಗದ, ಪಾಟೀಲ ಪುಟ್ಟಪ್ಪ, ಮಹದೇವ ಬಣಕಾರ, ಎಚ್.ಆರ್. ಇಟಗಿ, ವಿರೂಪಾಕ್ಷಪ್ಪ ಅಂಗಡಿ, ಬಸಯ್ಯ ಹಿರೇಮಠ, ಜಯಣ್ಣ ಚೌಶೆಟ್ಟಿ, ಮುರುಗಯ್ಯ ನಂದಿಮಠ, ಕೃಷ್ಣಾಜಿ ಚವ್ಹಾಣ, ರುದ್ರಪ್ಪ ಜಾಬೀನ್, ವೀರಭದ್ರಪ್ಪ ಹಾವನೂರ ಅವರನ್ನು ಎಲ್ಲರೂ ನೆನಪಿಸಿಕೊಳ್ಳಬೇಕೆಂದರು.
ನಗರೋತ್ಥಾನ ಯೋಜನೆಯಡಿ ಪಟ್ಟಣಗಳ ಅಭಿವೃದ್ಧಿಗೆ 8 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು ರು. 75 ಕೋಟಿ ಅನುದಾನ ನಿಗದಿಗೊಳಿಸಲಾಗಿದೆ. ಮಂಜೂರಾದ ಕ್ರಿಯಾಯೋಜನೆ ಅನ್ವಯ ರು. 65.10 ಕೋಟಿಯ ಕಾಮಗಾರಿ ಆರಂಭಗೊಂಡಿದೆ. ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ರು. 55 ಕೋಟಿ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 580 ಕಾಮಗಾರಿ ಕೈಗೊಳ್ಳಲಾಗಿದೆ. ತುರ್ತು ಕುಡಿಯುವ ನೀರು ಒದಗಿಸಲು ರು. 1 ಕೋಟಿ ವೆಚ್ಚದಲ್ಲಿ 128 ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದೂ ಸಚಿವ ಹುಕ್ಕೇರಿ ವಿವರಿಸಿದರು.
ಧ್ವಜಾರೋಹಣಕ್ಕೂ ಪೂರ್ವದಲ್ಲಿ ಮೈಲಾರ ಮಹದೇವಪ್ಪ ವೃತ್ತದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಟ್ಯಾಬ್ಲೋಗಳ ಆಕರ್ಷಕ ಮೆರವಣಿಗೆ ನಡೆಯಿತು. ಪಥಸಂಚಲನ ಗಮನ ಸೆಳೆಯಿತು. ಶಾಸಕ ರುದ್ರಪ್ಪ ಲಮಾಣಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷ ಶೋಭಾ ನಿಸ್ಸೀಮಗೌಡ, ನಗರಸಭೆ ಅಧ್ಯಕ್ಷ ಐ.ಯು. ಪಠಾಣ, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ್, ಜಿಪಂ ಸಿಇಒ ಉಮೇಶ ಕುಸುಗಲ್ಲ, ಎಸ್ಪಿ ಶಶಿಕುಮಾರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

