ಸಂಗೀತ ಹೃದಯದ ಭಾಷೆ: ಸದಾಶಿವ ಶ್ರೀ
ಕನ್ನಡಪ್ರಭ ವಾರ್ತೆ, ಹಾವೇರಿ, ನ. 7
ಪ್ರತಿ ಜೀವಿಗೂ ಸುಲಭವಾಗಿ ಅರ್ಥವಾಗುವ, ಮನಸಾರೆ ಮೆಚ್ಚಿ, ಹೃದಯಪೂರ್ವಕವಾಗಿ ಆಸ್ವಾದಿಸುವ ಭಾಷೆ ಎಂದರೆ ಸಂಗೀತ ಮಾತ್ರ ಎಂದು ನಗರದ ಹುಕ್ಕೇರಿ ಮಠದ ಸದಾಶಿವ ಸ್ವಾಮಿಗಳು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕನ್ನಡ ರಾಜ್ಯೋತ್ಸವದ ಅಂಗವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಗುರುಭವನದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಕಲಾ ಸೌರಭ ಅಹೋರಾತ್ರಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅವರು, ವಿವಿಧ ಭಾಷೆ ಅರ್ಥಮಾಡಿಕೊಳ್ಳುವ, ಬರೆಯುವ ಹಾಗೂ ಮಾತನಾಡುವ ಸಾಮರ್ಥ್ಯ ಮಾನವನಿಗಿದೆ. ಸಂಗೀತದ ಭಾಷೆ ಎಲ್ಲರಿಗೂ ಅರ್ಥವಾಗುತ್ತದೆ. ಆದರೆ, ಪ್ರಾಣಿ, ಪಕ್ಷಿ ಹಾಗೂ ಸಸ್ಯಗಳೂ ಸಂಗೀತವನ್ನು ಅರಿಯುವ, ಅದರ ಮಾಧುರ್ಯ ಆಸ್ವಾದಿಸುವ ಸಾಮರ್ಥ್ಯ ಹೊಂದಿವೆ. ಸಸ್ಯಗಳಿಗೆ ಸಂಗೀತ ಕೇಳಿಸಿದರೆ ಅವು ಹೆಚ್ಚು ಫಸಲು ನೀಡುತ್ತವೆ ಎಂಬುದನ್ನು ಜಪಾನ್ ವಿಜ್ಞಾನಿಗಳು ಸಂಶೋಧನೆಯಿಂದ ದೃಢಪಡಿಸಿದ್ದಾರೆ. ನಮ್ಮ ದೇಶದಲ್ಲೂ ಕೆಲವು ಪ್ರಗತಿಪರ ರೈತರು ಈ ಪ್ರಯೋಗ ಮಾಡಿದ್ದಾರೆ ಎಂದರು.
ಮೈ-ಮನ ತಣಿಸುತ್ತದೆ
ಪಾಪ್ ಸಂಗೀತ ಮೈ ಕುಣಿಸಿದರೆ, ಭಾರತೀಯ ಶಾಸ್ತ್ರೀಯ ಸಂಗೀತ ಮೈ-ಮನಗಳನ್ನು ತಣಿಸುತ್ತದೆ. ಸಂಗೀತಗಾರರು ಮನುಷ್ಯನಲ್ಲಿ ಭಾವನೆಗಳನ್ನು ತುಂಬಲು ಹಾಡಬೇಕೇ ಹೊರತು ಸಂಭಾವನೆ ತುಂಬಿಸಿಕೊಳ್ಳಲು ಅಲ್ಲ. ರಾಗಗಳಿಗೆ ಎಲ್ಲ ರೋಗಗಳನ್ನು ನಿವಾರಿಸುವ ಶಕ್ತಿಯಿದೆ ಎಂದರು.
ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ ಕಾರ್ಯಕ್ರಮ ಉದ್ಘಾಟಿಸಿ, ಆಧುನಿಕ ಪ್ರಪಂಚದಲ್ಲಿ ಕೆಲಸದ ಒತ್ತಡದಿಂದ ಹೊರಬರಲು ಸಂಗೀತ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಸಂಗೀತ ಆಲಿಸುವುದರಿಂದ ದಣಿದ ಮನಸ್ಸು ಹಗುರಾಗುತ್ತದೆ. ಆಯಾಸಗೊಂಡ ದೇಹ ಹೊಸ ಚೈತನ್ಯ ಪಡೆಯುತ್ತದೆ. ಮತ್ತೆ ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಮಕ್ಕಳೂ ಕಲಿಯಲಿ
ಪೋಷಕರು ತಮ್ಮ ಮಕ್ಕಳು ಸಂಗೀತ ಕಲಿಯುವುದನ್ನು ಪ್ರೋತ್ಸಾಹಿಸಬೇಕು. ಇನ್ನೊಬ್ಬರ ಆಸಕ್ತಿ ಗೌರವಿಸುವುದು ನಮ್ಮ ಕರ್ತವ್ಯ. ಸಂಗೀತ ಒಲಿಸಿಕೊಳ್ಳಲು ಸಾಧಕರು ನಿರಂತರ ಸಾಧನೆ ಮಾಡಿರುತ್ತಾರೆ. ಅದರ ಮೂಲಕವೇ ಅವರು ಎಲ್ಲ ನೋವುಗಳನ್ನು ಮರೆಯುತ್ತಾರೆ. ಸಮಾಜದ ನೋವುಗಳನ್ನೂ ಮರೆಸುತ್ತಾರೆ ಎಂದು ಬಣ್ಣಿಸಿದರು.
ಸಮ್ಮುಖ ವಹಿಸಿದ್ದ ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸಂಗೀತಕ್ಕೆ ಔಷಧೀಯ ಗುಣವಿದೆ. ಸಂಗೀತಕ್ಕೆ ತಲೆ ಬಾಗದವರು ಪಶು ಪಕ್ಷಿಗಳಿಗೂ ಕಡೆ ಎಂಬ ಮಾತಿದೆ. ಎಲ್ಲ ಸಂಗೀತ ಪ್ರಕಾರಗಳೂ ಮನಸ್ಸನ್ನು ಅರಳಿಸುತ್ತವೆ ಎಂದರು.
ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಸಂಗೀತಕ್ಕೆ ರೋಗ ನಿರೋಧಕ ಶಕ್ತಿ ಇರುವುದು ಪ್ರಯೋಗಗಳಿಂದ ಸಾಬೀತಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಿಂಗಪ್ಪ ಚಾವಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಹನಾಯಿ ವಾದಕ ಬಸವರಾಜ ಹೆಡಿಗೊಂಡ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ರಾತ್ರಿಯಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರತಿ ಜೀವಿಗೂ ಸುಲಭವಾಗಿ ಅರ್ಥವಾಗುವ, ಮನಸಾರೆ ಮೆಚ್ಚಿ, ಹೃದಯಪೂರ್ವಕವಾಗಿ ಆಸ್ವಾದಿಸುವ ಭಾಷೆ ಎಂದರೆ ಸಂಗೀತ ಮಾತ್ರ. ಸಂಗೀತದ ಭಾಷೆ ಎಲ್ಲರಿಗೂ ಅರ್ಥವಾಗುತ್ತದೆ. ಆದರೆ, ಪ್ರಾಣಿ, ಪಕ್ಷಿ ಹಾಗೂ ಸಸ್ಯಗಳೂ ಸಂಗೀತವನ್ನು ಅರಿಯುವ, ಅದರ ಮಾಧುರ್ಯ ಆಸ್ವಾದಿಸುವ ಸಾಮರ್ಥ್ಯ ಹೊಂದಿವೆ. ಸಸ್ಯಗಳಿಗೆ ಸಂಗೀತ ಕೇಳಿಸಿದರೆ ಅವು ಹೆಚ್ಚು ಫಸಲು ನೀಡುತ್ತವೆ ಎಂಬುದನ್ನು ಜಪಾನ್ ವಿಜ್ಞಾನಿಗಳು ಸಂಶೋಧನೆಯಿಂದ ದೃಢಪಡಿಸಿದ್ದಾರೆ. ನಮ್ಮ ದೇಶದಲ್ಲೂ ಕೆಲವು ಪ್ರಗತಿಪರ ರೈತರು ಈ ಪ್ರಯೋಗ ಮಾಡಿದ್ದಾರೆ. ಪಾಪ್ ಸಂಗೀತ ಮೈ ಕುಣಿಸಿದರೆ, ಭಾರತೀಯ ಶಾಸ್ತ್ರೀಯ ಸಂಗೀತ ಮೈ-ಮನಗಳನ್ನು ತಣಿಸುತ್ತದೆ.
- ಸದಾಶಿವ ಶ್ರೀ, ಹುಕ್ಕೇರಿಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

