ಹಾವೇರಿ

ಶಾದಿಭಾಗ್ಯ ಎಲ್ಲರಿಗೂ ವಿಸ್ತರಿಸಿ: ಜಿ. ಶಿವಣ್ಣ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ನ. 8
ಅಲ್ಪಸಂಖ್ಯಾತ ಮುಸ್ಲಿಂ ಹೆಣ್ಣುಮಕ್ಕಳ ವಿವಾಹಕ್ಕೆ ಆರ್ಥಿಕ ನೆರವು ಒದಗಿಸುವ ಶಾದಿಭಾಗ್ಯ ಯೋಜನೆ ಮತ ಬ್ಯಾಂಕಿಗಾಗಿ ಕಾಂಗ್ರೆಸ್ ಮಾಡಿರುವ ಕೀಳು ಮಟ್ಟದ ಗಿಮಿಕ್. ಯೋಜನೆಯನ್ನು ಎಲ್ಲ ವರ್ಗಗಳ ಬಡವರಿಗೂ ವಿಸ್ತರಿಸಬೇಕು ಎಂದು ಮಾಜಿ ಶಾಸಕ, ಕೆಜೆಪಿ ಮುಖಂಡ ಜಿ. ಶಿವಣ್ಣ ಆಗ್ರಹಿಸಿದರು.
ನಗರದ ರೇಲ್ವೆ ನಿಲ್ದಾಣ ರಸ್ತೆಯಲ್ಲಿರುವ ಕೆಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 40 ವರ್ಷಗಳಲ್ಲಿ ಎಂದೂ ಅಲ್ಪಸಂಖ್ಯಾತರ ಬಗ್ಗೆ ಕಳಕಳಿ ತೋರಿಸದ ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮುಸ್ಲಿಮರ ಮತ ಗಳಿಸಲು ಇಂಥ ತಂತ್ರ ಅನುಸರಿಸಿದೆ ಎಂದು ಆರೋಪಿಸಿದರು.
ರಾಜ್ಯಾದ್ಯಂತ 50 ಸಾವಿರಕ್ಕೂ ಅಧಿಕ ಅಲ್ಪಸಂಖ್ಯಾತರು ಈ ಯೋಜನೆ ಅಡಿ ಬರಲಿದ್ದು, ಈ ಪೈಕಿ ಕೆಲವರಿಗಷ್ಟೇ ಯೋಜನೆಯ ಲಾಭ ತಲುಪುತ್ತದೆ. ಇದರಿಂದ ಮಧ್ಯವರ್ತಿಗಳ ಹಾವಳಿ ಹಾಗೂ ಭ್ರಷ್ಟಾಚಾರ ಹೆಚ್ಚಾಗಿ, ನೈಜ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪುವುದು ಅನುಮಾನ. ಯೋಜನೆಯ ಅನುಷ್ಠಾನಕ್ಕಾಗಿ ಗುರುತಿಸಿರುವ ಅಧಿಕಾರಿಗಳಿಗೆ ಅದರ ಬಗ್ಗೆ ಮಾಹಿತಿ ಅಥವಾ ಮಾರ್ಗದರ್ಶಿ ಸೂತ್ರಗಳು ತಲುಪಿಲ್ಲ ಎಂದು ಆರೋಪಿಸಿದರು.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಾಜ್ಯದ ಎಲ್ಲ ಬಡ ಹೆಣ್ಣು ಮಕ್ಕಳಿಗೂ ಸಾಮೂಹಿಕ ವಿವಾಹದಲ್ಲಿ ಮದುವೆಯಾದರೆ ರು. 10 ಸಾವಿರ ನೀಡಲು ಜಾರಿಗೆ ತಂದಿದ್ದ ತಾಳಿಭಾಗ್ಯ ಯೋಜನೆ ಶ್ರೇಷ್ಠವಾಗಿತ್ತು. 'ಶಾದಿಭಾಗ್ಯ' ಮುಸ್ಲಿಮರಿಗೆ ಸೀಮಿತವಾಗಿದ್ದು, ಕೋಮು ಸಾಮರಸ್ಯ ಕದಡುವ ಸಾಧ್ಯತೆ ಇದೆ. ಸದರಿ ಯೋಜನೆಯನ್ನು ವಿಸ್ತರಿಸಿ, ರಾಜ್ಯದ ಎಲ್ಲ ಬಡ ಹೆಣ್ಣು ಮಕ್ಕಳಿಗೂ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
11ರಂದು ಪ್ರತಿಭಟನೆ: ಕೆಜೆಪಿ ಜಿಲ್ಲಾಧ್ಯಕ್ಷ ಮೈಲಪ್ಪ ಗುಡಗೂರು ಮಾತನಾಡಿ, ಹೆಣ್ಣುಮಕ್ಕಳ ಅಭ್ಯುದಯಕ್ಕಾಗಿ ಯಡಿಯೂರಪ್ಪ ತಾಳಿಭಾಗ್ಯ, ಭಾಗ್ಯಲಕ್ಷ್ಮಿ ಮುಂತಾದ ಯೋಜನೆಗಳನ್ನು ಜಾರಿಗೆ ತಂದರು. ಶಾದಿಭಾಗ್ಯ ಯೋಜನೆಯನ್ನು ಎಲ್ಲ ವರ್ಗದವರಿಗೂ ವಿಸ್ತರಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಯಡಿಯೂರಪ್ಪ ಹಾಗೂ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಆರಂಭವಾಗಿದೆ. ನ. 11ರಂದು ಹಾವೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ನ. 16ರಂದು ಬೆಂಗಳೂರಿಗೆ ತೆರಳಿ ಯಡಿಯೂರಪ್ಪ ಅವರನ್ನು ಬೆಂಬಲಿಸಲಾಗುವುದು. 24ರಂದು ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆಗೂ ಸಿದ್ಧತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಕೆಜೆಪಿ ತಾಲೂಕು ಕಾರ್ಯದರ್ಶಿ ಕೆ.ವಿ. ಶ್ರೀನಿವಾಸ, ಮುಖಂಡರಾದ ಚೋಳಪ್ಪ ಕಸವಾಳ, ನೀಲಪ್ಪ ದೇವರಗುಡ್ಡ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಶ್ವನಾಥ ಪಾಟೀಲ, ವಿಷ್ಣು ಜಿಂಗಾಡೆ,ನಗರಸಭಾ ಸದಸ್ಯ ನಿಂಗನಗೌಡ ಪಾಟೀಲ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.