ಸಂಚಾರ ಕಿರಿಕ್ ಸದ್ಯದಲ್ಲೇ ಬ್ರೇಕ್
ಹಾನಗಲ್ಲ: ಫುಟ್ಪಾತ್ ಅಂಗಡಿ ತೆರವಿಗೆ ಕ್ರಮ, ರಸ್ತೆ ಸರಕ್ಷತೆಗೆ ಆದ್ಯತೆ, ರಿಕ್ಷಾ-ಟೆಂಪೋ ನಿಲ್ದಾಣಕ್ಕೆ ಹೊಸ ಸೂತ್ರ, ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಹಾಗೂ ಪೊಲೀಸ್ ಕಾವಲಿಗೆ ಕ್ರಮ, ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಹಾನಗಲ್ಲ ನಗರದ ರಸ್ತೆಗಳಲ್ಲಿ ಆಗುವ ತೊಂದರೆಗಳಿಗೆ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಸ್ವಚ್ಛ ಸುಂದರ ನಗರವನ್ನಾಗಿಸಲು ಈಗಾಗಲೇ ಕಂದಾಯ ಹಾಗೂ ಪೊಲೀಸ್ ಇಲಾಖೆಗಳ ಮೂಲಕ ಕಾರ್ಯಾಚರಣೆ ಆರಂಭವಾಗಿದ್ದು, ಪುರಸಭೆಯೂ ಇದಕ್ಕೆ ಕೈ ಜೋಡಿಸಬೇಕಿದೆ.
ಅಂಗಡಿಗಳ ತೆರವು ಖಚಿತ: ಹಾನಗಲ್ಲ ನಗರದಲ್ಲಿನ ತಡಸ್-ಶಿವಮೊಗ್ಗ ರಸ್ತೆ ಗೊಂದಲದ ಗೂಡಾಗಿ ಸಂಚಾರಿಗಳು ನಿರಂತರ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ. ಈ ಬಗ್ಗೆ ಹಲವಾರು ವರ್ಷಗಳಿಂದ ಸಂಬಂಧಿಸಿದ ಇಲಾಖೆಗಳಿಗೆ ದೂರು ಬಂದಿದ್ದರೂ ತಾತ್ಕಾಲಿಕವಾಗಿ ಕೆಲ ಸಮಸ್ಯೆ ಬಗೆಹರಿಸಲಾಗಿತ್ತು. ಆದರೂ ಮತ್ತೆ ಅದೇ ಸಮಸ್ಯೆಗಳು ಕಾಣಿಸಿಕೊಂಡು ಇದಕ್ಕೆ ಪರಿಹಾರ ಇಲ್ಲವೇ ಎಂಬ ಸ್ಥಿತಿ ಉಂಟಾಗಿದೆ. ಆದರೆ, ಈಗ ಪೊಲೀಸ್ ಇಲಾಖೆ ಪ್ರಯಾಣಿಕರ, ಪಾದಚಾರಿಗಳ ಸುರಕ್ಷತೆಗೆ ಆದ್ಯತೆ ನೀಡಿ ಮೊದಲ ಕ್ರಮವಾಗಿ ಫುಟ್ಪಾತ್ ಮೇಲಿನ ಅಂಗಡಿಗಳ ತೆರವಿಗೆ ಕ್ರಮ ಜರುಗಿಸಿದೆ.
ಈಗಾಗಲೇ 85 ವ್ಯಾಪಾರಿಗಳಿಗೆ ನೋಟಿಸ್ ಕೂಡಾ ನೀಡಿದೆ. ಇನ್ನೂ ಕೇವಲ 15 ದಿನಗಳ ಅವಧಿಯಲ್ಲಿ ಫುಟ್ಪಾತ್ ಮೇಲಿರುವ ಎಲ್ಲ ಅಂಗಡಿಗಳ ತೆರವು ಖಚಿತ ಎನ್ನಲಾಗುತ್ತಿದೆ.
ಸಂಚಾರಕ್ಕೆ ಸಂಚಕಾರ: ಹಾನಗಲ್ಲ ಬಸ್ ನಿಲ್ದಾಣದ ಸುತ್ತಲಿನ ಪ್ರದೇಶ ಅತಿಯಾದ ಜನದಟ್ಟಣೆ ಹೊಂದಿದೆ. ಬಸ್ ನಿಲ್ದಾಣದ ಅನತಿ ದೂರದಲ್ಲಿಯೇ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳು, ಆಸ್ಪತೆಗಳು, ಶಿಕ್ಷಣ ಸಂಸ್ಥೆಗಳು, ಮುಖ್ಯ ಮಾರುಕಟ್ಟೆ ಇರುವುದರಿಂದ ಅತಿ ಹೆಚ್ಚು ಜನರ ಸಂಪರ್ಕದ ರಸ್ತೆಯಾಗಿದೆ. ಮೊದಲೇ ವಿಸ್ತಾರವಿಲ್ಲದ ರಸ್ತೆ ಅದರಲ್ಲೂ ರಸ್ತೆ ಅಗಲೀಕರಣ ಹಾಗೂ ಮರು ಡಾಂಬರೀಕರಣ ಕಾಮಗಾರಿ ವಿಳಂಬ, ಬಸ್ ನಿಲ್ದಾಣ ಕೆಡವಿ ಹೊಸ ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗಿ ಸ್ಥಗಿತವಾಗಿರುವುದು ಜನರಿಗೆ ರಸ್ತೆಯೇ ಬಸ್ ನಿಲ್ದಾಣವಾದಂತಾಗಿದೆ. ರಸ್ತೆ ತುಂಬಿ ನಿಲ್ಲುವ ಟೆಂಪೋಗಳು, ರಿಕ್ಷಾಗಳು, ಖಾಸಗಿ ಬಸ್ಗಳು ಇದೆಲ್ಲದರ ನಡುವೆ ಪಾದಚಾರಿಗಳ ಓಡಾಟಕ್ಕೆ ಅವಕಾಶವಿಲ್ಲದಂತೆ ಪಾದಚಾರಿ ರಸ್ತೆ ಮೇಲೆ ನಡೆಯುತ್ತಿರುವ ಹೂ-ಹಣ್ಣು ಸೇರಿದಂತೆ ವಿವಿಧ ವ್ಯಾಪಾರ, ಪಾದಚಾರಿಗಳ ಸಂಚಾರಕ್ಕೆ ಸಂಚಕಾರ ತಂದಿದೆ.
ಈ ಎಲ್ಲ ಸಮಸ್ಯೆಗಳಿಗೆ ಕಂಡೂ ಕಾಣದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಹಾರ ದಾರಿ ಸಿಗದೆ ಮೌನ ವಹಿಸಿದ್ದರು. ಜನರು ಹಿಡಿಶಾಪ ಹಾಕುತ್ತ ನಡೆದೆ ಇದ್ದರು. ಆದರೆ, ಈಗ ಪೊಲೀಸ್ ಇಲಾಖೆ ಮೊದಲ ಕ್ರಮವಾಗಿ ಫುಟ್ಪಾತ್ ಅಂಗಡಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಕಾಲಮಿತಿ ನೀಡಿದೆ. ಇದರೊಂದಿಗೆ ಖಾಸಗಿ ವಾಹನ ದಟ್ಟಣೆ ನಿಯಂತ್ರಿಸಲು, ರಿಕ್ಷಾಗಳು ರಸ್ತೆಯಲ್ಲೇ ನಿಲ್ಲಿಸುವುದನ್ನು ತಪ್ಪಿಸಲು ರಸ್ತೆ ಬದಿಯಲ್ಲಿ ಸಾಲು-ಸಾಲಾಗಿ ನಿಲ್ಲುವ ಬಾಡಿಗೆ ಸಂಚಾರ ವಾಹನಗಳ ಅವ್ಯವಸ್ಥೆ ನಿವಾರಿಸಲು ನಿಲ್ದಾಣದ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇದಕ್ಕಾಗಿ ಗಂಭೀರ ಚಿಂತನೆಯಂತೂ ಆರಂಭವಾಗಿದೆ. ಕಾರ್ಯರೂಪಕ್ಕೆ ತರುವುದು ಸುಲಭವಲ್ಲವಾದರೂ ಕಠಿಣ ಕ್ರಮವೂ ಅನಿವಾರ್ಯ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಪುರಸಭೆ, ಪೊಲೀಸ್, ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳ ಜಂಟಿ ಸಭೆ ನಡೆಸಿ ಕ್ಲೀನ್ ಸಿಟಿ, ಸುವ್ಯವಸ್ಥಿತ ನಗರ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಹಾನಗಲ್ಲ ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಳ್ಳಿ ತಿಳಿಸಿರುವುದು ಹೊಸ ಭರವಸೆ ಮೂಡುವಂತಾಗಿದೆ.
ಪೊಲೀಸ್ ಕಣ್ಗಾವಲು: ಹಾನಗಲ್ಲ ನಗರದಲ್ಲಿ ನಡೆಯುತ್ತಿರುವ ಮಟಕಾ, ಅನಧಿಕೃತ ಸಾರಾಯಿ ಮಾರಾಟ ಅಡ್ಡೆಗಳ ಮೇಲೆ ನಿಗಾ ಇಡಲಾಗಿದ್ದು, ಇವುಗಳನ್ನು ಸಂಪೂರ್ರ್ಣವಾಗಿ ನಿಲ್ಲಿಸಲು ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರ ದೂರುಗಳನ್ನು ಆಧರಿಸಿ ಅಗತ್ಯವಾಗಿ ಸಾರ್ವಜನಿಕರ ಸುವ್ಯವಸ್ಥೆ ಕದಡುವ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಬದ್ಧವಾಗಿದೆ.
ಇಷ್ಟರಲ್ಲೇ ಶಾಲೆ, ಕಾಲೇಜು ವಾತಾವರಣದಲ್ಲಿ ರ್ಯಾಗಿಂಗ್ ಸೇರಿದಂತೆ ನಡೆಯುವ ಕಿರುಕುಳಗಳಿಗೆ ಕಡಿವಾಣ ಹಾಕುವ ಭರವಸೆಯೂ ಮೂಡುತ್ತಿದೆ. ಇದಕ್ಕಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ವಿಚಾರವೂ ವ್ಯಕ್ತವಾಗಿದೆ.
ಸಿಸಿ ಕ್ಯಾಮೆರಾ: ಈಗಾಗಲೇ ರಸ್ತೆ ಹಾಗೂ ವೃತ್ತಗಳಲ್ಲಿ ಐದು ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅಪರಾಧ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಇದು ಸಹಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಾನಗಲ್ಲ ನಗರದಲ್ಲಿ ಹೊಟೇಲ್, ಬಾರ್ ಸೇರಿದಂತೆ ರಾತ್ರಿ 10-30 ಗಂಟೆಯೊಳಗಾಗಿ ಎಲ್ಲ ವ್ಯಾಪಾರ ಸ್ಥಗಿತಗೊಳ್ಳುತ್ತಿವೆ. ಈ ನಡುವೆ ಅಲ್ಲಲ್ಲಿ ನಡೆಯುತ್ತಿರುವ ಕಳ್ಳತನಗಳನ್ನು ತಡೆಯಲು ಪೊಲೀಸ್ ಇಲಾಖೆ ಸರ್ಪಗಾವಲು ಹಾಕಬೇಬೇಕಾಗಿದೆ.
ಒಟ್ಟಿನಲ್ಲಿ ಹಾನಗಲ್ಲ ನಗರದಲ್ಲಿರುವ ಗೊಂದಿ-ಶಿವಮೊಗ್ಗ ರಸ್ತೆಯ ಸಮಸ್ಯೆ ಪೂರ್ಣವಾಗಿ ಕೊನೆಗೊಳ್ಳಬೇಕಾಗಿದೆ. ಇದಕ್ಕೆ ಪುರಸಭೆ, ಕಂದಾಯ, ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆಗಳ ಕಟ್ಟುನಿಟ್ಟಿನ ಕ್ರಮಕ್ಕಾಗಿ ಸಾರ್ವಜನಿಕರು ಕಾಯುತ್ತಿರುವುದಂತೂ ಸತ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

